ಮತ್ತೆ ವಿವಾದದಲ್ಲಿ ‘ಮಕ್ಕಳ ಸೆಲ್ವನ್’​.. ಸೇತುಪತಿಗೆ ಒದೆ ನೀಡಿದ್ರೆ ₹1 ಸಾವಿರ ಬಹುಮಾನ ಘೋಷಣೆ


ಮೋಸ್ಟ್‌ ವಾಂಟೆಡ್‌ಗಳ ತಲೆಗೆ ಬೆಲೆ ಘೋಷಣೆ ಮಾಡುವುದನ್ನು ನೋಡಿದ್ದೀರಿ. ಕೈ, ಕಾಲು, ನಾಲಿಗೆ ಕತ್ತರಿಸಿಲು ಫತ್ವಾ ಹೊರಡಿಸಿದವರನ್ನು ನೋಡಿದ್ದೀರಿ. ಆದ್ರೆ, ಒಂದು ಒದೆಗೆ ಇಂತಿಷ್ಟು ಅಂತ ಹಣ ಘೋಷಣೆ ಮಾಡಿದವರನ್ನು ನೋಡಿದ್ದೀರಾ? ಅದು ಒಬ್ಬ ಸ್ಟಾರ್‌ ನಟನಿಗೆ ಈ ರೀತಿಯ ಘೋಷಣೆ ಮಾಡಿದ್ರೆ ಏನಾಗಬೇಡ?

ಹೀರೋ ಆಗಿ, ವಿಲನ್‌ ಆಗಿ ಮಿಂಚುತ್ತಿರೋ ತಮಿಳು ನಟ ವಿಜಯ್‌ ಸೇತುಪತಿ ಅಭಿನಯಕ್ಕೆ ಎಂಥವರಾದ್ರೂ ಮಾರು ಹೋಗುತ್ತಾರೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅನೇಕ ರಾಜ್ಯ ಪ್ರಶಸ್ತಿಗಳ ಜೊತೆ ರಾಷ್ಟ್ರೀಯ ಪ್ರಶಸ್ತಿಯನ್ನು ಈ ನಟ ಪಡೆದಿದ್ದಾರೆ. ಆದ್ರೆ, ಆಗಾಗ ವಿವಾದಗಳು ಈ ನಟನ ಬೆನ್ನ ಹಿಂದೆ ಬೀಳುತ್ತಲೇ ಇವೆ. ಹೀಗಾಗಿ ಅಭಿಮಾನಿಗಳು ಯಾವ ಸಂಖ್ಯೆಯಲ್ಲಿ ಇದ್ದಾರೋ ಅದೇ ರೀತಿ ವಿರೋಧಿಗಳ ಸಂಖ್ಯೆಯೂ ಸೇತುಪತಿಗೆ ಇದೆ.

ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಜಯ್‌ ಸೇತುಪತಿ ಮತ್ತು ಆತನ ಪಿಎ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬ ನುಗ್ಗಿ ಬರುತ್ತಾನೆ. ಆದ್ರೆ, ಅಲ್ಲಿರೋ ಭದ್ರತಾ ಸಿಬ್ಬಂದಿ ಆತನ್ನನ್ನು ತಡೆದು ವಶಕ್ಕೆ ಪಡೆಯುತ್ತಾರೆ. ಈ ಘಟನೆಗೆ ಕಾರಣ ವಿಮಾನದಲ್ಲಿ ವಿಜಯ್‌ ಸೇತುಪತಿ ಪಿಎ ಮತ್ತು ಸಹಪ್ರಯಾಣಿಕನ ನಡುವಿನ ಗಲಾಟೆಯಾಗಿತ್ತು. ಅಂದ ಹಾಗೇ ಈ ಘಟನೆಯ ಬಗ್ಗೆ ಸೇತುಪತಿ ಕೂಡ ಅದೊಂದು ಚಿಕ್ಕ ಘಟನೆ ಅದನ್ನು ಬೆಳೆಸುವುದು ಬೇಡ, ಹಲ್ಲೆ ಮಾಡಲು ಬಂದ ವ್ಯಕ್ತಿ ಮದ್ಯಪಾನ ಮಾಡಿದ್ದ ಅಂದಿದ್ದಾರೆ. ಈ ಘಟನೆ ನಡೆದು ಇನ್ನೂ ಒಂದು ವಾರವೂ ನಡೆಯಲ್ಲ. ಈ ನಡುವೆ ವಿಜಯ್‌ ಸೇತುಪತಿಯನ್ನು ಟಾರ್ಗೆಟ್‌ ಮಾಡಿ ಮತ್ತೊಂದು ಟ್ವೀಟ್‌ ಆಗಿದೆ.

ಸೇತುಪತಿಗೆ ಒಂದು ಒದೆ ನೀಡಿದ್ರೆ ₹1001
ಬಹುಮಾನ ಘೋಷಣೆಯ ಟ್ವೀಟ್‌ ವೈರಲ್‌

ಯೆಸ್‌, ಇದೇ ನೋಡಿ ವೈರಲ್‌ ಆಗಿರೋ ಟ್ವೀಟ್‌. ವಿಜಯ್‌ ಸೇತುಪತಿಗೆ ಒಂದು ಒದೆ ನೀಡಿದ್ರೆ 1,001 ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಈ ರೀತಿ ಘೋಷಣೆ ಮಾಡಿದವರು ಹಿಂದೂ ಮಕ್ಕಳ್‌ ಕಚ್ಚಿ ಎಂಬ ಟ್ವೀಟರ್‌ ಖಾತೆಯಲ್ಲಿ. ಭಾರೀ ವೈರಲ್‌ ಆಗಿರೋ ಈ ಟ್ವೀಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ. ವಿಜಯ್‌ ಸೇತುಪತಿ ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದ್ರೆ, ವಿಜಯ್‌ ಮಾಡಿದ ತಪ್ಪಾದ್ರು ಏನು? ವಿಜಯ್‌ ಮೇಲೆ ಅಷ್ಟೊಂದು ದ್ವೇಷ ಸಾಧಿಸಲು ಕಾರಣ ಏನು?

ಸ್ವಾತಂತ್ರ್ಯ ಹೋರಾಟಗಾರರ ಅವಮಾನಿಸಿದ್ರಾ?

ವಿಲನ್‌ ಆಗಿ, ಹೀರೋ ಆಗಿ ತಮಿಳು ಇಂಡಸ್ಟ್ರೀಯಲ್ಲಿ ಮಿಂಚುತ್ತಿರೋ ನಟ ವಿಜಯ್‌ ಸೇತುಪತಿ. ಕಲಾವಿದನಾಗಿ ತನ್ನದೇ ಆದ ಛಾಪು ಮೂಡಿಸಿಕೊಂಡಿರುವ ವ್ಯಕ್ತಿ. ಹೀಗಾಗಿ ಈತನಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಸೇತುಪತಿ ಚಿತ್ರ ಅಂದ್ರೆ ಥಿಯೇಟರ್‌ಗೆ ಅಭಿಮಾನಿಗಳು ನುಗ್ಗುತ್ತಾರೆ. ಈ ನಡುವೆ ವಿವಾದವೊಂದನ್ನು ಸೇತುಪತಿ ಮೈಮೇಲೆ ಎಳೆದುಕೊಂಡಿದ್ದಾರೆ. ಅದು ಸತ್ಯ ಹೌದೋ ಅಲ್ವೋ ಅನ್ನೋದು ಖಚಿತವಾಗಿಲ್ಲ. ಆದ್ರೆ, ಆರೋಪ ಮಾತ್ರ ಇದೆ. ಅದೇನಂದ್ರೆ, ಸ್ವಾತಂತ್ರ್ಯ ಹೋರಾಟಗಾರರೊಬ್ಬರನ್ನು ಸೇತುಪತಿ ಅವಮಾನಿಸಿದ್ದಾರೆ ಎನ್ನುವುದು. ಹೌದು, ಸ್ವಾತಂತ್ರ್ಯ ಹೋರಾಟಗಾರ ದೈವತಿರು ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅಯ್ಯ ಅವರಿಗೆ ಸೇತುಪತಿ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಹೀನ್ನೆಲೆಯಲ್ಲಿ ಸೇತುಪತಿಗೆ ಒದೆ ನೀಡಿದ್ರೆ 1,001 ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅಷ್ಟಕ್ಕೂ ಈ ವಿವಾದ ಮತ್ತಷ್ಟು ಭುಗಿಲೆದ್ದಿದ್ದು ಹೇಗೆ ಗೊತ್ತಾ?

ಇದು ಮತ್ತೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ನಿಲ್ಲುತ್ತದೆ. ಹೌದು, ಇತ್ತೀಚೆಗೆ ವಿಜಯ್‌ ಸೇತುಪತಿ ಮತ್ತು ಆತನ ಪಿಎಂ ಮೇಲೆ ಹಲ್ಲೆ ಮಾಡಲು ಮುಂದಾಗಿದ್ನಲ್ಲ. ಅದೇ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರ ಮುತ್ತುರಾಮಲಿಂಗ ತೇವರ್​ಗೆ ವಿಜಯ್​ ಸೇತುಪತಿ ಅವಮಾನ ಮಾಡಿದ್ದಾರೆ. ಇದೇ ಕಾರಣಕ್ಕೆ ತಾನು ಹಲ್ಲೆ ಮಾಡಲು ಮುಂದಾಗಿದ್ದೆ ಅಂತ ತಿಳಿಸಿದ್ದಾನೆ. ಆ ಪ್ರಯಾಣಿಕನ ಹೆಸರು, ಮಹಾ ಗಾಂಧಿ. ಆತ ಹಾಗೆ ಹೇಳಿದ ಮೇಲೆ ವಿವಾದ ಮತ್ತಷ್ಟು ಹೆಚ್ಚಾಗಿದೆ.

ಕ್ಷಮೆಯಾಚಿಸುವಂತೆ ವಿಜಯ್‌ ಸೇತುಪತಿಗೆ ಆಗ್ರಹ
ಕ್ಷಮೆ ಕೇಳುವವರೆಗೂ ಪ್ರತಿ ಒದೆಗೆ ₹1001

ಈ ವಿವಾದಕ್ಕೆ ಸಂಬಂಧ ಪಟ್ಟಂತೆ ತಮಿಳುನಾಡಿದ ವಿವಾದಾತ್ಮಕ ರಾಜಕಾರಣಿ ಅರ್ಜುನ್‌ ಸಂಪತ್‌ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯ್‌ ಸೇತುಪತಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಕೂಡಲೇ ಕ್ಷಮೆ ಕೇಳಬೇಕು. ಎಲ್ಲಿಯವರೆಗೆ ಕ್ಷಮೆ ಕೇಳುವುದಿಲ್ಲವೋ ಅಲ್ಲಿಯವರೆಗೂ ನಾವು ಬೀಡುವುದಿಲ್ಲ. ಪ್ರತಿ ಒದೆಗೆ 1 ಸಾವಿರ ರೂಪಾಯಿ ಬಹುಮಾನ ನೀಡುತ್ತೇವೆ ಅಂತ ತಿಳಿಸಿದ್ದಾರೆ.

ಒದೆ ಘೋಷಣೆಗೆ ಮೌನವಹಿಸಿದ ಸೇತುಪತಿ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನಡೆದ ಘಟನೆ ದುರಾದೃಷ್ಟಕರ. ಅದೊಂದು ಚಿಕ್ಕ ಘಟನೆ. ಅಷ್ಟೊಂದು ದೊಡ್ಡದಾಗಿ ಮಾಡುವ ಅಗತ್ಯ ಇಲ್ಲ ಅಂತ ವಿಜಯ್‌ ಸೇತುಪತಿ ಸ್ಪಷ್ಟನೆ ನೀಡಿದ್ರು. ಆ ಮೂಲಕ ಆ ವಿವಾದಕ್ಕೆ ತೆರೆ ಎಳೆದಿದ್ರು. ಆದ್ರೆ, ಒಂದು ಒದೆಗೆ 1001 ರೂಪಾಯಿ ಘೋಷಣೆಯ ಬಗ್ಗೆ ವಿಜಯ್‌ ಮೌನವಹಿಸಿದ್ದಾರೆ. ಆ ಟ್ವೀಟ್‌ಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಯನ್ನು ವಿಜಯ್‌ ನೀಡಿಲ್ಲ. ಹೀಗಾಗಿ ಈ ಘಟನೆ ಇನ್ನಷ್ಟು ರಕ್ಕೆಪುಕ್ಕ ಕಟ್ಟಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಚರ್ಚೆ ಹುಟ್ಟುಹಾಕಿದೆ.

ಸಿನಿಮಾ ಸ್ಟಾರ್‌ಗಳ ಸುತ್ತ ವಿವಾದ ಹುಟ್ಟಿಕೊಳ್ಳುವುದು ಹೊಸ ವಿಚಾರವಲ್ಲ. ಆದ್ರೆ, ವಿವಾದ ಹುಟ್ಟಿಕೊಂಡಾಗಲೇ ಅದಕ್ಕೆ ಸ್ಪಷ್ಟನೆ ನೀಡುವ ಕೆಲಸ ಆಗಬೇಕು. ಆ ಮೂಲಕ ವಿವಾದಕ್ಕೆ ತೆರೆ ಎಳೆಯಬೇಕು. ವಿಜಯ್‌ ಸೇತುಪತಿ ವಿಚಾರದಲ್ಲಿ ಆ ಕೆಲಸ ಆಗುತ್ತಿಲ್ಲ.

News First Live Kannada


Leave a Reply

Your email address will not be published. Required fields are marked *