ಮತ್ತೆ ಮೇಕೆದಾಟು ಪಾದಯಾತ್ರೆ ಮಾಡೇ ಮಾಡ್ತೀವಿ.. ಸಿದ್ದರಾಮಯ್ಯ ಶಪಥ


ಮೇಕೆದಾಟು ಪಾದಯಾತ್ರೆ ಫೈಟು ಮುಂದುವರೆಯುತ್ತಲೇ ಇದೆ. ಈಗಾಗಲೇ ಕಾಂಗ್ರೆಸ್​ ನಾಯಕರ ಮೇಲೆ ಕೇಸ್​ಗಳು ಬಿದ್ದಿದೆ. ಆದ್ರೆ ಇದೇ ಕೋವಿಡ್​ ರೂಲ್ಸ್ ಉಲ್ಲಂಘಿಸಿದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಿಲ್ಲ. ಇದು ಕೈ ನಾಯಕರನ್ನ ಕೆರಳಿಸಿದೆ. ಇದೇ ವಿಚಾರವಾಗಿ ಇಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ರು.

ಮೇಕೆದಾಟು ಯೋಜನೆ.. ಕಾಂಗ್ರೆಸ್​ ಪಾದಯಾತ್ರೆ.. ಬಿಜೆಪಿ ಕೆಂಡ ಕೆಂಡ.. ಇದು ಕಳೆದ 20 ದಿನಗಳಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಕೊರೊನಾ ಕಷ್ಟದ ಕಾಲ, ವೀಕೆಂಡ್ ಮತ್ತು ನೈಟ್​ ಕರ್ಫ್ಯೂ ಕರಾಳದ ನಡುವೆಯೂ ಕೈ ನಡಿಗೆ ಶುರುಮಾಡಿತ್ತು. ಆದ್ರೆ ಪಾದಯಾತ್ರೆ ಆರಂಭವಾಗಿ ಐದೇ ದಿನಕ್ಕೆ ಮಾರಿಯ ಮುಂದೆ ಕೈ ಶರಣಾಗಬೇಕಾಯ್ತು. ಸೋಂಕಿನ ಸಂಕಟ, ಜನರ ಟೀಕೆ ಮತ್ತು ಸರ್ಕಾರದ ವಿರೋಧಕ್ಕೆ ಪಾದಯಾತ್ರೆ ಸದ್ಯದ ಮಟ್ಟಿಗೆ ಮೊಟಕುಕೊಂಡಿತ್ತು. ಆದ್ರೆ ಇದೇ ಮೇಕೆದಾಟು ಫೈಟಿಗೆ ಕಾಂಗ್ರೆಸ್​ ಹುಲಿಗಳು ಮತ್ತೆ ಜೀವ ತುಂಬಿದ್ದಾರೆ..

ಮೇಕೆದಾಟು ಪಾದಯಾತ್ರೆ ಫೈಟು.. ಸರ್ಕಾರಕ್ಕೆ ‘ಕೈ’ ಏಟು..

ಯೆಸ್.. ನೀರಿಗಾಗಿ ಶುರುವಾದ ಮೇಕೆದಾಟು ಪಾದಯಾತ್ರೆ, ರಾಜಕೀಯ ತಿರುವು ಪಡೆದುಕೊಂಡಿದೆ. ಚುನಾವಣೆಗೆ ಇನ್ನೇನು ಒಂದೂವರೆ ವರ್ಷವಿರುವಾಗಲೇ ಕೈಗೆ ಮೇಕೆದಾಟು ಪಾದಯಾತ್ರೆ ಹೊಸ ಶಕ್ತಿ ತುಂಬಿತ್ತು.. ಇದೇ ಜೋಶ್​​ನಲ್ಲಿ ಕಾಂಗ್ರೆಸ್​ ಹುಲಿಗಳು ಸುಮಾರು 66 ಕಿಮೀ ನಡೆದು ಸುಮ್ಮನಾಗಿದ್ದಾರೆ. ಆದ್ರೀಗ ಮತ್ತೆ ಮೇಕೆದಾಟು ಪಾದಯಾತ್ರೆ ಫೈಟು ಶುರುಮಾಡಿ ಸರ್ಕಾರಕ್ಕೆ ಏಟು ನೀಡಲು ಕಾಂಗ್ರೆಸ್ ಚಿಂತಿಸ್ತಿದೆ.

ಪಾದಯಾತ್ರೆ ಫೈಟ್​ನಲ್ಲಿ ಕೇಸಿನ ಸದ್ದು.. ಕೆಂಡ ಉಗುಳಿದ ಸಿದ್ದು..

ಮೇಕೆದಾಟು ಪಾದಯಾತ್ರೆಗೆ ಸದ್ಯ ಬ್ರೇಕ್​ ಬಿದ್ದಿದೆ. ಆದ್ರೆ ಕಾಂಗ್ರೆಸ್​ ನಾಯಕರ ಮೇಲೆ ಕೇಸೂ ಬಿದ್ದಿದೆ. ಇದು ಸಿದ್ದರಾಮಯ್ಯರವರನ್ನ ಸಿಟ್ಟಿನ ಸುನಾಮಿಗೆ ದೂಡಿದಂತಿದೆ. ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಮೇಲೆ ಕೇಸ್​ ಹಾಕಿದ್ರು, ನನ್ಮೇಲೆ 3, ಪಾಪಾ ನಮ್ಮ ಡಿಕೆಶಿ ಮೇಲೆ 4 ಕೇಸ್ ಹಾಕಿದ್ದಾರೆ ಅಂದ್ರು. ಆದ್ರೆ ಕೊರೊನಾ ರೂಲ್ಸ್ ಉಲ್ಲಂಘಿಸಿದ ಬಿಜೆಪಿ ನಾಯಕರ ಮೇಲೆ ಇದೂವರೆಗೂ ಒಂದೂ ಕೇಸ್ ಹಾಕ್ಕಿಲ್ಲ ಅಂತ ಸಿದ್ದರಾಮ್ಯಯ ಅಸಮಾಧಾನ ಹೊರಹಾಕಿದ್ರು.

ರಾಜ್ಯ ಸರ್ಕಾರದ ವಿರುದ್ಧ ಸವಾರಿ ಮಾಡಿದ ಸಿದ್ದರಾಮಯ್ಯ!

ಆದ್ರೆ, ಇದರ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರರನ್ನ ಕೇಳಿದ್ರೆ ನಂಗೆ ಹೆಚ್ಚಿನ ಮಾಹಿತಿಯೇ ಇಲ್ಲ ಅಂತ ಜಾರಿಕೊಂಡ್ರು. ಇದೇ ವೇಳೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮತ್ತೆ ಪ್ರಾರಂಭಿಸಿದ್ರೆ ಕ್ರಮಕೈಗೊಳ್ಳುತ್ತೇವೆ ಅಂದ್ರು ಆರಗ ಜ್ಞಾನೇಂದ್ರ.

ಇನ್ನೊಂದ್ಕಡೆ ಹೊಗೇನಕಲ್​ನಲ್ಲಿ ತಮಿಳುನಾಡು ಸರ್ಕಾರದ ಯೋಜನೆಗೆ ಕರ್ನಾಟಕ ಸರ್ಕಾರ ತೀವ್ರವಾಗಿ ಖಂಡಿಸ್ತಿದೆ. ಹೊಗೇನಕಲ್​ ಪ್ರದೇಶ ಎರಡೂ ರಾಜ್ಯಗಳ ಗಡಿ ಮಧ್ಯೆಯಿದೆ. ತಮಿಳುನಾಡು ಯೋಜನೆ ಕೈಗೆತ್ತಿಕೊಳ್ಳಲು ನಾವು ಬಿಡಲ್ಲ ಅಂತ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಹೀಗೆ ಮೇಕೆದಾಟು ಯೋಜನೆ ಜಾರಿಗೆ ರಾಜ್ಯ ಸರ್ಕಾರ ಸತತ ಪ್ರಯತ್ನ ಮಾಡ್ತಿದೆ ಅಂತ ಸಚಿವರು ಹೇಳ್ತಿದ್ದಾರೆ. ಆದ್ರೆ ಈ ವಿವಾದ ಸದ್ಯ ಸುಪ್ರೀಂಕೋರ್ಟ್​ನಲ್ಲಿದೆ. ಆದ್ರೂ ಮೇಕೆದಾಟು ಪಾದಯಾತ್ರೆ ಮುಂದುವರೆಸುತ್ತೇವೆ ಅಂತ ಕಾಂಗ್ರೆಸ್ ಹೇಳ್ತಿದೆ.

News First Live Kannada


Leave a Reply

Your email address will not be published. Required fields are marked *