ಮತ್ತೆ ಕೊರೊನಾ ಆತಂಕ ಶುರು; ಬೆಂಗಳೂರಿನ ಖಾಸಗಿ ಶಾಲೆಯಲ್ಲಿ 37 ಜನರಿಗೆ ಸೋಂಕು, ಎಸ್‌ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ ಕೊರೊನಾ ಸ್ಫೋಟ | Thirty seven tested positive for coronavirus in Bengaluru private school


ಮತ್ತೆ ಕೊರೊನಾ ಆತಂಕ ಶುರು; ಬೆಂಗಳೂರಿನ ಖಾಸಗಿ ಶಾಲೆಯಲ್ಲಿ 37 ಜನರಿಗೆ ಸೋಂಕು, ಎಸ್‌ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ ಕೊರೊನಾ ಸ್ಫೋಟ

ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಾಮಾರಿ ಕೊರೊನಾ ಮತ್ತೆ ತನ್ನ ಆಟ ಶುರು ಮಾಡಿದೆ. ನಿನ್ನೆ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈಗ ಬೆಂಗಳೂರಿನ ಮಹದೇವಪುರ ವಲಯದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ನಗರದ ಸರ್ಜಾಪುರ ರಸ್ತೆಯಲ್ಲಿರುವ ದೊಡ್ಡಸಂದ್ರದ ಖಾಸಗಿ ಶಾಲೆಯಲ್ಲಿ 37 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 13 ರಿಂದ 15 ವರ್ಷದ 33 ವಿದ್ಯಾರ್ಥಿಗಳು, ನಾಲ್ವರು ಶಾಲಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಇನ್ನು ಮತ್ತೊಂದೆಡೆ ಧಾರವಾಡದ ಎಸ್‌ಡಿಎಂ ಮೆಡಿಕಲ್ ಕಾಲೇಜಿನ 182 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ನಿನ್ನೆ 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ನಿನ್ನೆ 690 ಜನರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ ಮತ್ತೆ 116 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ಜಿಲ್ಲಾಡಳಿತ ಹಾಸ್ಟೆಲ್‌ ಸೀಲ್‌ಡೌನ್ ಮಾಡಿದೆ.

ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಸಂಖ್ಯೆ ಹೆಚ್ಚಾದ ಹಿನ್ನೆಲೆ ಪಾಲಕರಿಗೂ ಸಂಕಷ್ಟ ಎದುರಾಗಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ‌ ವಿದ್ಯಾರ್ಥಿಗಳ ಪಾಲಕರಿಗೆ ಕೊವಿಡ್ ಟೆಸ್ಟ್‌ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ನ. 17ರಂದು ವಿದ್ಯಾರ್ಥಿಗಳ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಲ್ಲೇ ಕೊರೊನಾ ಪತ್ತೆಯಾಗಿದೆ. ಅದರಲ್ಲೂ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಪಾಲಕರು ಬಂದಿದ್ದ ಆತಂಕ ಹೆಚ್ಚಾಗಿದೆ. ಹೀಗಾಗಿ ಸದ್ಯ ಪಾಲಕರು ತಪಾಸಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Coronavirus: ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ

TV9 Kannada


Leave a Reply

Your email address will not be published. Required fields are marked *