ಮಗಳ ಮದುವೆಗೆ 100 ಕೆ.ಜಿ ಮೀನು ಗಿಫ್ಟ್ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್

ಮಗಳ ಮದುವೆಗೆ 100 ಕೆ.ಜಿ ಮೀನು ಗಿಫ್ಟ್ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್

01. ಜುಲೈ 25ರಂದು ಬಿಜೆಪಿ ಭೋಜನಕೂಟ

ಜುಲೈ 26ಕ್ಕೆ ರಾಜ್ಯ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಜುಲೈ 25ರಂದು ಬಿಜೆಪಿಯ ಎಲ್ಲಾ ಶಾಸಕರು ಹಾಗೂ ವಿಧಾನಪರಿಷತ್‌ನ ಸದಸ್ಯರಿಗೆ ಭೋಜನಕೂಟ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಭೋಜನಕೂಟ ಆಯೋಜನೆ ಮಾಡಲಾಗಿದೆ. ಎಲ್ಲಾ ಶಾಸಕರು ಹಾಗೂ ಪರಿಷತ್​ ಸದಸ್ಯರಿಗೆ ಕಾರ್ಕಳ ಶಾಸಕ ಸುನಿಲ್‌ಕುಮಾರ್​​ ಅಧಿಕೃತ ಆಹ್ವಾನ ನೀಡಿದ್ದಾರೆ. ಬೆಳಗ್ಗೆ ಸಿಎಂ ಯಡಿಯೂರಪ್ಪರ ಜೊತೆಗೆ ಸೌಹಾರ್ದ ಭೇಟಿಯಿದ್ದು, ಸಂಜೆ ಖಾಸಗಿ ಹೊಟೇಲ್‌ನಲ್ಲಿ ಭೋಜನಕೂಟ ಆಯೋಜನೆ ಮಾಡಲಾಗಿದೆ.

02. ಸಂಸತ್ತಿನಲ್ಲಿ ಮಾತಾಡಲು ಅವಕಾಶ ಕೇಳಿದ ಸುಮಲತಾ

ಅಕ್ರಮ ಗಣಿಗಾರಿಕೆಯಿಂದ ಕೆಆರ್​​​​ಎಸ್ ಜಲಾಶಯಕ್ಕೆ ಅಪಾಯ ಉಂಟಾಗುತ್ತಿದೆ, ಈ ಬಗ್ಗೆ ಸಂಸತ್ತಿನಲ್ಲಿ ಮಾತಾಡಲು ಅವಕಾಶ ನೀಡುವಂತೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮನವಿ ಸಲ್ಲಿಸಿದ್ದಾರೆ. ಕಳೆದ ಕೆಲದಿನಗಳಿಂದ ಕೆಆರ್​​​​ಎಸ್ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ರಾಜಕೀಯ ಜಟಾಪಟಿ ನಡೆಯುತ್ತಿದೆ. ಈ ಬೆನ್ನಲ್ಲೆ ಸ್ಪೀಕರ್​ಗೆ ಮನವಿ ಸಲ್ಲಿಸಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ಲದೆ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಜಲಾಶಯದ ಸುರಕ್ಷತೆ ಕಾಪಾಡುವಂತೆ ಸುಮಲತಾ ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಕೂಡ ಮಾಡಿದ್ದಾರೆ.

03. ಇಂದಿನಿಂದ ಕೆಂಪು ಕೋಟೆಗೆ ನೋ ಎಂಟ್ರಿ

ಇಂದಿನಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಮುಗಿಯುವವರೆಗೆ ಕೆಂಪು ಕೋಟೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಾಮಾನ್ಯವಾಗಿ, ಸ್ವಾತಂತ್ರ್ಯ ದಿನಾಚರಣೆಗೂ ಒಂದು ವಾರ ಮೊದಲೇ ಕೋಟೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ಮತ್ತು ಭದ್ರತಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಜುಲೈ 15 ರಿಂದಲೇ ಪ್ರವೇಶವನ್ನು ನಿರ್ಬಂಧಿಸಬೇಕೆಂದು ದೆಹಲಿ ಪೊಲೀಸರು ಜುಲೈ 12ರಂದು ಪತ್ರ ಬರೆದಿದ್ದ ನಂತರ ಇಂಥದ್ದೊಂದು ಸೂಚನೆ ಪ್ರಕಟಗೊಂಡಿದೆ.

04. ‘ಮನ್ ಕಿ ಬಾತ್’ನಿಂದ ₹ 30 ಕೋಟಿ ಆದಾಯ


ಕಳೆದ ಏಳು ವರ್ಷಗಳಿಂದ ರೇಡಿಯೋದಲ್ಲಿ ಪ್ರಸಾರವಾಗುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಸುಮಾರು 30 ಕೋಟಿ ರೂಪಾಯಿ ಆದಾಯ ಗಳಿಸಿದೆ. ರಾಜ್ಯಸಭೆಯಲ್ಲಿ ಲಿಖಿತ ಉತ್ತರದ ಮೂಲಕ ಮಾಹಿತಿ ನೀಡಿರುವ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರಾಂಗ ಸಚಿವ ಅನುರಾಗ್ ಠಾಕೂರ್, 2014ರಲ್ಲಿ ಆರಂಭವಾದ ಮನ್ ಕಿ ಬಾತ್ ಕಾರ್ಯಕ್ರಮ ಈವರೆಗೂ 78 ಸರಣಿಗಳಲ್ಲಿ ಪ್ರಸಾರವಾಗಿದೆ. ಈವರೆಗೆ ಸುಮಾರು 30 ಕೋಟಿ ರೂಪಾಯಿ ಆದಾಯ ಗಳಿಸಿದೆ ಅಂತಾ ತಿಳಿಸಿದ್ದಾರೆ.

05. ಜು. 27ರಂದು ಅಮೆರಿಕದ ವಿದೇಶಾಂಗ ಸಚಿವರ ಭೇಟಿ
ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್ ಜುಲೈ 27ರಂದು ಭಾರತಕ್ಕೆ ಬರಲಿದ್ದು, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ಬಗ್ಗೆ ಸರ್ಕಾರಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗುವ ಸಾಧ್ಯತೆಯಿದೆ. ಈ ವರ್ಷದ ಕೊನೆಯಲ್ಲಿ ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ಅಮೆರಿಕದ ನಾಯಕರ ಶೃಂಗಸಭೆ ವಾಷಿಂಗ್ಟನ್‌ನಲ್ಲಿ ನಡೆಯಲಿದ್ದು, ಆ ನಿಟ್ಟಿನಲ್ಲಿ ಸಿದ್ಧತೆಗಾಗಿ ಬ್ಲಿಂಕನ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.

06. ಫ್ರೆಂಚ್​ ಪ್ರಧಾನಿ ಮೇಲೂ ‘ಪೆಗಾಸಸ್​’ ನಿಗಾ

ಭಾರತದಲ್ಲಿ ರಾಜಕೀಯ ನಾಯಕರು ಸೇರಿದಂತೆ ಹಲವು ಗಣ್ಯರ ಮೊಬೈಲ್​ ಮೇಲೆ ಪೆಗಾಸಸ್ ಸ್ಪೈವೇರ್ ಮೂಲಕ ಕಣ್ಗಾವಲಿಡಲಾಗಿತ್ತು ಅನ್ನೋ ಸುದ್ದಿ ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿದೆ. ಈ ನಡುವೆ ಫ್ರೆಂಚ್​ ಪ್ರಧಾನಿ ಇಮ್ಯಾನುಯೆಲ್ ಮ್ಯಾಕ್ರೋನ್​ ಅವರ ಮೊಬೈಲನ್ನು ಪೆಗಾಸಸ್​​ ಸ್ಪೈವೇರ್​ ಕೇಸ್​ನಲ್ಲಿ ಟಾರ್ಗೆಟ್​ ಮಾಡಲಾಗಿತ್ತು ಅನ್ನೋದನ್ನ ಫ್ರಾನ್ಸ್​ನ​ ದಿನಪತ್ರಿಯೊಂದು ವರದಿ ಮಾಡಿದೆ. ಇದು ಮತ್ತೊಂದಿಷ್ಟು ಚರ್ಚೆಗೂ ಕಾರಣವಾಗಿದೆ.

07. ಮಗಳ ಮದುವೆಗೆ ತರಾವರಿ ಗಿಫ್ಟ್​

ಆಂಧ್ರಪ್ರದೇಶದ ರಾಮಕೃಷ್ಣ ಎಂಬ ವ್ಯಕ್ತಿ ಹೊಸದಾಗಿ ಮದುವೆಯಾದ ತನ್ನ ಮಗಳಿಗೆ ವಿಚಿತ್ರ ರೀತಿಯಲ್ಲಿ ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾದ ತಮ್ಮ ಮಗಳ ಮನೆಗೆ ಇವರು ಬರೋಬ್ಬರಿ 100 ಕೆಜಿ ಮೀನು, 100 ಕೆಜಿ ತರಕಾರಿ, 250 ಕೆಜಿ ಸೀಗಡಿ ಹಾಗೂ 250 ಕೆಜಿ ಕಿರಾಣಿ ಸಾಮಗ್ರಿಗಳನ್ನ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ, 250 ಜಾರ್​ಗಳಷ್ಟು ಉಪ್ಪಿನಕಾಯಿ, 50 ಕೇಜಿ ಚಿಕನ್​, 10 ಕುರಿಗಳು ಮತ್ತು 250 ಕೆಜಿ ಸಿಹಿತಿಂಡಿಗಳನ್ನ ಕಳಿಸಿದ್ದಾರೆ.

08. ಇದು ‘ಸೊಳ್ಳೆಗಳ ಸುಂಟರಗಾಳಿ’

ರಷ್ಯಾದಲ್ಲಿ ಬಿರುಗಾಳಿ, ಸುಂಟರಗಾಳಿಯನ್ನೂ ಮೀರಿಸೋ ವೇಗದಲ್ಲಿ ಸೊಳ್ಳೆಗಳ ಸುಂಟರಗಾಳಿ ಬೀಸಿದೆ. ರಸ್ತೆಯೊಂದರಲ್ಲಿ ಹಿಂಡುಗಟ್ಟಲೇ ಸೊಳ್ಳೆಗಳು ಹಾರಾಡುತ್ತಿದ್ದು ವಾಹನ ಸವಾರರರಿಗೆ ಅಚ್ಚರಿ ಮೂಡಿಸಿವೆ. ಚಾಲಕರೊಬ್ರು ರಷ್ಯಾದಲ್ಲಿ ಈ ಸೊಳ್ಳೆಗಳ ಸುಂಟರಗಾಳಿ ದೃಶ್ಯವನ್ನ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯವನ್ನು ಕಂಡ ನೆಟ್ಟಿಗರು ಬಗೆಬಗೆ ಚರ್ಚೆಯಲ್ಲಿ ತೊಡಗಿದ್ದಾರೆ. ಜೊತೆಗೆ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ. ಜುಲೈ 17ರಂದು ಪೂರ್ವ ರಷ್ಯಾದ ಉಸ್ಟ್-ಕಾಮ್ಚಾಟ್ಸ್ಕ್ ಗ್ರಾಮದ ಬಳಿ ಈ ದೃಶ್ಯವನ್ನ ಸೆರೆಹಿಡಿಯಲಾಗಿದೆ.

09. ರೋಚಕ ಜಯ.. ಸರಣಿ ಕೈ ವಶ


ದೀಪಕ್ ಚಹಾರ್ ಹಾಗೂ ಸೂರ್ಯಕುಮಾರ್ ಭರ್ಜರಿ ಆಟದ ಪರಿಣಾಮ ಭಾರತ ಲಂಕಾ ವಿರುದ್ಧದ 2 ನೇ ಏಕದಿನ ಪಂದ್ಯವನ್ನು ಗೆದ್ದಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್ ಗಳಲ್ಲಿ 275 ರನ್ ಗಳನ್ನು ಗಳಿಸಿ ಭಾರತದ ಗೆಲುವಿಗೆ 276 ರನ್​ಗಳ ಗುರಿ ನೀಡಿತ್ತು. ಕಳೆದ ಪಂದ್ಯದಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದ್ದ ಪೃಥ್ವಿ ಶಾ ಹಾಗೂ ಇಶಾನ್​ ಕಿಶಾನ್ ಈ ಪಂದ್ಯದಲ್ಲಿ ಬೇಗನೇ ವಿಕೆಟ್​ ಒಪ್ಪಿಸಿದ್ರು. ಧವನ್ ಹಾಗೂ ಮನೀಷ್ ಪಾಂಡೆ ಕೂಡ ಹೆಚ್ಚು ಸಮಯ ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಈ ವೇಳೆ ಅರ್ಧ ಶತಕ ಸಿಡಿಸಿದ ಸೂರ್ಯ ಕುಮಾರ್ ಯಾದವ್ ತಂಡಕ್ಕೆ ಆಸರೆಯಾದ್ರು. ಸೂರ್ಯ ಕುಮಾರ್ ಔಟ್​ ಬಳಿಕ ತಂಡ ಸೋಲೋ ಸಾಧ್ಯತೆ ಸೃಷ್ಟಿಯಾಗಿತ್ತು. ಆದ್ರೆ ಸಮಯೋಚಿತ 69 ರನ್​ಗಳಿಸಿದ ದೀಪಕ್ ಚಾಹರ್ ಟೀಮ್ ಇಂಡಿಯಾಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ. ಈ ಮೂಲಕ ಭಾರತ ಸರಣಿಯನ್ನೂ ಗೆದ್ದುಕೊಂಡಿದೆ.

10. ದ್ರಾವಿಡ್​ರನ್ನ ಹಾಡಿ ಹೊಗಳಿದ ದೀಪಕ್

ಇನ್ನು, ಈ ಪಂದ್ಯದಲ್ಲಿ ದೀಪಕ್​​ ಚಹರ್, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಅದರಲ್ಲೂ ಬ್ಯಾಟಿಂಗ್​ನಲ್ಲಿ ಯಾರೂ ನಿರೀಕ್ಷಿಸಿರದ ಪ್ರದರ್ಶನ ನೀಡಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪಂದ್ಯದ ಬಳಿಕ ಮಾಡನಾಡಿದ ದೀಪಕ್​​ ಚಹರ್, ಕೋಚ್​ ರಾಹುಲ್​ ದ್ರಾವಿಡ್​ರನ್ನ ಹಾಡಿ ಹೊಗಳಿದ್ದಾರೆ. ದ್ರಾವಿಡ್​ ಅವರು ನನ್ನ ಬ್ಯಾಟಿಂಗ್​ ಮೇಲಿಟ್ಟ ನಂಬಿಕೆಯಿಂದಲೇ ಮ್ಯಾಚ್​ ವಿನ್ನಿಂಗ್​ ಪರ್ಫಾನೆನ್ಸ್​ ನೀಡಲು ಸಾಧ್ಯವಾಗಿದೆ. ದೇಶಕ್ಕಾಗಿ ಪಂದ್ಯವನ್ನು ಗೆಲ್ಲಲು ಇದಕ್ಕಿಂತ ಉತ್ತಮ ದಾರಿ ಇಲ್ಲ. ರಾಹುಲ್ ಸರ್ ನನಗೆ ಎಲ್ಲಾ ಬಾಲ್​ಗಳನ್ನು ಆಡಲು ಹೇಳಿದರು. ಹೀಗಾಗಿಯೇ ನನ್ನಿಂದ ಉತ್ತಮ ಪರ್ಫಾಮೆನ್ಸ್ ಹೊರಬರಲು ಸಾಧ್ಯವಾಯಿತು ಎಂದಿದ್ದಾರೆ.

The post ಮಗಳ ಮದುವೆಗೆ 100 ಕೆ.ಜಿ ಮೀನು ಗಿಫ್ಟ್ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್ appeared first on News First Kannada.

Source: newsfirstlive.com

Source link