ಕಳೆದ ಒಂದು ವಾರದಿಂದ ಇಡೀ ವಿಶ್ವದಲ್ಲಿ ಸದ್ದು ಮಾಡ್ತಾ ಇರೋದು, ಆತಂಕ ಸೃಷ್ಟಿ ಮಾಡ್ತಾ ಇರೋದು ಡೆಲ್ಟಾ, ಡೆಲ್ಟಾ, ಡೆಲ್ಟಾ. ವಿಶ್ವದ 80ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಡೆಲ್ಟಾ ತನ್ನ ಪ್ರತಾಪ ತೋರಿಸಲು ಶುರು ಮಾಡಿದೆ. ಈಗಾಗಲೇ 35 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಈ ಡೆಡ್ಲಿ ವೈರಸ್ ಈಗಂತೂ ಮತ್ತಷ್ಟು ವೇಷ ಧರಿಸಿ ವಿಶ್ವದೆಲ್ಲೆಡೆ ಪ್ರತಾಪ ಮುಂದುವರೆಸ್ತಾನೇ ಇದೆ.

ಯಾವ ದೇಶದಲ್ಲಿ ಕೇಳಿದ್ರೂ ಈಗ ಡೆಲ್ಟಾ ಡೆಲ್ಟಾ 
ವಿಶ್ವದ 80ಕ್ಕೂ ಹೆಚ್ಚು ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಕಾಟ

ಕೊರೊನಾ ದಿನ ಕಳೆದಂತೆ ಇನ್ನಷ್ಟು ಅಪಾಯಕಾರಿಯಾಗಿಯೇ ಪರಿವರ್ತನೆ ಆಗ್ತಾ ಇದೆ. ಈ ವೈರಸ್ ಇಷ್ಟರ ಮಟ್ಟಿಗೆ ವೇಷ ಬದಲಿಸುತ್ತೆ ಅಂತ ಊಹೆಯನ್ನೂ ಮಾಡಿರಲಿಲ್ಲ. ಸಾಮಾನ್ಯವಾಗಿ ಯಾವುದೇ ಹೊಸ ಸಾಂಕ್ರಾಮಿಕ ರೋಗದ ವೈರಸ್ ಹರಡಿದಾಗ ರೂಪಾಂತರಿ ತಳಿಗಳು ಸೃಷ್ಟಿಯಾಗೋದು ಸಹಜ. ಆದ್ರೆ ಇಷ್ಟೊಂದು ರೂಪಾಂತರಿ ತಳಿಗಳು ಹಿಂದೆಂದೂ ಸೃಷ್ಟಿಯಾಗಿರಲಿಲ್ಲ. ಮೊದಲು ಬಂದಾಗ ವಿಶ್ವದಲೆಲ್ಲ ಒಂದೇ ರೂಪದಲ್ಲಿ ಕೊರೊನಾ ಪತ್ತೆಯಾಗ್ತಾ ಇತ್ತು. ಈಗ ಹಲವು ವೇಷಗಳಲ್ಲಿ, ಹಲವು ರೂಪಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗ್ತಾ ಇರೋದು ಭೀತಿ ಹೆಚ್ಚಿಸುತ್ತಿದೆ. ಒಂದೊಂದು ದೇಶದಲ್ಲಿ ಒಂದೊಂದು ರೂಪಾಂತರಿ ತಳಿ ಸೃಷ್ಟಿಯಾಗುತ್ತಿದೆಯೇನೋ ಎಂಬ ಅನುಮಾನ ಬರ್ತಿದೆ. ಈಗಂತೂ ಬಹುತೇಕ ದೇಶಗಳಲ್ಲಿ ತನ್ನ ಪ್ರತಾಪ ತೋರಿಸುತ್ತಿರೋದು ಡೆಲ್ಟಾ ರೂಪಾಂತರಿ ವೈರಸ್. ಡೆಲ್ಟಾ ತಳಿ ಮೊದಲಿಗೆ ಕಾಣಿಸಿಕೊಂಡಿದ್ದು ಭಾರತದಲ್ಲಿ. ಬಳಿಕ ಒಂದೊಂದೇ ದೇಶಕ್ಕೆ ಹರಡುತ್ತಾ ಹರಡುತ್ತಾ ಈಗ ಬರೋಬ್ಬರಿ 80ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ಅಂದರೆ ಇದೆಷ್ಟು ವೇಗವಾಗಿ ಎಲ್ಲಾ ಕಡೆ ಹರಡ್ತಾ ಇದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಿ.

ಥೀಟಾ, ಝೀಟಾ, ಲೋಟಾ ,ಈಗ ಎಲ್ಲಾ ಕಡೆ ಡೆಲ್ಟಾ
ಒಂದೊಂದು ದೇಶದಿಂದ ಒಂದೊಂದು ವೈರಸ್ ಎಂಟ್ರಿ

ಈಗಾಗಲೇ ಕೊರೊನಾ ವೈರಸ್ ಹಲವು ರೂಪಾಂತರಿ ತಳಿಗಳನ್ನು ಸೃಷ್ಟಿಸಿಕೊಂಡಿದೆ. ಮೊದಲನೇ ಅಲೆಗಿಂತ ಎರಡನೇ ಅಲೆ ದೊಡ್ಡ ಆಘಾತ ಕೊಟ್ಟಿದ್ದು ಇದೇ ಕಾರಣಕ್ಕೆ. ಈಗ ಎರಡನೇ ಅಲೆಗಿಂತ ಮೂರನೇ ಅಲೆ ಇನ್ನಷ್ಟು ಭೀಕರವಾಗಿರುತ್ತಾ ಅನ್ನೋ ಆತಂಕ ಶುರುವಾಗಿದೆ. ಹಲವು ದೇಶಗಳಲ್ಲಿ ರೂಪಾಂತರಿ ತಳಿಗಳು ಸೃಷ್ಟಿಯಾಗಿದ್ದು ಎಲ್ಲಿಂದ ಎಲ್ಲಿಗೆ ಹರಡುತ್ತೆ ಅನ್ನೋದನ್ನು ಊಹಿಸೋದಕ್ಕೂ ಸಾಧ್ಯವಾಗಲ್ಲ. ಆಫ್ರಿಕಾದ ಬೀಟಾ, ಬ್ರಿಟನ್ನಿನ ಆಲ್ಫಾ, ಬ್ರೆಜಿಲ್​ನ ಗಾಮಾ ಮತ್ತು ಝೀಟಾ, ಅಮೆರಿಕದ ಎಪ್ಸಿಲಾನ್ ಮತ್ತು ಲೋಟಾ, ಫಿಲಿಫೈನ್ಸ್ ನ ಥೀಟಾ, ಪೆರುವಿನ ಲಾಂಬ್ಡಾ ಹೀಗೆ ಹತ್ತು ಹಲವು ರೂಪಾಂತರಿ ಕೊರೊನಾ ತಳಿಗಳು ಭೀತಿ ಹುಟ್ಟಿಸ್ತಾ ಇವೆ. ಭಾರತದಲ್ಲಿ ಸದ್ಯಕ್ಕೆ ಆತಂಕ ಹೆಚ್ಚಿಸ್ತಾ ಇರೋದು ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ವೈರಸ್. ಡೆಲ್ಟಾ ಪ್ಲಸ್ ವೈರಸ್ ಈಗಾಗಲೇ ಹಲವು ಜನರಲ್ಲಿ ಪತ್ತೆಯಾಗಿದ್ದು ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂಬುದು ಇನ್ನಷ್ಟೇ ಅಧ್ಯಯನಗಳಿಂದ ಗೊತ್ತಾಗಬೇಕಾಗಿದೆ. ಈ ಡೆಲ್ಟಾ ವೈರಸ್ 800ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿರೋದ್ರಿಂದ ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ಕೂಡ ನಡೆಯುತ್ತಿವೆ.

ಅತಿ ವೇಗವಾಗಿ ಹರಡುವ ರೂಪಾಂತರಿ ಡೆಲ್ಟಾ?
ಮೊದಲ ಹಂತದ ಅಧ್ಯಯನದಲ್ಲಿ ತಿಳಿದು ಬಂದಿದ್ದೇನು?

ಭಾರತದಲ್ಲಿ ಮೊದಲು ಪತ್ತೆಯಾಗಿ ಬಳಿಕ ಅನೇಕ ದೇಶಗಳಿಗೆ ಹರಡಿರುವ ಈ ಡೆಲ್ಟಾ ರೂಪಾಂತರಿ ವೈರಸ್ ಅತಿ ವೇಗವಾಗಿ ಹರಡ್ತಾ ಇದೆ ಅನ್ನೋದು ಮೊದಲ ಹಂತದ ಅಧ್ಯಯನಗಳಿಂದ ತಿಳಿದು ಬಂದಿದೆ. ಈವರೆಗೆ ಅದೆಷ್ಟೋ ರೂಪಾಂತರಿ ತಳಿಗಳು ಬಂದ್ರೂ ಇಷ್ಟೊಂದು ವೇಗವಾಗಿ ಹರಡ್ತಾ ಇರಲಿಲ್ಲ ಅನ್ನೋದು ತಜ್ಞರ ಅಭಿಮತ. ಈ ಡೆಲ್ಟಾ ಬಗ್ಗೆ ಅಮೆರಿಕದ ಬ್ರೈನ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿಸ್ತೃತ ಅಧ್ಯಯನ ನಡೆಸಲು ಮುಂದಾಗಿದೆ. ಈ ಅಧ್ಯಯನದ ಮೊದಲ ಹಂತದಲ್ಲಿ ತಿಳಿದು ಬಂದಿದ್ದು ಈ ವೈರಸ್ ಅತಿ ಹೆಚ್ಚು ಸಾಂಕ್ರಾಮಿಕವಾದದ್ದು ಅನ್ನೋದು. ಅಂದರೆ ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಗಳಿಗೆ ಹರಡುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ಸಂದೇಶ ರವಾನಿಸಿ ಬಿಟ್ಟಿದ್ದಾರೆ.

ವೇಗವಾಗಿ ಹರಡುವ ಡೆಲ್ಟಾ ಹೆಚ್ಚು ಅಪಾಯಕಾರಿ ವೈರಸ್
ಎರಡು ಡೋಸ್ ಲಸಿಕೆ ಪಡೆದುಕೊಂಡವರ ಮೇಲೂ ಅಟ್ಯಾಕ್
ಡೋಸ್ ಪಡೆದಿದ್ರು ಗಂಭೀರ ಸ್ವರೂಪ ಪಡೆದುಕೊಳ್ಳುತ್ತೆ ರೋಗ

ಈ ಡೆಲ್ಟಾ ಎಷ್ಟು ಅಪಾಯಕಾರಿ ಅನ್ನೋದು ಕೂಡ ದಿನಕಳೆದಂತೆ ಸಾಬೀತಾಗುತ್ತಿದೆ. ಕಾರಣ ಬೇರೆ ಬೇರೆ ದೇಶಗಳಲ್ಲಿ ಪತ್ತೆಯಾಗಿರುವ ಸೋಂಕಿತರ ಬಗ್ಗೆ ಅಧ್ಯಯನ ನಡೆಸಲಾಗ್ತಾ ಇದ್ದು ಇದು ಹೆಚ್ಚು ಅಪಾಯಕಾರಿ ರೂಪಾಂತರಿ ಅನ್ನೋದು ಗೊತ್ತಾಗುತ್ತಿದೆ. ಈ ಹಿಂದಿನ ಎಲ್ಲಾ ರೂಪಾಂತರಿಗಳಿಗಿಂತಲೂ ಈ ವೈರಸ್ ಹೆಚ್ಚು ಬಲಶಾಲಿ ಅನ್ನೋದು ತಿಳಿದು ಬರ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಎರಡು ಡೋಸ್ ಲಸಿಕೆ ಪಡೆದುಕೊಂಡವರ ಮೇಲೂ ಇದು ಅಟ್ಯಾಕ್ ಮಾಡುತ್ತೆ. ಡೋಸ್ ಪಡೆದುಕೊಂಡಿದ್ರು ಕೊರೊನಾ ಸೋಂಕಿತರಿಗೆ ರೋಗ ಉಲ್ಭಣವಾಗುವ ಸಾಧ್ಯತೆ ಹೆಚ್ಚಿದೆ ಅಂತಿದಾರೆ ತಜ್ಞರು. ಹೀಗಾದರೆ ಕೊರೊನಾ ಜಗತ್ತಿನಲ್ಲಿ ಇನ್ನಷ್ಟು ಅಟ್ಟಹಾಸ ಮೆರೆದು ಬಿಡುತ್ತಾ ಅನ್ನೋದೇ ಆತಂಕಕಾರಿ ವಿಚಾರ.

ಡೆಲ್ಟಾ ವೈರಸ್​ನಿಂದಲೇ ಬ್ರಿಟನ್​​ನಲ್ಲಿ ಮೂರನೇ ಅಲೆ
ಮತ್ತೆ ಬ್ರಿಟನ್ ನಲ್ಲಿ ನಿತ್ಯದ ಕೇಸ್ ಗಳ ಸಂಖ್ಯೆ 10 ಸಾವಿರ
4 ತಿಂಗಳಿನಲ್ಲೇ ಮತ್ತೆ ಬ್ರಿಟನ್​​ನಲ್ಲಿ ಗರಿಷ್ಟ ಸೋಂಕಿತರು ಪತ್ತೆ

ಗ್ರೇಟ್ ಬ್ರಿಟನ್​​ನಲ್ಲಿ ಕೊರೊನಾ ಸಾಕಷ್ಟು ಇಳಿಮುಖವಾಗ್ತಾ ಇತ್ತು. ಇನ್ನೇನು ಕೊರೊನಾ ಹೋಗೇ ಬಿಡ್ತು ಅನ್ನೋ ವಾತಾವರಣ ಬ್ರಿಟನ್​​ನಲ್ಲಿ ಸೃಷ್ಟಿಯಾಗಿತ್ತು. ದೇಶದ ಒಂದೊಂದೇ ಭಾಗದಲ್ಲಿ ಅನ್​​ಲಾಕ್ ಪ್ರಕ್ರಿಯೆಯೂ ಜಾರಿಯಲ್ಲಿತ್ತು. ಜನ ರೆಸ್ಟೋರೆಂಟ್​​ಗಳಲ್ಲಿ, ಬೀಚ್​​ಗಳಲ್ಲಿ ಸಾರ್ವಜನಿಕ ಉದ್ಯಾನವನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ತಾ ಇದ್ರು. ಬ್ರಿಟನ್ ಲಸಿಕೆ ಅಭಿಯಾನದಲ್ಲೂ ಮುಂದೆ ಇದ್ದು ಹೆಚ್ಚು ಕಡಿಮೆ ಶೇಕಡಾ 60ರಷ್ಟು ಜನರಿಗೆ ಲಸಿಕೆ ಹಾಕಲಾಗಿದೆ. ಇರುವ ಆರೂವರೆ ಕೋಟಿ ಜನರಲ್ಲಿ ಈಗಾಗಲೇ ಮೂರುವರೆ ಕೋಟಿಗೂ ಹೆಚ್ಚು ಜನರು ಡೋಸ್ ಪಡೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಈಗ ಮತ್ತೆ ಬ್ರಿಟನ್ ನಲ್ಲಿ ಕೊರೊನಾ ಏರು ಗತಿ ಕಾಣ್ತಾ ಇದೆ. ಇದಕ್ಕೆ ಕಾರಣವೇ ರೂಪಾಂತರಿ ಕೊರೊನಾ ವೈರಸ್ ಅನ್ನೋದು ಅಲ್ಲಿನ ತಜ್ಞರ ಮಾಹಿತಿ. ಕೊರೊನಾ ಮತ್ತೆ ಬ್ರಿಟನ್​​ನಲ್ಲಿ ಹೆಚ್ಚಾಗ್ತಾ ಇರೋದಕ್ಕೆ ಡೆಲ್ಟಾ ರೂಪಾಂತರಿಯೇ ಕಾರಣ ಅಂತ ಹೇಳಲಾಗ್ತಾ ಇದೆ. ಕಳೆದ 4 ತಿಂಗಳಿನಲ್ಲೇ ಮತ್ತೆ ಕಳೆದ ಮೂರ್ನಾಲ್ಕು ದಿನಗಳಿಂದ ಬ್ರಿಟನ್ ನಲ್ಲಿ ಗರಿಷ್ಟ ಕೇಸ್​ಗಳು ದಾಖಲಾಗ್ತಾ ಇವೆ. ಸಾವಿರಕ್ಕೂ ಮೀರಿದ ಸಂಖ್ಯೆಯಲ್ಲಿ ನಿತ್ಯ ಕೇಸ್ ಗಳು ಬರ್ತಾ ಇವೆ. ಡೋಸ್ ಪಡೆದುಕೊಂಡವರಿಗೂ ವೈರಸ್ ಅಟ್ಯಾಕ್ ಮಾಡ್ತಾ ಇದ್ದು ಇದು ಮೂರನೇ ಅಲೆಗೆ ಕಾರಣವಾಗಿ ಬಿಟ್ಟಿದೆ ಅಂತ ಬ್ರಿಟನ್​​ನಲ್ಲಿ ಕಳವಳ ವ್ಯಕ್ತವಾಗ್ತಾ ಇದೆ.

ಲಸಿಕೆ ನಿರ್ಮಿಸುವ ಕೋಟೆಯನ್ನು ಭೇದಿಸಿ ನುಗ್ಗಬಲ್ಲದಾ ಡೆಲ್ಟಾ?
ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸಿ ಬಿಡುತ್ತಾ ಈ ರೂಪಾಂತರಿ?

ಬ್ರಿಟನ್​ನಲ್ಲಿ ಕೊರೊನಾ ಲಸಿಕೆ ಪಡೆದುಕೊಂಡವರಿಗೂ ವೈರಸ್ ತಗುಲಿದೆ. ಆದ್ರೆ ಈ ಡೆಲ್ಟಾ ವೈರಸ್ ಲಸಿಕೆ ತೆಗೆದುಕೊಂಡವರಿಗೂ ಅಪಾಯ ತರುತ್ತಾ ಅನ್ನೋದು ಇನ್ನಷ್ಟೇ ದೃಢಪಡಬೇಕಾಗಿದೆ. ಇದಕ್ಕಾಗಿ ಅಧ್ಯಯನಗಳು ನಡೆಯತ್ತಿವೆ. ಈ ಡೆಲ್ಟಾ ರೂಪಾಂತರಿ ಲಸಿಕೆ ದೇಹದೊಳಗೆ ನಿರ್ಮಿಸುವ ಕೋಟೆಯನ್ನು ಬೇಧಿಸಿ ನುಗ್ಗಬಲ್ಲದಾ, ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸುವಷ್ಟು ಬಲಶಾಲಿಯಾ ಅನ್ನೋದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಆದ್ರೆ ಈಗ ಬ್ರಿಟನ್​​ನಲ್ಲಿ ವೇಗವಾಗಿ ಹರಡ್ತಾ ಇರೋದಂತೂ ಡೆಲ್ಟಾ.

ಬ್ರಿಟನ್ನಿನ ಕೇಸ್​​ಗಳ ಪೈಕಿ ಶೇಕಡಾ 90ರಷ್ಟು ಕೇಸ್ ಡೆಲ್ಟಾ
ಅಮೆರಿಕದಲ್ಲೂ ಶೇ.10 ರಷ್ಟು ಸೋಂಕಿತರಿಗೆ ಇದೇ ರೂಪಾಂತರಿ
ಚೀನಾದಲ್ಲೂ ಮತ್ತೆ ಕೊರೊನಾ ಹೆಚ್ಚಲು ಡೆಲ್ಟಾನೇ ಕಾರಣವಂತೆ

ಬ್ರಿಟನ್​​ನಲ್ಲಿ ಈಗ ಪತ್ತೆಯಾಗ್ತಾ ಇರೋ ಕೇಸ್​ಗಳ ಪೈಕಿ ಶೇಕಡಾ 90ರಷ್ಟು ಡೆಲ್ಟಾದ್ದು. ಅಮೆರಿಕದಲ್ಲೂ ಇದರ ಪ್ರಮಾಣ ಶೇಕಡಾ 10ರಷ್ಟಿದೆ. ಇನ್ನು ಚೀನಾದಲ್ಲೂ ಮತ್ತೆ ಕೊರೊನಾ ಹೆಚ್ಚಾಗೋದಕ್ಕೆ ಇದೇ ಡೆಲ್ಟಾ ಕಾರಣ ಅಂತ ಹೇಳಲಾಗುತ್ತಿದೆ. ಅದೆಷ್ಟರ ಮಟ್ಟಿಗೆ ಸತ್ಯಾನೋ ಗೊತ್ತಿಲ್ಲ. ಕಾರಣ ಚೀನಾ, ಬಹಳ ದಿನಗಳಿಂದ ಕೊರೊನಾ ವಿಚಾರದ ಬಗ್ಗೆ ಯಾವುದೇ ಅಂಕಿ-ಅಂಶಗಳನ್ನು ಹೊರ ಜಗತ್ತಿಗೆ ತೋರಿಸುತ್ತಿಲ್ಲ. ಹೀಗಾಗಿ ಅದು ಗೊತ್ತಾಗಲ್ಲ. ಆದ್ರೆ ಈಗಾಗಲೇ ವಿಶ್ವದ 80 ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಈ ಡೆಲ್ಟಾ ಮುಂದೆ ಇನ್ನೆಷ್ಟು ರಾಷ್ಟ್ರಗಳಿಗೆ ಹರಡುತ್ತೋ ಅನ್ನೋ ಆತಂಕ ಹೆಚ್ಚಾಗುತ್ತಿದೆ. ಈವರೆಗೆ ಕೊರೊನಾ ಜಗತ್ತಿನ 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಾಣಿಸಿಕೊಂಡು ಗಂಡಾಂತರವನ್ನೇ ತಂದೊಡ್ಡಿದೆ. ಈ ನಡುವೆ, ಈ ರೂಪಾಂತರಿ ವೈರಸ್ ಡೆಲ್ಟಾ ಕೂಡ ಎಲ್ಲಾ ಕಡೆ ಹರಡಿ ಬಿಟ್ಟರೆ ಮತ್ತೊಮ್ಮೆ ಜಗತ್ತು ದೊಡ್ಡ ಸಂಕಷ್ಟವನ್ನೇ ಎದುರಿಸಬೇಕಾಗಬಹುದು.

ಭಾರತದಲ್ಲಿ ಹಾಲಿ ತಗ್ಗುತ್ತಿರುವ ಕೊರೊನಾ ಎರಡನೇ ಅಲೆ
ಮೂರನೇ ಅಲೆಗೆ ಇದೇ ಡೆಲ್ಟಾ-ಡೆಲ್ಟಾ ಪ್ಲಸ್ ಕಾರಣವಾಗುತ್ತಾ?
ವೇಗ ಹೆಚ್ಚಿರೋದ್ರಿಂದ 3ನೇ ಅಲೆಯಲ್ಲಿ ದುಪ್ಪಟ್ಟು ಕೇಸ್ ಬರುತ್ತಾ?

ಭಾರತದಲ್ಲಿ ಹಾಲಿ ಕೊರೊನಾ ಎರಡನೇ ಅಲೆ ತಗ್ಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 53 ಸಾವಿರ ಹೊಸ ಪ್ರಕರಣಗಳು ಮಾತ್ರ ದಾಖಲಾಗಿವೆ. ಇದು ಕಳೆದ 88 ದಿನಗಳಲ್ಲೇ ಅತೀ ಕಡಿಮೆ ಪ್ರಕರಣಗಳಿವೆ. ಹಾಲಿ ದೇಶದಲ್ಲಿ 7 ಲಕ್ಷ ಮಂದಿ ಸೋಂಕಿತರಿದ್ದಾರೆ. ಇಷ್ಟಾದರೂ ನಿತ್ಯದ ಕೇಸ್ ಗಳ ಸಂಖ್ಯೆ ಕಡಿಮೆ ಆಗ್ತಾ ಇರೋದ್ರಿಂದ ಇನ್ನು ಹದಿನೈದು ದಿನಗಳಲ್ಲಿ ಎರಡನೇ ಅಲೆ ಸಂಪೂರ್ಣವಾಗಿ ತಗ್ಗಬಹುದು ಅಂತ ಅಂದಾಜಿಸಲಾಗ್ತಾ ಇದೆ. ಆದ್ರೆ ದೇಶದ ಬಹುತೇಕ ಕಡೆ ಅನ್​ಲಾಕ್ ಮಾಡಲಾಗುತ್ತಿದೆ.

ಮುಂಬೈ, ದೆಹಲಿ, ಬೆಂಗಳೂರು ಮಹಾನಗರಗಳಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರಿವೆ. ಜನ ಸಂಚಾರ ಹೆಚ್ಚಾಗಿದೆ. ಏನೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಜನಸಂದಣಿ ಹೆಚ್ಚಾದರೇ ಕೊರೊನಾ ಹರಡೋದು ಸುಲಭ. ಅದರಲ್ಲೂ ಈ ಡೆಲ್ಟಾದಂತಹ ವೈರಸ್ ವೇಗವಾಗಿ ಹರಡೋದ್ರಿಂದ ಮೂರನೇ ಅಲೆಗೆ ಇದೇ ವೈರಾಣು ಕಾರಣವಾಗಿ ಬಿಡುತ್ತಾ ಅನ್ನೋ ಅನುಮಾನವೂ ಕಾಡತೊಡಗಿದೆ. ಹಾಗೇನಾದರೂ ಡೆಲ್ಟಾನೇ ಮೂರನೇ ಅಲೆ ತಂದು ಬಿಟ್ರೆ, ಈ ವೈರಸ್​ನ ವೇಗವೂ ಹೆಚ್ಚಾಗಿರೋದ್ರಿಂದ ಎರಡನೇ ಅಲೆಗಿಂತ ದುಪ್ಪಟ್ಟು ಕೇಸ್ ಗಳು ಬರಬಹುದು. ಹಾಗಾದಾಗ ಈಗಿರುವ ವೈದ್ಯಕೀಯ ಸೌಲಭ್ಯಗಳನ್ನು ಕೂಡ ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ. ಭಾರತದಲ್ಲಿ ಲಸಿಕೆ ಅಭಿಯಾನ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ತಲುಪಿಲ್ಲದ ಕಾರಣ ಬೇರೆ ದೇಶಗಳಿಗಿಂತ ಆತಂಕ ಹೆಚ್ಚಾಗಿಯೇ ಇದೆ. ಮುಂದೇನಾಗುತ್ತೋ ಗೊತ್ತಿಲ್ಲ.

The post ಮತ್ತಷ್ಟು ವೇಷ ಧರಿಸಿದ ಕೊರೊನಾ; ವಿಶ್ವದ 80ಕ್ಕೂ ಹೆಚ್ಚು ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಕಾಟ appeared first on News First Kannada.

Source: newsfirstlive.com

Source link