ವಿರಾಟ್​​ ಕೊಹ್ಲಿ ಎಂದಾಕ್ಷಣ ಪಂದ್ಯದ ವೇಳೆ ಅಭಿಮಾನಿಗಳಿಗೆ ಮಿಡಲ್​ ಫಿಂಗರ್​ ತೋರಿಸಿದ ವಿವಾದ, ಐಪಿಎಲ್​ ಪಂದ್ಯದ ವೇಳೆ ಎದುರಾಳಿ ಗೌತಮ್​ ಗಂಭೀರ್​​ ಜೊತೆಗಿನ ವಾಗ್ವಾದ, ಕೋಚ್​​ ಅನಿಲ್​ ಕುಂಬ್ಳೆ ಜೊತೆಗಿನ ವಿವಾದ..!! ಹೀಗೆ ಹಲವು ಕಾಂಟ್ರವರ್ಸಿಯಲ್​ ಘಟನೆಗಳೇ ಕಣ್ಣೆದುರು ಬರ್ತವೆ. ಮೈದಾನದಲ್ಲಿ ಆ್ಯರೋಗೆಂಟ್​​​ ಆಗಿಯೇ ವರ್ತಿಸೋದ್ರಿಂದ ಅಗ್ರೆಸ್ಸೀವ್​ ಅನ್ನೋ ಹಣೆ ಪಟ್ಟಿ ಪಡೆದಿರೋ ಕೊಹ್ಲಿ , ಇದೀಗ ಮಾನವೀಯತೆ ಮೆರೆದು ಸುದ್ದಿಯಾಗಿದ್ದಾರೆ.

ಸಂಕಷ್ಟದ ಸಮಯದಲ್ಲಿ ಪುಟ್ಟ ಕಂದನ ಕೈ ಹಿಡಿದ ಕೊಹ್ಲಿ ದಂಪತಿ..!
ಬರೋಬ್ಬರಿ 16 ಕೋಟಿಯ ಚಿಕಿತ್ಸೆ ಆಯ್ತು ಸಲೀಸಾಗಿ..!

ಹೌದು..! ಅದು ಒಂದಲ್ಲ.. ಎರಡಲ್ಲ ಬರೋಬ್ಬರಿ 16 ಕೋಟಿ ರೂಪಾಯಿಗಳ ದುಬಾರಿ ಚಿಕಿತ್ಸೆ. ಖಾಯಿಲೆಯಿಂದ ಬಳಲುತ್ತಿದ್ದದ್ದು, ಎರಡೂವರೆ ವರ್ಷದ ಪುಟ್ಟ ಕಂದಮ್ಮ. ಮಗುವಿನ ಪ್ರಾಣ ಉಳಿಸಲು ಈ ಚಿಕಿತ್ಸೆ ಅನಿವಾರ್ಯ ಎಂದು ಡಾಕ್ಟರ್​ ಹೇಳಿದಾಗ, ದಿಕ್ಕೇ ತೋಚದ ಪೋಷಕರಿಗೆ ಸಹಾಯಹಸ್ತ ಚಾಚಿದ್ದು, ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ.

ಅಯಾನ್ಷ್ ಗುಪ್ತಾ ಎಂಬ ಪುಟ್ಟ ಮಗು (spinal muscular atrophy)ಬೆನ್ನುಮೂಳೆಯ ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿತ್ತು. ಈ ಖಾಯಿಲೆಯ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂಪಾಯಿ ಮೌಲ್ಯದ ಔಷಧಿಯ ಅಗತ್ಯವಿತ್ತು. ಮಗುವಿನ ಪೋಷಕರು ಹಣ ಸಂಗ್ರಹಣೆಗೆ ಎಷ್ಟೇ ಹೋರಾಡಿದರೂ, ಅದು ಸಾಧ್ಯವಾಗಿರಲಿಲ್ಲ. ಆಗ ನೆರವಿಗೆ ಧಾವಿಸಿದ ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ, ಆನ್​ಲೈನ್​ ಅಭಿಯಾನದ ಮೂಲಕ ಫಂಡ್​ ರೈಸಿಂಗ್​ ಮಾಡಿ ಮಗುವಿನ ಪ್ರಾಣ ಉಳಿಸಿದ್ದಾರೆ.

ನೀವು ಮಾಡಿದ ಸಹಾಯಕ್ಕೆ ಸದಾ ಋಣಿ..!
‘ವಿರಾಟ್​​ ಕೊಹ್ಲಿ & ಅನುಷ್ಕಾ ಶರ್ಮಾ ನಿಮ್ಮನ್ನು ಅಭಿಮಾನಿಗಳಾಗಿ ಎಂದಿಗೂ ಪ್ರೀತಿಸುತ್ತೇವೆ. ಆದ್ರೆ, ಅಯಾನ್ಷ್ ಮತ್ತು ಈ ಅಭಿಯಾನಕ್ಕೆ ನೀವು ಮಾಡಿದ ಸಹಾಯ ನಮ್ಮ ಉಹೆಗೂ ಮೀರಿದ್ದಾಗಿದೆ. ನಿಮ್ಮ ಉದಾರತೆಗೆ ಧನ್ಯವಾದ. ನೀವು ಜೀವನದ ಪಂದ್ಯವನ್ನ ಸಿಕ್ಸ್​​ನೊಂದಿಗೆ ಗೆಲ್ಲುವಂತೆ ಮಾಡಿದ್ದೀರಿ. ನೀವು ಮಾಡಿದ ಸಹಾಯಕ್ಕೆ ನಾವು ಸದಾ ಋಣಿ’
-ಅಯಾನ್ಷ್ ಗುಪ್ತಾ ಪೋಷಕರು

ಮಾಜಿ ಆಟಗಾರ್ತಿಯ ತಾಯಿಯ ಚಿಕಿತ್ಸೆಗೂ ಕೊಹ್ಲಿ ದಂಪತಿ ನೆರವು..!
2 ವಾರಗಳ ಕಾಲ ಕೊರೊನಾ ಸೋಂಕಿಗೆ ತುತ್ತಾಗಿ ಹೋರಾಟ ನಡೆಸಿ ಚಿಕಿತ್ಸೆ ಫಲಕಾರಿಯಾಗದೆ ಇತ್ತೀಚೆಗೆ ಮೃತರಾದ ಮಾಜಿ ಕ್ರಿಕೆಟ್ ಆಟಗಾರ್ತಿ ಶ್ರಾವಂತಿ ನಾಯ್ಡು ಅವರ ತಾಯಿಯ ಚಿಕಿತ್ಸೆಗೂ ಕೊಹ್ಲಿ ನೆರವಾಗಿದ್ರು. ಅಂದು ಚಿಕಿತ್ಸೆಗೆ ಹಣ ಸಿಗದೇ ಮಾಜಿ ಕ್ರಿಕೆಟರ್​ ಅಸಹಾಯಕರಾಗಿದ್ದಾಗ ನೆರವಿನ ಹಸ್ತ ಚಾಚಿದ್ದ ವಿರಾಟ್​​, 6.67 ಲಕ್ಷ ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದರು.

ಇಷ್ಟೇ ಅಲ್ಲ..! ಭಾರತದಲ್ಲಿ 2ನೇ ಅಲೆಯ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಹೊತ್ತಿನಲ್ಲಿ ಹಲವು ಸಂಘ ಸಂಸ್ಥೆಗಳು, ದಾನಿಗಳು ಸಂಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿವೆ. ಈ ವಿಚಾರದಲ್ಲೂ ವಿರಾಟ್​​ ಕೊಹ್ಲಿ ದಂಪತಿ, ಹಿಂದೆ ಬಿದ್ದಿಲ್ಲ. 2ನೇ ಅಲೆಯ ಪ್ರಕರಣಗಳು ಏರುತ್ತಿರುವ ಹೊತ್ತಿನಲ್ಲಿ ಆಕ್ಸಿಜನ್​ ಸಿಲೆಂಡರ್​​ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ಬರೋಬ್ಬರಿ 2 ಕೋಟಿ ರೂಪಾಯಿಗಳನ್ನ ದೇಣಿಗೆಯಾಗಿ ನೀಡಿದ್ರು. ಇದಲ್ಲದೇ #IN THIS TOGETHER ಎಂದು ಅಭಿಯಾನ ಆರಂಭಿಸಿ, 11 ಕೋಟಿಗೂ ಹೆಚ್ಚು ಮೊತ್ತವನ್ನ ಸಂಗ್ರಹಿಸಿ ದೇಣಿಗೆಯಾಗಿ ನೀಡಿದ್ರು. ಈ ಬಾರಿ ಮಾತ್ರವಲ್ಲ..! ಮೊದಲ ಭಾರಿ ದೇಶಕ್ಕೆ ಕೊರೊನಾ ಮಹಾಮಾರಿ ಅಪ್ಪಳಿಸಿದಾಗ್ಲೂ ಕೊಹ್ಲಿ ದಂಪತಿ ಧನ ಸಹಾಯ ಮಾಡಿದ್ರು.

ಇಷ್ಟೇ ಅಲ್ಲ..! 2013ರಲ್ಲಿ ವಿರಾಟ್​​ ಕೊಹ್ಲಿ ಫೌಂಡೇಶನ್​ ಅನ್ನ ಆರಂಭಿಸಿರುವ ಕೊಹ್ಲಿ ಬಡ ಮಕ್ಕಳ ಕನಸನ್ನ ನನಸಾಗಿಸುವತ್ತ ಹೆಚ್ಚಿ ಇಟ್ಟಿದ್ದಾರೆ. ಕಡಿಮೆ ಸವಲತ್ತಿನ ಮಕ್ಕಳಿಗೆ ಶಿಕ್ಷಣದೊಂದಿಗೆ ಹಲವು ಕ್ರೀಡೆಗಳಲ್ಲೂ ಭಾಗವಹಿಸಲು ಅವಕಾಶ ನೀಡೋದು ಈ ಫೌಂಡೇಶನ್​ನ ಉದ್ದೇಶ. ಈ ಫೌಂಡೇಶನ್​ನಡಿ ಆಥ್ಲೇಟಿಕ್​ ಡೆವಲೆಪ್​ಮೆಂಟ್​​​ ಪ್ರೋಗ್ರಾಮ್​ ಅನ್ನೋ ಕಾರ್ಯಕ್ರಮವನ್ನ ಆರಂಭಿಸಿರುವ ಕೊಹ್ಲಿ, ಹಲ ಯುವ ಅಥ್ಲೀಟ್​​ಗಳಿಗೆ ನೆರವಾಗಿದ್ದಾರೆ. ಟೆಬಲ್​ ಟೆನ್ನಿಸ್​​ ಸ್ಟಾರ್​ ಸ್ವಸ್ತಿಕಾ ಘೋಷ್​, ಗಾಲ್ಫರ್​​ ಆದಿಲ್​ ಬೇಡಿ, ಸ್ಪಿಮ್ಮರ್​​ ಶಿವಾನಿ ಕಟಾರಿಯಾ ಮುಂತಾದವರು ಪ್ರಮುಖರು.

ಜೊತೆಗೆ 2016ರಲ್ಲಿ ಎಬಿಐಎಲ್​ ಎಂಬ ಫೌಂಡೇಶನ್​ನೊಂದಿಗೆ ಕೈ ಜೋಡಿಸಿರುವ ಕೊಹ್ಲಿ, ಪುಣೆಯಲ್ಲಿರುವ ಅಬಲಾಮಯ ಎಂಬ ವೃದ್ಧಾಶ್ರಮದ ಬೆನ್ನುಲುಬಾಗಿ ನಿಂತಿದ್ದಾರೆ. 2017ರ ಐಪಿಎಲ್​ ವೇಳೆ ಈ ಆಶ್ರಮಕ್ಕೆ ಕೊಹ್ಲಿ ಸರ್​​​ಪ್ರೈಸ್​​ ವಿಸಿಟ್​ ಕೊಟ್ಟಿದ್ದನ್ನೂ ನಾವಿಲ್ಲಿ ಸ್ಮರಿಸಬಹುದು.

ಟೀಮ್​ ಇಂಡಿಯಾದಲ್ಲಿ ನಾಯಕನಾಗಿ ಯುವ ಆಟಗಾರರ ಬೆಂಬಲಕ್ಕೆ ನಿಂತಿರುವ ಆಫ್​ ದ ಫೀಲ್ಡ್​ನಲ್ಲಿ ಅಭಿಮಾನಿಗಳ, ಜನತೆಯ ಬೆಂಬಲಕ್ಕೆ ನಿಂತಿದ್ದಾರೆ. ಪ್ರತ್ಯೇಕ ಹಾಗೂ ಪರೋಕ್ಷವಾಗಿ ಹಲವರ ಪಾಲಿನ ಕರುಣಾಮಯಿಯಾಗಿರುವ ಕೊಹ್ಲಿಯ ಈ ನಿಸ್ವಾರ್ಥ ಸೇವೆ ಮುಂದೆಯೂ ಹೀಗೆ ಮುಂದುವರೆಯಲಿ ಅನ್ನೋದೇ ನಮ್ಮ ಆಶಯ.

The post ಮಗುವಿನ ಚಿಕಿತ್ಸೆಗಾಗಿ ಬರೋಬ್ಬರಿ ₹16 ಕೋಟಿ ಒದಗಿಸಿ ಕೊಟ್ಟ ವಿರಾಟ್-ಅನುಷ್ಕಾ ದಂಪತಿ appeared first on News First Kannada.

Source: newsfirstlive.com

Source link