ಮತಾಂತರ ನಿಷೇಧ ಖಾಸಗಿ ವಿಧೇಯಕ: ಸರ್ಕಾರದೊಂದಿಗೆ ಸಂಘರ್ಷವಿಲ್ಲ ಎಂದ ತುಳಸಿ ಮುನಿರಾಜು | Private Bill to Curtail Religion Conversion Tulasi Munirajju Gowda Responds


ಮತಾಂತರ ನಿಷೇಧ ಖಾಸಗಿ ವಿಧೇಯಕ: ಸರ್ಕಾರದೊಂದಿಗೆ ಸಂಘರ್ಷವಿಲ್ಲ ಎಂದ ತುಳಸಿ ಮುನಿರಾಜು

ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ

ಬೆಂಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಕುರಿತು ಖಾಸಗಿ ಸದಸ್ಯರ ವಿಧೇಯಕ ಮಂಡನೆಗೆ ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜು ಮುಂದಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ ಜಾರಿಯಾಗಿರುವ ಕಾಯ್ದೆಗಳನ್ನು ಅಭ್ಯಾಸ ಮಾಡಿದ ನಂತರ ಈ ವಿಧೇಯಕ ಸಿದ್ಧಪಡಿಸಿದ್ದೇನೆ. ಇದರಲ್ಲಿ ಸರ್ಕಾರಕ್ಕೆ ಮುಜುಗರ ತರುವಂಥದ್ದು ಏನೂ ಇಲ್ಲ ಎಂದು ಅಭಿಪ್ರಾಯಪಟ್ಟರು. ಸರ್ಕಾರವು ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುತ್ತದೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಸರ್ಕಾರವೇ ವಿಧೇಯಕ ಮಂಡಿಸಿದರೆ ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಸರ್ಕಾರವು ಮತಾಂತರ ನಿಷೇಧ ವಿಧೇಯಕ ಮಂಡಿಸಬಾರದೆಂದು ಬಿಷಪ್ ಏಕೆ ಒತ್ತಾಯಿಸುತ್ತಿದ್ದಾರೋ ಗೊತ್ತಿಲ್ಲ. ಬಹುಶಃ ಅವರು ನಡೆಸುತ್ತಿರುವ ದಬ್ಬಾಳಿಕೆಯ ಪ್ರವೃತ್ತಿಯೇ ಇದಕ್ಕೆ ಕಾರಣ ಇರಬಹುದು. ಶಿಕ್ಷಣ ಉಚಿತವಾಗಿ ಕೊಡುವುದಾಗಿ ಹೇಳಿ ಮತಾಂತರ ಮಾಡುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವುದಾಗಿ ಹೇಳಿ ಮತಾಂತರ ಮಾಡುತ್ತಿದ್ದಾರೆ. ಇದನ್ನು ತಡೆಯುವ ಕೆಲಸ ಆಗಬೇಕು. ನನ್ನಿಂದ ಅದು ಆರಂಭವಾಗಲೆಂದು ಹೆಜ್ಜೆ ಇಟ್ಟಿದ್ದೇನೆ. ಸರ್ಕಾರ ಮತ್ತು ನಮ್ಮ ಮಧ್ಯೆ ಸಂಘರ್ಷ ಆಗಲು ಸಾಧ್ಯವಿಲ್ಲ. ವಿಧೇಯಕವನ್ನು ವಿರೋಧಿಸುವವರು ಮೊದಲು ಅದನ್ನೊಮ್ಮೆ ಓದಲಿ. ವಿಧೇಯಕದ ಬಗ್ಗೆ ನಾನು ಪಕ್ಷದ ಜೊತೆ ಯಾವುದೇ ಚರ್ಚೆ ಮಾಡಿಲ್ಲ ಎಂದರು.

ಮತಾಂತರದ ಮೂಲಕ ದೇಶ ವಿಭಜನೆ ಮಾಡಲು ಹೊರಟಿರುವವರಿಗೆ ಈ ವಿಧೇಯಕವು ಎಚ್ಚರಿಕೆಯ ಗಂಟೆ ಆಗಲಿ. ಸರ್ಕಾರ ಯಾವ ನಿಲುವು ತೆಗೆದುಕೊಳ್ಳುತ್ತೋ ನೋಡೋಣ. ಹಿಂದುತ್ವದ ರಕ್ಷಣೆ ಮತ್ತು ಮತಾಂತರ ತಡೆ ನಮ್ಮ ಉದ್ದೇಶ. ಬೇರೆ ರಾಜ್ಯಗಳಲ್ಲಿ ಬಂದಿರುವ ಬದಲಾವಣೆ ನಮ್ಮ ರಾಜ್ಯದಲ್ಲಿ ಏಕೆ ಬರಬಾರದು ಎಂದು ಪ್ರಶ್ನಿಸಿದರು.

ಸಭಾಪತಿಗೆ ಸೂಚನೆ ಸಲ್ಲಿಕೆ
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ವಿಧೇಯಕ ಮಂಡಿಸಲು ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ ನಿರ್ಧರಿಸಿದ್ದಾರೆ. ಸದನದಲ್ಲಿ ಖಾಸಗಿ ಸದಸ್ಯರ ವಿಧೇಯಕ ಮಂಡಿಸಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಮತಾಂತರವನ್ನು ಕಾನೂನು ವ್ಯಾಪ್ತಿಗೆ ಒಳಪಡಿಸುವ ಪ್ರಸ್ತಾವನೆಯನ್ನು ಈ ವಿಧೇಯಕ ಒಳಗೊಳ್ಳಲಿದೆ. ಈ ಕುರಿತು ತುಳಸಿ ಮುನಿರಾಜು ಅವರು ವಿಧಾನ ಪರಿಷತ್ ಸಭಾಪತಿಗೆ ಸೂಚನೆಯನ್ನೂ ಸಲ್ಲಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *