ಮಗ ಕಾಣೆ ಎಂದು ದೂರು ನೀಡಿದ ನೀಚ ತಾಯಿಯ ಬಣ್ಣ ಬಯಲಿಗೆಳೆದ ಪೊಲೀಸರು; ನಾಲ್ವರು ಅರೆಸ್ಟ್ | Crime News Bagalakote hindrance to immoral relationship mother killed her son Four accused arrested


ಮಗ ನಾಪತ್ತೆಯಾಗಿದ್ದಾನೆ ಎಂದು ತಾಯಿ ನೀಡಿದ್ದ ದೂರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಮಗನನ್ನೇ ತಾಯಿ ತನ್ನ ಇಬ್ಬರು ಅಳಿಯಂದಿರು ಮತ್ತು ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿರುವುದು ಬಹಿರಂಗಗೊಂಡಿದೆ.

ಮಗ ಕಾಣೆ ಎಂದು ದೂರು ನೀಡಿದ ನೀಚ ತಾಯಿಯ ಬಣ್ಣ ಬಯಲಿಗೆಳೆದ ಪೊಲೀಸರು; ನಾಲ್ವರು ಅರೆಸ್ಟ್

ಸಾಂಧರ್ಬಿಕ ಚಿತ್ರ

ಬಾಗಲಕೋಟೆ: ಚೀಲದಲ್ಲಿ ಶವ ಪತ್ತೆಯಾಗುವ ಮೂಲಕ ಮಗ ನಾಪತ್ತೆಯಾಗಿದ್ದಾನೆ ಎಂದು ತಾಯಿ ದೂರು ನೀಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆಸ್ತಿ ಕೇಳಿರುವುದು, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ದತ್ತುಮಗನನ್ನೇ ತಾಯಿ ಮತ್ತು ಅಳಿಯಂದಿರು ಕೊಲೆ ಮಾಡಿರುವ ಮಾಹಿತಿ ಪೊಲೀಸ್ ತನಿಖೆಯಿಂದ ಬಯಲಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ನಾಗಣಾಪುರ ಗ್ರಾಮದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ.

ತನ್ನ ಮಗ ವಸಂತ ಮಾಲಿಂಗಪ್ಪ ಕುರಬಳ್ಳಿ(೨೪) ಕಾಣೆಯಾಗಿದ್ದಾನೆ ಎಂದು ತಾಯಿ ಕಮಲವ್ವ ಜುಲೈ ೬ ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ತನಿಖೆಗೆ ಇಳಿದ ಪೊಲೀಸರು ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಗ ಆಸ್ತಿ ಕೇಳಿರುವುದು ಮತ್ತು ಅನೈತಿಕ ಸಂಬಂಧಕ್ಕೆ ಆತ ಅಡ್ಡಿಯಾಗಿದ್ದೇ ಕೊಲೆ ನಡೆಸಲು ಕಾರಣ ಎಂಬುದು ತಿಳಿದುಬಂದಿದೆ.

ಕತ್ತು, ಮರ್ಮಾಂಗ ಹಿಸುಕಿ ಕೊಲೆ

ಆಸ್ತಿ ಕೇಳಿದ್ದಲ್ಲದೆ, ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿ ಬರುತ್ತಿದ್ದಾನೆ ಎಂದು ಕಮಲವ್ವ ತನ್ನ ಇಬ್ಬರು ಅಳಿಯಂದರಾದ ಭೀಮಪ್ಪ ಮಳಲಿ, ಸಿಂಧೂರ ಬೀರಣ್ಣವರ ಮತ್ತು ಆಕೆಯ ಪ್ರಿಯಕರ ನಿಂಗಪ್ಪ ಸೇರಿ ವಸಂತನ ಎದೆಗೆ ಕಲ್ಲು ಎತ್ತಿಹಾಕಿ, ಕತ್ತು ಮತ್ತು ಮರ್ಮಾಂಗವನ್ನೇ ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಚೀಲದಲ್ಲಿ ತುಂಬಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಾಳ ಸೀಮೆಯ ಕಾಲುವೆಯಲ್ಲಿ ಎಸೆದುಹೋಗಿದ್ದರು. ಈ ಘಟನೆ ನಡೆದಿದ್ದು ಜೂ.19ರಂದು. ಆದರೆ ಜು.6ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿದೆ.

ಅನುಮಾನಗೊಂಡ ಪೊಲೀಸರು ಕಮಲವ್ವ ಮತ್ತು ಇತರೆ ಮೂವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆರೋಪಿಗಳ ಬಣ್ಣ ಬಯಲಾಗಿದೆ. ಕಮಲವ್ವಗೆ ಮಗಳ ಮಾವನ(ಮಗಳ ಗಂಡನ ತಂದೆ) ನಿಂಗಪ್ಪ ಜೊತೆಗೆ ಅನೈತಿಕ ಸಂಬಂಧ ಇರುವುದು ತಿಳಿದುಬಂದಿದೆ. ಸದ್ಯ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸಹಿತ ಗಾಂಜಾ ವಶಕ್ಕೆ

ಕೋಲಾರ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ‌ಯ ಸಹಿತ ಸುಮಾರು 10.50 ಲಕ್ಷ ಮೌಲ್ಯದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ವಲಗೇರನಹಳ್ಳಿಯಲ್ಲಿ ಬಳಿ ನಡೆದಿದೆ. ಗಾಂಜಾ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಶ್ರೀನಿವಾಸಪುರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ತಡೆದಿದ್ದಾರೆ. ಪರಿಶೀಲನೆ ವೇಳೆ ಗಾಂಜಾ ಪತ್ತೆಯಾಗಿದ ಹಿನ್ನೆಲೆ ಆರೋಪಿಯನ್ನು ಬಂಧಿಸಲಾಗಿದೆ. ಕೋಲಾರ ನಗರದ ನೂರ್ ಪಾಷ್ ಬಂಧಿತ ಆರೋಪಿಯಾಗಿದ್ದು, ಈತನಿಂದ 10.50 ಲಕ್ಷ ಮೌಲ್ಯದ 21 ಕೆಜಿ ಗಾಂಜಾ ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *