ಮಡಿಕೇರಿ: ನಗರಸಭೆ ಚುನಾವಣೆ ಸಂಬಂಧ 23 ವಾರ್ಡ್‍ಗಳ 27 ಮತಗಟ್ಟೆಗಳಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಪುರುಷರು ಮತ್ತು ಮಹಿಳೆಯರು ಕೊರೊನಾ ನಿಯಮ ಪಾಲಿಸಿ, ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ವಿದ್ಯಾನಗರ, ಕಾವೇರಿ ಬಡಾವಣೆ, ಗದ್ದಿಗೆ, ಆಜಾದ್ ನಗರ, ದೇಚೂರು, ಕನ್ನಂಡಬಾಣೆ, ಗಣಪತಿ ಬೀದಿ, ಮಹದೇವಪೇಟೆ, ಅಂಬೇಡ್ಕರ್ ಬಡಾವಣೆ, ಕನಕದಾಸ ರಸ್ತೆ, ದಾಸವಾಳ ರಸ್ತೆ, ಪುಟಾಣಿ ನಗರ, ಜಯನಗರ, ರೇಸ್‍ಕೋರ್ಸ್ ರಸ್ತೆ, ಗೌಳಿಬೀದಿ, ಕಾನ್ವೆಂಟ್ ರಸ್ತೆ, ಹೊಸ ಬಡಾವಣೆ, ಸುಬ್ರಹ್ಮಣ್ಯ ನಗರ, ಜ್ಯೋತಿ ನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ, ಅಶೋಕ ಪುರ ಸೇರಿದಂತೆ ಹಲವು ವಾರ್ಡ್‍ಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನ ಮಾಡಿದರು.

ಹಲವು ಮತಗಟ್ಟೆಗಳಲ್ಲಿ ಹಿರಿಯರು ತಮ್ಮ ಮಕ್ಕಳ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಬೆಳಗ್ಗೆ ಬಿರುಸಿನ ಮತದಾನ ನಡೆಯಿತು. ಕೋವಿಡ್-19 ಹಿನ್ನೆಲೆ ನಗರಸಭೆ ವ್ಯಾಪ್ತಿಯ ಎಲ್ಲ ಮತಗಟ್ಟೆಗಳಲ್ಲಿ ಥರ್ಮೋಸ್ಕ್ಯಾನರ್ ಮೂಲಕ ತಪಾಸಣೆ ಮಾಡಿ ಮತಗಟ್ಟೆಗೆ ಕಳುಹಿಸುವ ದೃಶ್ಯ ಕಂಡುಬಂದಿತು. ಜೊತೆಗೆ ಸ್ಯಾನಿಟೈಸರ್ ವ್ಯವಸ್ಥೆ ಸಹ ಮಾಡಲಾಗಿತ್ತು. ಕೊನೆಯ ಒಂದು ಗಂಟೆ ಅವಧಿಯಲ್ಲಿ ಕೋವಿಡ್ ಸೋಂಕಿತರು ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಮಹೇಶ್, ಇತರರು ಇದ್ದರು.

The post ಮಡಿಕೇರಿ ನಗರಸಭೆ ಚುನಾವಣೆ- ಕೋವಿಡ್ ನಿಯಮ ಪಾಲಿಸಿ ಶಾಂತಿಯುತ ಮತದಾನ appeared first on Public TV.

Source: publictv.in

Source link