ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ವಿಚಾರವಾಗಿ ಇಂದು ಸಿಎಂ ಬಿ.ಎಸ್​ ಯಡಿಯೂರಪ್ಪ ಹಾಸನ, ಮೈಸೂರು, ಬೆಳಗಾವಿ, ವಿಜಯಪುರ, ಕಲಬುರಗಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದ್ರು.

ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಐದು ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಮೂರು ಗಂಟೆಗಳ ಕಾಲ ಸಭೆ ನಡೆಸಿದ್ದೇನೆ. ಅವರು ನೀಡಿರುವ ಸಲಹೆಗಳನ್ನ ನಾವು ಪಾಲಿಸಲು ಪ್ರಯತ್ನಿಸುತ್ತೇವೆ‌. ಈಗಾಗಲೇ ಪ್ರತಿ ಗ್ರಾಮ ಪಂಚಾಯತ್​​​ಗೆ 50 ಸಾವಿರ ಖರ್ಚು ಮಾಡೋಕೆ ಹೇಳಿದ್ದೇನೆ. ನಾಲ್ಕೈದು ದಿನಗಳಲ್ಲಿ ಕೊರೊನಾ ‌ಕಂಟ್ರೋಲ್ ಗೆ ಬರುತ್ತೆ ಎಂದರು.

ಇದೇ ವೇಳೆ, ಮತ್ತೆ ಲಾಕ್​​ಡೌನ್ ವಿಸ್ತರಣೆ ಮಾಡಲಾಗುತ್ತಾ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅದನ್ನು ಚರ್ಚೆ ಮಾಡಿ ಹೇಳ್ತೇನೆ ಎಂದರು. ಜನರು ಹೀಗೇ ಸಹಕರಿಸಿದರೆ ಲಾಕ್​​ಡೌನ್ ವಿಸ್ತರಣೆ ಅವಶ್ಯಕತೆ ಇಲ್ಲ. ಈಗ ಇರುವ ಲಾಕ್​​​ಡೌನ್ ಜೂನ್ 7ರ ತನಕ ಮುಂದುವರೆಯಲಿದೆ‌. ಪರಿಸ್ಥಿತಿಗೆ ಅನುಗುಣವಾಗಿ ಮುಂದೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ರು.

ಪಿಎಮ್ ಕೇರ್ಸ್​​ ಅಡಿ ನೀಡಲಾಗಿರೋ ವೆಂಟಿಲೇಟರ್ ಬಳಕೆ ಮಾಡದಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಎಸ್​ವೈ, ವೆಂಟಿಲೇಟರ್‌ನಲ್ಲಿ ಕೆಲವೊಂದು ಸಮಸ್ಯೆ ಇದೆ. ಅದನ್ನ ಸರಿಪಡಿಸೋ ಕೆಲಸ ಮಾಡಲಾಗ್ತಿದೆ ಎಂದರು. ಇನ್ನು ಬ್ಲಾಕ್ ಫಂಗಸ್ ಚಿಕಿತ್ಸೆಗೆ ಆ್ಯಂಫೋಟೆರಿಸಿನ್-ಬಿ ಔಷಧಕ್ಕಾಗಿ ಸದಾನಂದಗೌಡರ ಜೊತೆ ಮಾತನಾಡಿದ್ದೇವೆ. ಔಷಧ ಪೂರೈಕೆ ಮಾಡೋದಾಗಿ ಹೇಳಿದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ಆ್ಯಂಫೋಟೆರಿಸಿನ್-ಬಿ ಔಷಧವನ್ನ ಕಾಳಸಂತೆಯಲ್ಲಿ ಮಾರಾಟ ಮಾಡ್ತಾ ಇದ್ದಾರೆ. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

 

The post ಮತ್ತೆ ಲಾಕ್​ಡೌನ್ ವಿಸ್ತರಣೆ ಬಗ್ಗೆ ಸಿಎಂ ಏನಂದ್ರು..? appeared first on News First Kannada.

Source: newsfirstlive.com

Source link