ಮಠಗಳಿಂದಲೂ ಕಮಿಷನ್ ಕೇಳುವ ಸರ್ಕಾರ: ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಅರೋಪ | BJP Govt Demands Commission from Mutt and Swamiji Alleges Dingaleshwara Swamiji of Shirahatti Fakireshwara Mutt


ಮಠಗಳಿಂದಲೂ ಕಮಿಷನ್ ಕೇಳುವ ಸರ್ಕಾರ: ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಅರೋಪ

ದಿಂಗಾಲೇಶ್ವರ ಸ್ವಾಮೀಜಿ

ಬಾಗಲಕೋಟೆ: ‘ಕರ್ನಾಟಕ ಸರ್ಕಾರವು ಕೇವಲ ಗುತ್ತಿಗೆದಾರರಿಂದ ಮಾತ್ರವಲ್ಲ, ಮಠಾಧೀಶರಿಂದಲೂ ಪರ್ಸೆಂಟೇಜ್ ಕೇಳುತ್ತಿದೆ. ಮಠಗಳು ಶೇ 30ರ ಪರ್ಸೆಂಟೇಜ್ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿದೆ’ ಎಂದು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಾಳಗಂಡಿಯಲ್ಲಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪ ಮಾಡಿದರು. ಎಸ್​.ಆರ್.ಪಾಟೀಲ್ ನೇತೃತ್ವದ ಟ್ರ್ಯಾಕ್ಟರ್​ ಱಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 30 ಪರ್ಸೆಂಟ್​ ಹಣ ಕೊಟ್ಟರೆ ಮಾತ್ರ ಮಠಗಳ ಕಟ್ಟಡ ಶುರುವಾಗುತ್ತವೆ. ಕಮಿಷನ್​ ಬಗ್ಗೆ ಅಧಿಕಾರಿಗಳೇ ಬಂದು ಹೇಳುತ್ತಾರೆ. ನವದೆಹಲಿ ಅಥವಾ ಬೆಂಗಳೂರಿನಲ್ಲಿ ಐಸ್ ಕ್ರೀಂ ಬಿಡುಗಡೆಯಾದರೆ ಉತ್ತರ ಕರ್ನಾಟಕಕ್ಕೆ ಬರುವುದು ಬರೀ ಕಡ್ಡಿ ಮಾತ್ರ ಎಂದು ಐಸ್ ಕ್ರೀಂ ಕಥೆಯ ಮೂಲಕ ಭ್ರಷ್ಟಾಚಾರದ ಮುಖ ಬಚ್ಚಿಟ್ಟರು. ಸ್ವಾಮೀಜಿ ನೀಡಿದ ಮಠಗಳ ಪರ್ಸೆಂಟೇಜ್ ವ್ಯವಹಾರದ ಹೇಳಿಕೆಗೆ ರಾಜ್ಯದ ಹಲವು ರಾಜಕಾರಿಣಿಗಳು ಪ್ರತಿಕ್ರಿಯಿಸಿದ್ದಾರೆ.

ಸ್ವಾಮಿಜಿಗೂ ಭ್ರಷ್ಟಾಚಾರದ ಬಿಸಿ: ಸತೀಶ್ ಜಾರಕಿಹೊಳಿ
ದಾವಣಗೆರೆ: ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಕುರಿತು ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕಮಿಷನ್ ಪಿಡುಗು ಸ್ವಾಮೀಜಿಗಳನ್ನು ಸಹ ಬಿಟ್ಟಿಲ್ಲ ಎನ್ನುವುದು ವಿಷಾದನೀಯ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದರು. ಮಹಾನಾಯಕ ವಿಚಾರವಾಗಿ ಸೋದರ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಬಾಂಬ್ ಸ್ಪೋಟ ಮಾಡಬೇಕು. ನಮ್ಮ ಕಡೆ ಬಾಂಬ್ ಇಲ್ಲ. ಸ್ಪೋಟಕ್ಕಾಗಿ ಬಹುತೇಕರು ಗೋಕಾಕದಲ್ಲಿ ಕಾಯುತ್ತಿದ್ದಾರೆ ಎಂದರು. ಇನ್ನೆಷ್ಟು ಸಚಿವರು ಕಮಿಷನ್ ವಿಚಾರಕ್ಕೆ ಸ್ಥಾನ ಕಳೆದುಕೊಳ್ಳಲಿದ್ದಾರೋ ಗೊತ್ತಿಲ್ಲ. ಹಲಾಲ್ ವಿಚಾರವು ಇನ್ನೆಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತದೆಯೋ ನೋಡಬೇಕು. ಈಶ್ವರಪ್ಪ ಕೇವಲ ರಾಜೀನಾಮೆ ಕೊಟ್ಟರೇ ಸಾಲದು. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಬಣ್ಣ ಬದಲಿಸುವ ದಿಂಗಾಲೇಶ್ವರ: ಬಿ.ಸಿ.ಪಾಟೀಲ್
ಚಿತ್ರದುರ್ಗದಲ್ಲಿ ಮಾತನಾಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಲಂಚ ನೀಡುವ ಮೊದಲು ಶ್ರೀಗಳು ಪ್ರತಿಭಟನೆ ನಡೆಸಬೇಕಿತ್ತು. ಈಗ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೋಗಿ ಅವರಂತೆ ಮಾತಾಡಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಯಂತೆ ಕಾಂಗ್ರೆಸ್ ಭಕ್ತರನ್ನು ಮೆಚ್ಚಿಸುವ ಉದ್ದೇಶದಿಂದ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದ್ದಾರೆ. ಈ ಹಿಂದೆ ಇದೇ ಸ್ವಾಮೀಜಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಊಸರವಳ್ಳಿಯಂತೆ ಕಾಲಕ್ಕೆ ಒಂದೊಂದು ಬಣ್ಣ ಬದಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಧರಣಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ವಿಚಾರಣೆ ಆಗದೆ ಯಾರನ್ನೂ ಬಂಧಿಸಲು ಆಗುವುದಿಲ್ಲ. ಈ ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕೆ.ಜೆ.ಜಾರ್ಜ್ ಅವರನ್ನು ಬಂಧಿಸಿದ್ದರೇ ಎಂದು ಪ್ರಶ್ನಿಸಿದರು.

ಅಕ್ಷಮ್ಯ ಅಪರಾಧ: ಈಶ್ವರ ಖಂಡ್ರೆ
ಯಾದಗಿರಿ: ಮಠಗಳಿಗೆ ನೀಡುವ ಅನುದಾನದಲ್ಲಿ 30 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎನ್ನುವ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ದೇವಾಲಯ, ಆಶ್ರಮ, ಮಠಗಳಿಗೆ ಅನುದಾನ ಬಿಡುಗಡೆ ಮಾಡಲು ಕಮಿಷನ್ ಕೇಳುತ್ತಿರುವ ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಇಂಥ ಅಕ್ಷಮ್ಯ ಅಪರಾಧಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ಭ್ರಷ್ಟರಿಗೆ ಯಾವುದೇ ಜಾತಿ, ಧರ್ಮವಿಲ್ಲ. ಅವರು ಜಾತಿ, ಧರ್ಮವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ವಾಲಾಡುವ ಸ್ವಾಮೀಜಿ: ಯತ್ನಾಳ್
ವಿಜಯಪುರ: ಮಠಗಳಿಗೆ ಅನುದಾನ ನೀಡಲು ಕಮಿಷನ್ ಪಡೆದ ಆರೋಪ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದೆಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದರು. ಇವರು ಯಾವಾಗ ಯಾರ ಬಗ್ಗೆ ಆರೋಪ ಮಾಡುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯೊಂದರ ಕುರಿತು ಪ್ರತಿಕ್ರಿಯಿಸಿದ ಅವರು, ಮೊನ್ನೆ ಕೆ.ಎಸ್.ಈಶ್ವರಪ್ಪರನ್ನ ಜೈಲಿಗೆ ಹಾಕಿ ಎನ್ನುವ ಬದಲು ಯಡಿಯೂರಪ್ಪ ಅವರನ್ನು ಜೈಲಿಗೆ ಹಾಕಬೇಕು ಎಂದಿದ್ದರು. ರಾತ್ರಿಯ ಗುಂಗು ಇಳಿದಿರೋದಿಲ್ಲ ಯಾರು ಏನ್ಮಾಡೋದು ಎಂದು ಛೇಡಿಸಿದರು.

TV9 Kannada


Leave a Reply

Your email address will not be published.