ಮತ್ತೊಂದು ಗೆಟಪ್​ನಲ್ಲಿ ರಾಮ್​ ಚರಣ್​; ‘ಆಚಾರ್ಯ’ ಟ್ರೇಲರ್​ಗೆ ಮೆಚ್ಚುಗೆ | Ram Charan And Chiranjeevi Starrer Acharya Trailer getting praises from Audience


ಮತ್ತೊಂದು ಗೆಟಪ್​ನಲ್ಲಿ ರಾಮ್​ ಚರಣ್​; ‘ಆಚಾರ್ಯ’ ಟ್ರೇಲರ್​ಗೆ ಮೆಚ್ಚುಗೆ

ರಾಮ್ ಚರಣ್-

ಮಾರ್ಚ್​ 25ರಂದು ತೆರೆಗೆ ಬಂದಿದ್ದ ‘ಆರ್​ಆರ್​ಆರ್’ ಸಿನಿಮಾದಲ್ಲಿ (RRR Movie)  ಪೊಲೀಸ್ ಅಧಿಕಾರಿಯಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು ರಾಮ್​ ಚರಣ್ (Ram Charan). ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸುತ್ತಲೇ ಇದೆ. ಹೀಗಿರುವಾಗಲೇ ರಾಮ್ ಚರಣ್ ಅಭಿನಯದ ‘ಆಚಾರ್ಯ’ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ಈ ಚಿತ್ರದ ಟ್ರೇಲರ್ (Acharya Trailer) ಇಂದು (ಏಪ್ರಿಲ್ 12) ರಿಲೀಸ್ ಆಗಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ರಾಮ್​ ಚರಣ್ ತಂದೆ ಚಿರಂಜೀವಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದಾರೆ. ಈ ಸಿನಿಮಾ ಏಪ್ರಿಲ್ 29ರಂದು ತೆರೆಗೆ ಬರುತ್ತಿದೆ.

ಒಂದು ಕಡೆ ಕಾಡು ಹಾಗೂ ಮತ್ತೊಂದು ಕಡೆ ನದಿ. ಈ ಕಾಡಿನ ಮಧ್ಯೆ ವಾಸವಾಗಿರುತ್ತಾನೆ ಕಥಾ ನಾಯಕ. ಆ ಊರಿನವರು ಕಷ್ಟ ಬಂದರೆ ಅಲ್ಲಿರುವ ದೇವಿಯ ಮೊರೆ ಹೋಗುತ್ತಾರೆ. ಕೆಟ್ಟವರು ಬಂದರೆ ಅವರ ನಾಶ ಖಂಡಿತ. ಇಂತಹ ಊರಿನಲ್ಲಿ ಅರಾಜಕತೆ ನಡೆಯೋಕೆ ಶುರುವಾಗುತ್ತದೆ. ಆಗ ಚಿರಂಜೀವಿ ಎಂಟ್ರಿ ಆಗುತ್ತದೆ. ಸೋನು ಸೂದ್ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ರಾಮ್​ ಚರಣ್ ಹಾಗೂ ಚಿರಂಜೀವಿ ಸಖತ್​ ಆ್ಯಕ್ಷನ್​ನಲ್ಲಿ ಮಿಂಚಿದ್ದಾರೆ. ಟ್ರೇಲರ್​ನಲ್ಲಿ ಪೂಜಾ ಹೆಗ್ಡೆ ಒಂದು ದೃಶ್ಯಕ್ಕೆ ಮಾತ್ರ ಸೀಮಿತವಾಗಿದ್ದಾರೆ.

ಪೂಜಾ ಹೆಗ್ಡೆಗೆ ಈ ಸಿನಿಮಾ ವಿಶೇಷವಾಗಿದೆ. ಕಳೆದ ತಿಂಗಳು ಅವರ ನಟನೆಯ ‘ರಾಧೆ ಶ್ಯಾಮ್​’ ತೆರೆಗೆ ಬಂದಿತ್ತು. ಬುಧವಾರ (ಮಾರ್ಚ್ 13​) ‘ಬೀಸ್ಟ್​’ ತೆರೆಗೆ ಬರುತ್ತಿದೆ. ಇದಾದ ಬಳಿಕ ‘ಆಚಾರ್ಯ’ ಸಿನಿಮಾ ತೆರೆಗೆ ಬರುತ್ತಿದೆ. ಎರಡು ತಿಂಗಳ ಅವಧಿಯಲ್ಲಿ ಅವರ ನಟನೆಯ ಮೂರು ಸಿನಿಮಾಗಳು ರಿಲೀಸ್ ಆಗುತ್ತಿವೆ. ಮುಂಬರುವ ಎರಡು ಚಿತ್ರಗಳ ಪೈಕಿ ಯಾವ ಸಿನಿಮಾ ಪೂಜಾಗೆ ಯಶಸ್ಸು ತಂದುಕೊಡಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಪಾತ್ರವರ್ಗದಲ್ಲಿ ಚಿರಂಜೀವಿ, ರಾಮ್​ ಚರಣ್​, ಪೂಜಾ ಹೆಗ್ಡೆ, ಸೋನು ಸೂದ್​ ಜತೆಗೆ ಕಾಜಲ್​ ಅಗರ್​ವಾಲ್ ಕೂಡ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಕೊರಟಾಲ ಶಿವ ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಮಣಿ ಶರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ.  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಫೆಬ್ರವರಿ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ.

TV9 Kannada


Leave a Reply

Your email address will not be published.