ಮಡಿಕೇರಿ-ಮಂಡ್ಯ ಆಸ್ಪತ್ರೆಗಳಿಗೆ U.S ಸರ್ಜನ್ ಜನರಲ್,ಕನ್ನಡಿಗ ವಿವೇಕ್ ಕುಟುಂಬದಿಂದ ಭರಪೂರ ನೆರವು

ಮಡಿಕೇರಿ-ಮಂಡ್ಯ ಆಸ್ಪತ್ರೆಗಳಿಗೆ U.S ಸರ್ಜನ್ ಜನರಲ್,ಕನ್ನಡಿಗ ವಿವೇಕ್ ಕುಟುಂಬದಿಂದ ಭರಪೂರ ನೆರವು

ಅಮೆರಿಕಾ ಪಬ್ಲಿಕ್ ಹೆಲ್ತ್ ಸರ್ವಿಸ್ ಕಮಿಷನ್ಡ್ ಕಾರ್ಪ್ಸ್​​ನ ವೈಸ್ ಅಡ್ಮಿರಲ್, ಕನ್ನಡಿಗ ವಿವೇಕ್ ಮೂರ್ತಿ ಅವರ ಕುಟುಂಬ, ರಾಜ್ಯದ ಆಸ್ಪತ್ರೆಗಳಿಗೆ ಕೋವಿಡ್​​​ ನೆರವು ಸಾಮಗ್ರಿಗಳನ್ನ ಕಳಿಸಿಕೊಟ್ಟು ಮಾನವೀಯತೆ ಮೆರೆದಿದೆ. ಕೋವಿಡ್​ ಚಿಕಿತ್ಸೆಗೆ ಬಳಸಲಾಗುವ ವೈದ್ಯಕೀಯ ಸಾಮಗ್ರಿಗಳನ್ನು ಮಡಿಕೇರಿ ಮತ್ತು ಮಂಡ್ಯ ಜಿಲ್ಲೆಗಳ ಆಸ್ಪತ್ರೆಗಳಿಗೆ ನೀಡಲು ವಿವೇಕ್ ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಅಮೆರಿಕಾ ಸರ್ಜನ್ ಜನರಲ್ ವಿವೇಕ್ ಮೂರ್ತಿ ಕುಟುಂಬ ಮೂಲತಃ ಮಂಡ್ಯದವರು. ಅವರ ತಂದೆ ಲಕ್ಷ್ಮೀ ನರಸಿಂಹ ಮೂರ್ತಿ ರಾಜ್ಯಕ್ಕೆ ನೆರವು ಕಳಿಸುತ್ತಿರೋ ಬಗ್ಗೆ ಮಾತನಾಡಿದ್ದಾರೆ. ಸ್ಕೋಪ್​ ಫೌಂಡೇಷನ್​ ವತಿಯಿಂದ 70 ಆಕ್ಸಿಜನ್ ಕಾನ್ಸಂಟ್ರೇಟರ್​​ಗಳು, 4 ವೆಂಟಿಲೇಟರ್​, N95 ಮಾಸ್ಕ್​ಗಳು, ರೆಸ್ಪಿರೇಟರ್​ ಮಾಸ್ಕ್​ಗಳು, ₹1.40 ಕೋಟಿ ಮೊತ್ತದ ಸ್ವಚ್ಛತಾ ಸಾಮಗ್ರಿಗಳು ಶೀಘ್ರದಲ್ಲೇ ಬರಲಿದೆ ಅಂತ ಅವರು ತಿಳಿಸಿದ್ದಾರೆ.

ವೈದ್ಯಕೀಯ ಸಂಪನ್ಮೂಲಗಳ ಕೊರತೆಯಿರುವ 12 ಸಣ್ಣ ಆಸ್ಪತ್ರೆಗಳಿಗೆ ಈ ಸಾಮಗ್ರಿಗಳನ್ನ  ವಿತರಿಸಲಾಗುತ್ತದೆ. ತಾಲ್ಲೂಕು ಆಸ್ಪತ್ರೆಗಳು ಮತ್ತು ಎರಡು ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾತ್ರ ಇದಕ್ಕೆ ಆಯ್ಕೆ ಮಾಡಲಾಗಿದೆ. ಅಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲು ಶೀಘ್ರದಲ್ಲೇ ದೆಹಲಿಯಿಂದ 70 ಲಕ್ಷ ರೂಪಾಯಿ ಮೌಲ್ಯದ ಮತ್ತಷ್ಟು ವಸ್ತುಗಳನ್ನು ಕಳಿಸಲು ಫೌಂಡೇಶನ್ ಪ್ರಯತ್ನಿಸುತ್ತಿದೆ ಎಂದು ನರಸಿಂಹಮೂರ್ತಿ ತಿಳಿಸಿದ್ದಾರೆ.

ಏನೆಲ್ಲಾ ಕಳಿಸಿದೆ ವಿವೇಕ್ ಕುಟುಂಬ?

  • ಅಡಾಪ್ಟರ್ ಹೊಂದಿರುವ 70 ಆಕ್ಸಿಜನ್ ಕಾನ್ಸಂಟ್ರೇಟರ್​​ಗಳು
  • 25 ಡಿಜಿಟಲ್ ಓರಲ್ ಥರ್ಮಾಮೀಟರ್​​ಗಳು
  • 1,96,000 K95 ಫೇಸ್ ಮಾಸ್ಕ್​ಗಳು
  • 5000 ಫೇಸ್​​​ಶೀಲ್ಡ್​ಗಳು
  •  5000 ಫೋರ್​​ಹೆಡ್​ ಫೋಮ್
  • 300 ಸರ್ಜಿಕಲ್ ಇಯರ್​​ಲೋಬ್ ಮಾಸ್ಕ್​ಗಳು
  • 1200 ವೈದ್ಯಕೀಯ ಫೇಸ್ ​​ಮಾಸ್ಕ್​ಗಳು
  •  400 ನೈಟ್ರೈಲ್ ಪೌಡರ್-​ಫ್ರೀ ಗ್ಲವ್ಸ್​
  •  50 ಆಕ್ಸಿಜನ್​ ಕ್ಯಾನುಲಾ
  • 5 ವೋಲ್ಟೇಜ್ ಟ್ರಾನ್ಸ್​ಫಾರ್ಮರ್​ಗಳು

ಈ ಎಲ್ಲಾ ಸಾಮಗ್ರಿಗಳು ಈಗಾಗಲೇ ಬೆಂಗಳೂರಿಗೆ ತಲುಪಿದ್ದು, ಶೀಘ್ರದಲ್ಲೇ ಜಿಲ್ಲೆಗಳಿಗೆ ಹಸ್ತಾಂತರಿಸಲಾಗುತ್ತದೆ ಅಂತ ತಿಳಿದುಬಂದಿದೆ.

₹1 ಕೋಟಿ ವೆಚ್ಚದಲ್ಲಿ ಕೋವಿಡ್ ವಾರ್ಡ್ ನಿರ್ಮಿಸಲು ಪ್ಲಾನ್
ವಿವೇಕ್ ಮೂರ್ತಿ ಅವರ ಸೋದರಸಂಬಂಧಿ ವಸಂತ್ ಮಾತನಾಡಿದ್ದು, ತಮ್ಮ ತವರು ಗ್ರಾಮವಾದ ಹಳ್ಳಿಗೆರೆ, ಮಂಡ್ಯ, ಮದ್ದೂರು, ಮಳವಳ್ಳಿ, ನಾಗಮಂಗಲ ಮುಂತಾದ ಸ್ಥಳಗಳಲ್ಲಿ ಈ ವೈದ್ಯಕೀಯ ಸಾಮಗ್ರಿಗಳನ್ನು ಹಸ್ತಾಂತರಿಸಲಾಗುತ್ತದೆ ಅಂತ ತಿಳಿಸಿದ್ದಾರೆ. ಜೊತೆಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೋವಿಡ್ ವಾರ್ಡ್ ನಿರ್ಮಿಸುವ ಯೋಜನೆ ಕೂಡ ಇದೆ ಅಂತ ಅವರು ಹೇಳಿದ್ದಾರೆ.

ಅಂದ್ಹಾಗೆ ಭಾರತೀಯ ಅಮೆರಿಕನ್ ವೈದ್ಯ ವಿವೇಕ್ ಮೂರ್ತಿ ಅವರನ್ನ ಅಧ್ಯಕ್ಷ ಜೋ ಬೈಡನ್ ಅವರ ಸರ್ಜನ್ ಜನರಲ್ ಆಗಿ ನೇಮಿಸಲು ಯುಎಸ್ ಸೆನೆಟ್ ಅಂಗೀಕರಿಸಿತ್ತು. 43 ವರ್ಷದ ವಿವೇಕ್ ಮೂರ್ತಿ, ಈ ಮೂಲಕ ಎರಡನೇ ಬಾರಿಗೆ ಈ ಸ್ಥಾನವನ್ನು ಅಲಂಕರಿಸಿದ್ದಾರೆ. 2011ರಲ್ಲಿ, ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತದಲ್ಲೂ ವಿವೇಕ್ ಉನ್ನತ ಸ್ಥಾನಕ್ಕೆ ನೇಮಕಗೊಂಡಿದ್ದರು. 

 

The post ಮಡಿಕೇರಿ-ಮಂಡ್ಯ ಆಸ್ಪತ್ರೆಗಳಿಗೆ U.S ಸರ್ಜನ್ ಜನರಲ್,ಕನ್ನಡಿಗ ವಿವೇಕ್ ಕುಟುಂಬದಿಂದ ಭರಪೂರ ನೆರವು appeared first on News First Kannada.

Source: newsfirstlive.com

Source link