ಬೆಂಗಳೂರು: ಶಿಸ್ತುಪಾಲನ ಸಮಿತಿ ಎಷ್ಟೇ ಬಾರಿ ವಾರ್ನಿಂಗ್ ಮಾಡಿದ್ದರೂ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಯಾರು ಅನ್ನೋದ್ರ ಬಗ್ಗೆ ಘಂಟಾಘೋಷವಾಗಿ ಜೈಕಾರಗಳು ಕೇಳಿಬರುತ್ತಲೇ ಇದೆ. ಡಿಕೆ ಶಿವಕುಮಾರ್ ಅಭಿಮಾನಿಗಳು, ‘ನಮ್ಮ ಮುಂದಿನ ಸಿಎಂ ಡಿಕೆಎಸ್’​ ಎಂದು ಘೋಷಣೆ ಕೂಗಿದ್ರೆ.. ಇತ್ತ ಸಿದ್ದರಾಮಯ್ಯ ಬೆಂಬಲಿಗರೂ ಸಹ ‘ನಮ್ಮ ಮುಂದಿನ ಸಿಎಂ ಸಿದ್ದರಾಮಯ್ಯ’ ಎಂದು ಹೇಳ್ತಿದ್ದಾರೆ.

ವಿವಾದದ ಬೆಂಕಿಗೆ ತುಪ್ಪಾ ಸುರಿದ್ರಾ ಜಮೀರ್..?
ಇನ್ನೊಂದು ವಿಶೇಷ ಅಂದ್ರೆ ಮಾಜಿ ಸಚಿವ ಜಮೀರ್ ಅಹಮ್ಮದ್ ಅವರು, ಪದೇ ಪದೇ ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎಂದು ಹೇಳ್ತಿದ್ದಾರೆ. ಈ ಮೂಲಕ ಕಾಂಗ್ರೆಸ್​ನಲ್ಲಿ ಮುಂದಿನ ಮುಖ್ಯಮಂತ್ರಿ ವಿವಾದ ತಣ್ಣಗಾಗಲು‌ ಬಿಡ್ತಿಲ್ಲ ಅನ್ನೋ ಮಾತುಗಳು ಕೇಳಿಬಂದಿವೆ. ಕಳೆದ ಬಾರಿ ಮುಂದಿನ ಸಿಎಂ ಬಗ್ಗೆ ವಿವಾದ ಭುಗಿಲೆದ್ದಾಗ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ನೋಟಿಸ್ ಜಾರಿ ಮಾಡಿತ್ತು. ಆದರೆ ಈ ಶಿಸ್ತುಪಾಲನಾ ಸಮಿತಿಯ ನೋಟಿಸ್​ಗೆ ಕ್ಯಾರೇ ಎನ್ನದ ಜಮೀರ್ ಅಹಮ್ಮದ್ ಖಾನ್, ಕಾಂಗ್ರೆಸ್ ಪಕ್ಷದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದ ಮುಂದಿನ ಮುಖ್ಯಮಂತ್ರಿ ವಿವಾದದ ಬೆಂಕಿಗೆ ಮತ್ತೆ ತುಪ್ಪ ಸುರಿಯುತ್ತಿದ್ದಾರೆ ಎನ್ನಲಾಗುತ್ತಿದೆ.

‘ಸಿದ್ದರಾಮಯ್ಯನವರೇ ಮುಂದಿನ ಸಿಎಂ ಆಗಬೇಕು’ ಅಂತ ಘಂಟಾಘೋಷವಾಗಿ ಒಂದೇ ವಾರದ ಅಂತರದಲ್ಲಿ ಎರಡೆರಡು ಬಾರಿ ಜಮೀರ್ ಬ್ಯಾಟಿಂಗ್ ನಡೆಸಿದ್ದಾರೆ. ಈ ಮೂಲಕ ಆರ್.ಆರ್‌.ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವೇಳೆ ಭಾರೀ ತಾರಕಕ್ಕೇರಿದ್ದ ಮುಂದಿನ ಸಿಎಂ ವಿವಾದಕ್ಕೀಗ ಮತ್ತೆ ಜೀವ ತುಂಬಿದ್ದಾರೆ ಎನ್ನಲಾಗ್ತಿದೆ.

ಯಾಕೆ ಜಮೀರ್ ಹಾಗೆ ಹೇಳ್ತಿದ್ದಾರೆ..?
ಮೂಲಗಳ ಪ್ರಕಾರ.. ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಕೆಲ ಸಿದ್ದರಾಮಯ್ಯ ನಿಷ್ಠರಿಗೆ ಮುಂದಿನ ಮುಖ್ಯಮಂತ್ರಿ ವಿವಾದ ಜೀವಂತವಾಗಿ ಇರಬೇಕಾಗಿದೆ. ಕಾಂಗ್ರೆಸ್ ಪಕ್ಷದ ಸಂಪ್ರದಾಯದಂತೆ ಪಕ್ಷ ಅಧಿಕಾರಕ್ಕೆ ಬಂದಾಗ ಕೆಪಿಸಿಸಿ ಅಧ್ಯಕ್ಷರಾಗಿದ್ದವರೇ ಮುಖ್ಯಮಂತ್ರಿ ಆಗೋದು ಎಂಬುದನ್ನ ಒಪ್ಪಲು ಸಿದ್ದರಾಮಯ್ಯ ನಿಷ್ಠ ಬೆಂಬಲಿಗರು ತಯಾರಿಲ್ಲ. ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಚರ್ಚೆಯಲ್ಲಿದ್ದರೆ ಮಾತ್ರ ಮುಂದೆ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಶಾಸಕರ ಮತದಾನದ ಮೂಲಕ ಸಿಎಂ ಆಯ್ಕೆ ಸೇರಿದಂತೆ ಬೇರೆ ಬೇರೆ ಪ್ರಕ್ರಿಯೆಗಳು ನಡೆಯಬಹುದು ಅನ್ನೋ ಲೆಕ್ಕಾಚಾರ ಎನ್ನಲಾಗಿದೆ.

ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರ ನಿರ್ವಿವಾದವಾಗಿದ್ದರೆ ಕಾಂಗ್ರೆಸ್ ಪಕ್ಷದ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರಾಗಿದ್ದವರೇ ಸಿಎಂ ಎಂಬಂತಾಗಬಹುದು ಎಂಬ ಆತಂಕ ಶುರುವಾಗಿದೆ. ಈ ಹಿನ್ನಲೆಯಲ್ಲಿ ಮುಂದಿನ ಮುಖ್ಯಮಂತ್ರಿ ವಿವಾದ ಜೀವಂತವಾಗಿಡಲು ಪದೇ ಪದೇ ಹೇಳಿಕೆಗಳನ್ನ ನೀಡ್ತಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.
ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

The post ಮತ್ತೆ ‘ಮುಂದಿನ ಸಿಎಂ ವಿವಾದ’.. ಜಮೀರ್​ ಪದೇ-ಪದೆ ಹೀಗೆ ಹೇಳ್ತಿರೋ ಹಿಂದಿದೆ ‘ಆ’ ಉದ್ದೇಶ appeared first on News First Kannada.

Source: newsfirstlive.com

Source link