ಮತ್ತೆ ಮಾನವೀಯ ಕಾರ್ಯಗಳ ಮೂಲಕ ಸುದ್ದಿಯಾದ ಸೋನು; ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಿದ ವಿಡಿಯೋ ವೈರಲ್  | Sonu Sood carries road accident victim to hospital watch video here


ಮತ್ತೆ ಮಾನವೀಯ ಕಾರ್ಯಗಳ ಮೂಲಕ ಸುದ್ದಿಯಾದ ಸೋನು; ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಿದ ವಿಡಿಯೋ ವೈರಲ್ 

ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುತ್ತಿರುವ ಸೋನು ಸೂದ್

ಬಹುಭಾಷಾ ನಟ ಸೋನು ಸೂದ್ (Sonu Sood) ತೆರೆಯ ಮೇಲೆ‌ ಖಳನಾಯಕನಾಗಿ ಅಬ್ಬರಿಸುತ್ತಾರೆ.‌ ಆದರೆ ನಿಜ‌ ಜೀವನದಲ್ಲಿ ಅವರನ್ನು ಹೀರೋ‌ ಎಂದು ಅಭಿಮಾನಿಗಳು ಗುರುತಿಸುತ್ತಾರೆ. ಇದಕ್ಕೆ‌ ಕಾರಣಗಳೂ ಇಲ್ಲದಿಲ್ಲ. ಸಹಾಯ ಕೇಳಿದವರಿಗೆ ಸೋನು ಇಲ್ಲ ಎಂದಿದ್ದೇ ಇಲ್ಲ. ತಮ್ಮದೇ ಫೌಂಡೇಶನ್ ಕೂಡ ಸ್ಥಾಪಿಸಿ ಅನೇಕರಿಗೆ ಅವರು ನೆರವು ನೀಡುತ್ತಿದ್ದಾರೆ. ಇದೀಗ ಸೋನು ಸೂದ್ ಅವರ ಹೃದಯ ಶ್ರೀಮಂತಿಕೆ ಸಾರುವ ಮತ್ತೊಂದು ವಿಚಾರ ಬಹಿರಂಗವಾಗಿದೆ. ಪಂಜಾಬ್​ನ ಮೊಗಾ ಸಮೀಪ ಅಪಘಾತವಾಗಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಸೋನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ವರದಿಯಾಗಿದೆ. ಸೋನು ಸೂದ್ ಫೌಂಡೇಶನ್ (Sonu Sood Foundation) ಬುಧವಾರ ಸಂಜೆ ಈ ಕುರಿತು ವಿಡಿಯೋವನ್ನು ಹಂಚಿಕೊಂಡಿದೆ. ಅದರಲ್ಲಿ ಅಪಘಾತದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 19 ವರ್ಷದ ಯುವಕನನ್ನು ಸೋನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ಸೆರೆಯಾಗಿದೆ.

ಎರಡು ಕಾರುಗಳು ಅಪಘಾತವಾಗಿ ಜಖಂಗೊಂಡಿದ್ದವು. ಸೋನು ಮತ್ತು ಅವರ ಗೆಳೆಯರು ಅಪಘಾತವಾಗಿದ್ದ ಗಾಡಿಯ ಒಳಗಿರುವವರನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಹಲವು ಪ್ರಯತ್ನಗಳ ನಂತರ ಅಂತಿಮವಾಗಿ ಸೋನು ಕಾರಿನ ಲಾಕ್ ತೆಗೆಯಲು ಯಶಸ್ವಿಯಾಗಿದ್ದಾರೆ. ಕಾರಿನ ಒಳಗಿದ್ದ ವ್ಯಕ್ತಿಯನ್ನು ಹೊರತೆಗೆದು ನಂತರ ತಮ್ಮ ಕಾರಿನತ್ತ ಸೋನು ಕರೆದೊಯ್ದಿದ್ದಾರೆ. ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ದಿರುವ ಸೋನು, ಚಿಕಿತ್ಸೆ ನೀಡಲು ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ.

ಆಸ್ಪತ್ರೆಯ ವಿಡಿಯೋ ಕೂಡ ಹಂಚಿಕೊಳ್ಳಲಾಗಿದೆ. ಅದರಲ್ಲಿ ಗಾಯಗೊಂಡ ವ್ಯಕ್ತಿ ಸ್ಟ್ರೆಚರ್​ನಲ್ಲಿ ಮಲಗಿದ್ದಾನೆ. ಸೋನು ಕೂಡ ವಿಡಿಯೋದಲ್ಲಿರುವುದು ಕಂಡುಬಂದಿದೆ.ಆ ಸಂದರ್ಭ ಮಹಿಳೆಯೋರ್ವರು ಆಗಮಿಸಿದ್ದು, ಅವರಿಂದ ಎಲ್ಲವೂ ಸರಿಯಾಗಿದೆಯೇ ಎನ್ನುವುದನ್ನು ಸೋನು ಖಚಿತಪಡಿಸಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಹಂಚಿಕೊಂಡಿರುವ ಸೋನು ಸೂದ್ ಫೌಂಡೇಶನ್, ‘ಪ್ರತೀ ಜೀವವೂ ಮುಖ್ಯವಾಗುತ್ತದೆ’ ಎಂದು ಬರೆದುಕೊಂಡಿದೆ.

ಸೋನು ಸೂದ್ ಫೌಂಡೇಶನ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಸೋನು ಸೂದ್​ ಸಾಕಷ್ಟು ಸಾಮಾಜಿಕ ಕೆಲಸಗಳ ಜಾವಾಬ್ದಾರಿ ತೆಗೆದುಕೊಂಡಿದ್ದಾರೆ. ಕೊವಿಡ್​ ಕಾಣಿಸಿಕೊಂಡ ನಂತರದಲ್ಲಿ ಅವರು ಮಾಡಿರುವ ಸೇವೆಗಳು ಒಂದೆರಡಲ್ಲ. ಆರಂಭದಲ್ಲಿ ಕೊರೊನಾ ತಂದ ಸಂಕಷ್ಟಗಳ ಬಗ್ಗೆ ಮಾತ್ರ ಅವರು ಸ್ಪಂದಿಸುತ್ತಿದ್ದರು. ಆ ಬಳಿಕ ಅವರ ಕೆಲಸದ ವ್ಯಾಪ್ತಿ ಹಿರಿದಾಯಿತು. ಪ್ರಸ್ತುತ ಹಲವು ರೂಪಗಳಲ್ಲಿ ಅವರು ಸಹಾಯ ಮಾಡುತ್ತಿದ್ದಾರೆ.

TV9 Kannada


Leave a Reply

Your email address will not be published.