ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದಲ್ಲಿ ಅಂಗಡಿಗಳ ನಿರ್ಮಾಣಕ್ಕೆ 25 ಮರ ಕಟಾವು ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಿಬಿಎಂಪಿ ಸುಮಾರು 25 ಮರಗಳನ್ನು ಕಡಿದು ಹಾಕಿರುವ ಬಗ್ಗೆ ತಿಳಿದುಬಂದಿದೆ. ಮತ್ತಿಕೆರೆಯ ಚೌಡೇಶ್ವರಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು ಮರ ಕಡಿದಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮರಗಳನ್ನು ಕಡಿಯುವುದಕ್ಕೆ ಅನುಮತಿಯನ್ನು ಪಡೆದಿಲ್ಲ. ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲವೆಂದು ಆರೋಪ ಕೇಳಿಬಂದಿದೆ.
ಮರ ಕಡಿಯುವ ಬದಲು ಸ್ಥಳಾಂತರ ಮಾಡಬಹುದಿತ್ತು. ಮೆಟ್ರೋ ಕಾಮಗಾರಿ ಇಲ್ಲ, ರಸ್ತೆ ಅಗಲೀಕರಣವೂ ಇಲ್ಲ. ಆದರೂ ಮರಗಳನ್ನು ಕಡಿಯುತ್ತಿರುವುದು ಏಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಏಕಾಏಕಿ ಮರ ಕಡಿದ ಕಾರಣ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಫುಟ್ಪಾತ್ ಮೇಲೆ ಅಂಗಡಿಗಳ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದೆಯೇ? ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಂಗಡಿ ನಿರ್ಮಾಣ ಮಾಡಲಾಗುತ್ತದೆಯೇ? ಮರ ಕಡಿದ ಜಾಗದಲ್ಲಿ ಯಾವ ಚಟುವಟಿಕೆ ನಡೆಸಲು ಬಿಡಲ್ಲ ಎಂದು ಮರ ಕಡಿದ ಹಿನ್ನೆಲೆ ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ತೋಟಗಾರಿಕಾ ಇಲಾಖೆ ಸಚಿವರ ಕ್ಷೇತ್ರದಲ್ಲಿ ಮರಗಳಿಗೆ ಉಳಿಗಾಲ ಇಲ್ಲ. 20 ವರ್ಷಗಳಿಂದ ಇದ್ದ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ ಎಂದು ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಹಿತಿ ನೀಡದೆಯೇ ಮರಗಳ ತೆರವು ಮಾಡಲಾಗಿದೆ. ಯಾರಿಗೂ ಗೊತ್ತಿಲ್ಲದೇ ಕರ್ಫ್ಯೂ ಸಮಯದಲ್ಲಿ ಮರ ಕಡಿಯಲಾಗಿದೆ. ಮರ ಕಡಿದ ಜಾಗದಲ್ಲಿ ಯಾವ ಚಟುವಟಿಕೆಗಳನ್ನ ನಡೆಸಲು ಬಿಡೊಲ್ಲ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.