ಮೈಸೂರು: ಮೈಸೂರು ನನಗೆ ತಾಯಿ ಮನೆ ಅನುಭವ ನೀಡಿದೆ. ಇದೀಗ ಮಗಳು ತವರು ಮನೆ ಬಿಟ್ಟು ಹೋಗುವಂತೆ ಜಿಲ್ಲೆಯಿಂದ ನಿರ್ಗಮಿಸುತ್ತಿದ್ದೇನೆ ಎಂದು ರೋಹಿಣಿ ಸಿಂಧೂರಿ ಭಾವನಾತ್ಮಕ ನುಡಿಗಳನ್ನು ನುಡಿದಿದ್ದಾರೆ.


ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ, ವರ್ಗಾವಣೆ ಬಳಿಕ ಸಾಕಷ್ಟು ಜನ ತಮ್ಮ ಪ್ರೀತಿ ಮತ್ತು ಅಭಿಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಮಗಳಾಗಿ ಮೈಸೂರಿನ ಎಲ್ಲಾ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಉತ್ತಮ ಕೆಲಸ ಮಾಡುವ ಸಂದರ್ಭದಲ್ಲಿ ಈ ರೀತಿಯಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೂ ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗುತ್ತಿದ್ದೇನೆ ಎಂದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ರಾಜೀನಾಮೆ ನೀಡಿ ಕಣ್ಣೀರಿಟ್ಟ ಶಿಲ್ಪಾನಾಗ್

ಹೊಸದಾಗಿ ಬಂದ ಜಿಲ್ಲಾಧಿಕಾರಿಗೆ ಶುಭಾಶಯ ಹೇಳಲು ಬಂದಿದ್ದೆ. ಜಿಲ್ಲೆಯ ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಜಿಲ್ಲೆಯಲ್ಲಿ ಕೋವಿಡ್ ಕೆಲಸಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ. ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ಈ ವರ್ಗಾವಣೆ ಆಗಿದೆ. ಏನು ನಡೆದಿದೆ ಹೇಗೆ ನಡೆದಿದೆ ಅನ್ನೋದು ಎಲ್ಲರ ಮುಂದೆ ನಡೆದಿದೆ. ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಹತಾಶೆ ಹಾಗೂ ಅಭದ್ರತೆ, ಒತ್ತಾಸೆಗೆ ಈ ರೀತಿ ಮಾತನಾಡೋದು ಸರಿಯಲ್ಲ ಎಂದರು. ಇದನ್ನೂ ಓದಿ:ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್ ಇಬ್ಬರೂ ವರ್ಗಾವಣೆ- ಸರ್ಕಾರದಿಂದ ಆದೇಶ

ಯಾವುದೋ ಕಾರಣಕ್ಕೆ ಅಧಿಕಾರಿಯನ್ನು ತೆಗೆಸಿ ಮಿಷನ್ ಮುಗಿಯಿತು ಅಂದುಕೊಳ್ಳೋದು ತಪ್ಪು. ಈ ಥರ ಬೆಳವಣಿಗೆ ಯಾವ ಜಿಲ್ಲೆಯಲ್ಲೂ ಯಾವ ಸಂಸ್ಥೆಯಲ್ಲೂ ಆದರೂ ವ್ಯವಸ್ಥೆ ಸರಿ ಮಾಡಲು ಆಗುವುದಿಲ್ಲ ಎಂದು ಹೇಳಿದರು.

ರೋಹಿಣಿ ಸಿಂಧೂರಿ ಭೂ ಮಾಫೀಯಾಗೆ ಬಲಿಯಾದರು ಎಂಬ ಪತ್ರಕರ್ತರ ಪ್ರಶ್ನೆಗೆ ನೋ ಕಾಮೆಂಟ್, ಥ್ಯಾಂಕ್ಯೂ ಮೈಸೂರು ಎಂದು ಹೇಳಿ ರೋಹಿಣಿ ಸಿಂಧೂರಿ ನಿರ್ಗಮಿಸಿದರು.ಇದನ್ನೂ ಓದಿ: CSR ಫಂಡ್ ಲೆಕ್ಕ ನೀಡಿಲ್ಲ, ಕೋವಿಡ್ ಕೇರ್ ಸೆಂಟರ್ ತೆರೆದಿಲ್ಲ- ಶಿಲ್ಪಾ ನಾಗ್ ವಿರುದ್ಧ ಡಿಸಿ ರೋಹಿಣಿ ಸಿಂಧೂರಿ ಪ್ರತ್ಯಾರೋಪ

ವರ್ಗಾವಣೆ

ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಕಿತ್ತಾಟ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರ ಸಹ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಇದಾದ ಬೆನ್ನಲ್ಲೇ ಇದೀಗ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದ್ದು, ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಇ-ಗವರ್ನೆನ್ಸ್ ನಿರ್ದೇಶಕರನ್ನಾಗಿ ವರ್ಗಾವಣೆಗೊಳಿಸಲಾಗಿದೆ.

ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿದ್ದ ಬಗಾದಿ ಗೌತಮ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆಗೊಳಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಎಂಡಿ ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ಪಿ.ರಾಜೇಂದ್ರ ಚೋಳನ್ ಅವರಿಗೆ ಹೆಚ್ಚುವರಿಯಾಗಿ ಬೆಸ್ಕಾಂ ಎಂಡಿಯಾಗಿ ಜವಾಬ್ದಾರಿಯನ್ನು ನೀಡಲಾಗಿದೆ. ಬೆಸ್ಕಾಂ ಎಂಡಿ ಆಗಿದ್ದ ರಾಜೇಶ್ ಗೌಡ ಅವರನ್ನು ಬಿಡುಗಡೆಗೊಳಿಸಲಾಗಿದೆ.

The post ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ – ರೋಹಿಣಿ ಸಿಂಧೂರಿ appeared first on Public TV.

Source: publictv.in

Source link