ಮಡಿಕೇರಿ: ನಗರಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಈ ಮೂಲಕ ಕಳೆದ ಬಾರಿ ಹೆಚ್ಚು ಸ್ಥಾನ ಗೆದ್ದಿದ್ದ ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾಗಿದೆ.

ಮಡಿಕೇರಿ ನಗರಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 23 ವಾರ್ಡ್ ಗಳಲ್ಲಿ 16 ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಬಾರಿ ನಗರಸಭೆಯ ಆಡಳಿತವನ್ನು ಬಿಜೆಪಿ ಪಡೆದಿದೆ. ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದ್ದು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗಳಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಜೆಡಿಎಸ್ ಕೂಡ ಒಂದು ಸ್ಥಾನ ಗಳಿಸಿ ತೃಪ್ತಿ ಪಟ್ಟುಕೊಂಡಿದೆ.

ಕಳೆದ ಬಾರಿ ಇದ್ದ ಸದಸ್ಯರನ್ನು ಮತದಾರ ಮನೆಗೆ ಕಳುಹಿಸಿದ್ದು, ಈ ಬಾರಿ ಪ್ರಮುಖರು ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್‍ನಿಂದ ನಗರಸಭೆಯ ಮಾಜಿ ಅಧ್ಯಕ್ಷರಾದ ಹೆಚ್.ಎಂ.ನಂದಕುಮಾರ್, ಜುಲೇಕಾಬಿ, ಕಾವೇರಮ್ಮ ಸೋಮಣ್ಣ, ಮಾಜಿ ಸದಸ್ಯರಾದ ಕೆ.ಯು.ಅಬ್ದುಲ್ ರಜಾಕ್, ಎ.ಸಿ.ದೇವಯ್ಯ, ಪ್ರಕಾಶ್ ಆಚಾರ್ಯ, ಟಿ.ಎಂ.ಅಯ್ಯಪ್ಪ, ಮುನೀರ್ ಅಹಮ್ಮದ್, ಸುನೀಲ್ ನಂಜಪ್ಪ, ಮಾಜಿ ಸದಸ್ಯ ಪಕ್ಷೇತರ ಅಭ್ಯರ್ಥಿ ಕೆ.ಜಿ.ಪೀಟರ್, ಕೆ.ಟಿ.ಬೇಬಿಮ್ಯಾಥ್ಯು ಸೋತಿದ್ದಾರೆ.

ಕಳೆದ ಬಾರಿ ಗೆದ್ದ ಅಭ್ಯರ್ಥಿಗಳು ತಮ್ಮ ವಾರ್ಡ್ ಗಳಲ್ಲಿ ಉತ್ತಮ ಕೆಲಸ ಮಾಡಿದ ಪ್ರಭಾವದಿಂದಾಗಿ ಈ ಬಾರಿಯು ಗೆದ್ದಿದ್ದಾರೆ. ಬಿಜೆಪಿಯಿಂದ ಮಾಜಿ ಸದಸ್ಯರಾದ ಕೆ.ಎಸ್.ರಮೇಶ್, ಅನಿತಾ ಪೂವಯ್ಯ, ಎಸ್‍ಡಿಪಿಐಯಿಂದ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸದಸ್ಯ ಎಂ.ಕೆ.ಮನ್ಸೂರ್, ಅಮಿನ್ ಮೊಹಿಸಿನ್ ಗೆಲುವು ಸಾಧಿಸಿದ್ದಾರೆ.

ಕೋವಿಡ್ ನಿಯಮ ಉಲ್ಲಂಘನೆ
ಮಡಿಕೇರಿ ನಗರಸಭೆಯ ಚುನಾವಣಾ ಫಲಿತಾಂಶ ಇಂದು ಹೋರ ಬಿಳುತ್ತಿದಂತೆ ಅಭ್ಯರ್ಥಿಗಳು ಕಾರ್ಯಕರ್ತರೊಂದಿಗೆ ಸಂಭ್ರಮಾಚರಿಸಿದರು. ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸಬೇಕಿರುವ ವಾರ್ಡ್ ಗಳ ಸದಸ್ಯರು ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಕನಿಷ್ಠ ಕಾರ್ಯಕರ್ತರೊಂದಿಗೆ ಬೇರೆಯುವಾಗ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಎಂದಿನಂತೆ ಓಡಾಟ ನಡೆಸಿ, ಪೊಲೀಸರೊಂದಿಗೆ ಬುದ್ಧಿವಾದ ಹೇಳಿಸಿಕೊಂಡು ಮನೆಗೆ ಹೋಗಿದ್ದಾರೆ.

The post ಮಡಿಕೇರಿ ನಗರಸಭೆ ಬಿಜೆಪಿ ಪಾಲು, ಎಸ್‍ಡಿಪಿಐ ಪ್ರಮುಖ ವಿರೋಧ ಪಕ್ಷ- ಕಾಂಗ್ರೆಸ್‍ಗೆ ತೀವ್ರ ಮುಖಭಂಗ appeared first on Public TV.

Source: publictv.in

Source link