ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಮೈಸೂರಿನಲ್ಲೇ ತಯಾರಾದ ಶಂಕರಾಚಾರ್ಯರ ಪ್ರತಿಮೆಯ ನಾಳೆ ಕೇದಾರನಾಥದಲ್ಲಿ ಅನಾವರಣಗೊಳ್ಳಲಿದೆ. ಶಿಲ್ಪ ಕಲಾವಿಧ ಅರುಣ್ ಯೋಗಿರಾಜ್ ಕೈ ಚಳಕದಲ್ಲಿ ಮೂಡಿಬಂದಿರುವ ಪ್ರತಿಮೆ ಶಿಫ್ಟ್ ಮಾಡಿದ್ದೆ ಒಂದು ಸಾಹಸ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ.
ಅದ್ವೈತ ತತ್ವ ಪ್ರತಿಪಾದಕ ಶಂಕರಾಚಾರ್ಯರ ಸ್ಮಾರಕ, ಮ್ಯೂಸಿಯಂ ನಾಳೆ ಕೇದಾರನಾಥದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರಮೋದಿ ಶಂಕರಾಚಾರ್ಯರ ಪ್ರತಿಮೆಯನ್ನ ಅನಾವರಣ ಮಾಡುವ ಮೂಲಕ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ನಾಳೆ ಮೋದಿ ಅನಾವರಣ ಮಾಡುತ್ತಿರುವ ಈ ಪ್ರತಿಮೆ ನಿರ್ಮಾಣವಾಗಿದ್ದು ನಮ್ಮ ಕರ್ನಾಟಕದಲ್ಲಿ, ಅದು ಅರಮನೆ ನಗರಿ ಮೈಸೂರಿನಲ್ಲಿ.
ಕನ್ನಡಿಗನ ಕಲಾ ಕುಸುರಿ
ಹೌದು ಖ್ಯಾತ ಶಿಲ್ಪ ಕಲಾವಿದ ಹಾಗು ಬ್ರಹ್ಮಶ್ರೀ ಕಶ್ಯಪ್ ಶಿಲ್ಪ ಕಲಾನೀಕೇತನ ಮುಖ್ಯಸ್ಥ ಅರುಣ್ ಯೋಗಿರಾಜ್ ಈ ಅದ್ಬುತವಾದ ಶಂಕರಾಚಾರ್ಯರ ಪ್ರತಿಮೆಯನ್ನ ನಿರ್ಮಾಣ ಮಾಡಿದ್ದಾರೆ. ಸತತ ಒಂಭತ್ತು ತಿಂಗಳ ಕಾಲ ನಡೆದ ಕೆತ್ತನೆ ಕಾರ್ಯದಿಂದ ಈ ಭವ್ಯವಾದ ಪ್ರತಿಮೆ ಮೂಡಿ ಬಂದಿದೆ.
ಶಂಕರಚಾರ್ಯರು ಐಕ್ಯವಾದ ಸ್ಥಳದಲ್ಲಿ ‘ಶ್ರೀ ಶಂಕರಾಚಾರ್ಯರ ಅಧ್ಯಯನ ಪೀಠ ಮತ್ತು ಮ್ಯೂಸಿಯಂ’ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಶಂಕರಾಚಾರ್ಯರ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ದೇಶದಾದ್ಯಂತ ಹಲವು ಶಿಲ್ಪ ಕಲಾವಿದರನ್ನು ಆಹ್ವಾನಿಸಲಾಗಿತ್ತು, ಅದರಲ್ಲಿ ಕರ್ನಾಟಕದ ನಾಲ್ಕು ಶಿಲ್ಪಿಗಳ ಹೆಸರನ್ನು ಸೂಚಿಸಲಾಗಿತ್ತು.’
ಅರಮನೆ ನಗರಿ ಕಲಾವಿದನಿಗೆ ಒದಗಿ ಬಂದ ಅವಕಾಶ
ಅಂತಿಮವಾಗಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಶಂಕರಾಚಾರ್ಯ ಪ್ರತಿಮೆ ಮಾಡುವ ಅವಕಾಶ ಒದಗಿ ಬಂದಿತ್ತು. 2020ರ ಸೆಪ್ಟೆಂಬರ್ನಲ್ಲಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ 2 ಅಡಿ ಎತ್ತರದ ಶಂಕರಾಚಾರ್ಯ ಮೂರ್ತಿ ಮಾದರಿಯನ್ನು ಪ್ರಧಾನಿ ಮೋದಿ ಅವರಿಗೆ ನೋಡಲು ಕಳುಹಿಸಿದ್ದರು. ಇದನ್ನು ನೋಡಿದ ಮೋದಿ ಅವರು ಶಂಕರಾಚಾರ್ಯರ ಅವರ ಪ್ರತಿಮೆ ಮಾಡಲು ತಮ್ಮ ಇಲಾಖೆ ಮೂಲಕ ಅರುಣ್ ಯೋಗಿರಾಜ್ ಅವರಿಗೆ ಸೂಚನೆ ಕೊಟ್ಟಿದ್ದರು.
ಆ ಬಳಿಕ ಅರುಣ್ ಯೋಗಿರಾಜ್ ಅವರು ಸರಸ್ವತಿಪುರಂನಲ್ಲಿರುವ ತಮ್ಮ ಬ್ರಹ್ಮಶ್ರೀ ಕಶ್ಯಪ್ ಶಿಲ್ಪ ಕಲಾನೀಕೇತನದಲ್ಲಿ, ಶಂಕರಾಚಾರ್ಯಯರ ಈ ಅದ್ಭುತ ಪ್ರತಿಮೆಯನ್ನ ಸಿದ್ಧಗೊಳಿಸಿದ್ದರು. ಇನ್ನು 12 ಅಡಿ ಉದ್ದ, 9 ಅಡಿ ಅಗಲದ 28 ಟನ್ ತೂಕದ ಈ ಪ್ರತಿಮೆಯನ್ನ ಶಿಫ್ಟ್ ಮಾಡಿದ್ದೇ ಒಂದು ಸಾಹಸ.
ಕಲಾವಿದನ ಕಲೆ ಮೆಚ್ಚಿ ಹೊಗಳಿದ ಉತ್ತರಾಖಾಂಡ್ ಸಿಎಂ
ಪ್ರತಿಮೆ ಮಾಡಲು ಹಾಸನದ ಬೇಲೂರು, ಹಳೇಬೀಡಿನ ಶಿಲ್ಪಕಲೆಗೆ ಬಳಸಿರುವ ಕೃಷ್ಣಶಿಲೆ ಕಲ್ಲನ್ನು ಬಳಸಲಾಗಿದೆ. ಮಳೆ, ಬಿಸಿಲು, ಬೆಂಕಿ ನೀರಿನಿಂದ ಯಾವುದೇ ಹಾನಿಯಾಗುವುದಿಲ್ಲ, ಈ ಭವ್ಯವಾದ ಪ್ರತಿಮೆಯನ್ನ ಕಂಡ ಉತ್ತರಖಾಂಡ್ ಮುಖ್ಯಮಂತ್ರಿ ಟ್ವಿಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ಅರುಣ್ ಯೋಗಿರಾಜ್‌ರವರ ಈ ಕಾರ್ಯ ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೊಂದು ಹೆಗ್ಗಳಿಕೆ ತಂದುಕೊಟ್ಟಿದೆ. ಅದರಂತೆ ನಾಳೆ ಮೈಸೂರು ಶಿಲ್ಪ ಕಲಾವಿದನಿಂದ ಮೂಡಿಬಂದ ಈ ಪ್ರತಿಮೆಯನ್ನ ಪ್ರಧಾನಿ ಮೋದಿ ಅನಾವರಣ ಮಾಡುತ್ತಿರೋದು ಹೆಮ್ಮೆಯ ವಿಚಾರ.
ಹೆಬ್ಬಾಕ ತಿಮ್ಮೇಗೌಡ ನ್ಯೂಸ್‌ಫಸ್ಟ್ ಮೈಸೂರು