ಚೆನ್ನೈ:  ಹಿಟ್ ಮ್ಯಾನ್ ರೋಹಿತ್ ಶರ್ಮಾ ಇಂದು ಮತ್ತೊಂದು ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ 4000 ರನ್ ಗಳಿಸಿ ಸಾಧನೆಗೈದಿದ್ದಾರೆ.

ಸ್ಫೋಟಕ ಆಟಗಾರ ರೋಹಿತ್ ಶರ್ಮಾ ಅವರ ನೂತನ ದಾಖಲೆಗೆ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂ ಸಾಕ್ಷಿಯಾಗಿದೆ. ಇಂದು ಈ ಮೈದಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 25 ಎಸೆತಗಳಲ್ಲಿ 32 ರನ್ ಸೇರಿಸುವ ಮೂಲಕ ನಾಯಕನಾಗಿ 4000 ರನ್ ಗಳಿಸಿದ ದಾಖಲೆ ಬರೆದಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ 5 ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿದೆ. ಟಿ20 ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಶರ್ಮಾ ಮತ್ತೊಂದು ದಾಖಲೆ ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಇನ್ನುಳಿದಂತೆ 38 ಟೆಸ್ಟ್‌ ಪಂದ್ಯಗಳಲ್ಲಿ 2615 ರನ್, 227 ಏಕದಿನ ಪಂದ್ಯಗಳಲ್ಲಿ 9205 ರನ್, 111 ಟಿ20 ಪಂದ್ಯಗಳಲ್ಲಿ 2864 ರನ್ ಮತ್ತು 203 ಐಪಿಎಲ್ ಪಂದ್ಯಗಳಲ್ಲಿ 5324 ರನ್ ದಾಖಲೆ ಹೊಂದಿದ್ದಾರೆ. ಏಕದಿನದಲ್ಲಿ ವೈಯಕ್ತಿಕ ಅತ್ಯಧಿಕ ರನ್ ವಿಶ್ವದಾಖಲೆ ಇವರ (264 ರನ್) ಹೆಸರಿನಲ್ಲಿದೆ.

ಹೈದರಾಬಾದ್‍ಗೆ 151 ಟಾರ್ಗೆಟ್ :

ಇನ್ನು ಇಂದು ನಡೆದ ಪಂದ್ಯದಲ್ಲಿ ಎದುರಾಳಿ ತಂಡ ಸನ್ ರೈಸರ್ಸ್ ಹೈದರಾಬಾದ್ ಗೆ ಮುಂಬೈ ಇಂಡಿಯನ್ಸ್ ತಂಡ 151 ರನ್‍ಗಳ ಗುರಿ ನೀಡಿದೆ. ಎಂಐ ಪರ ಕ್ವಿಂಟನ್ ಡಿ ಕಾಕ್ ( 40 ರನ್, 39 ಎಸೆತ), ರೋಹಿತ ಶರ್ಮಾ ( 32 ರನ್, 25 ಎಸೆತ) ಹಾಗೂ ಕೈರನ್ ಪೋಲಾರ್ಡ್ ( 35 ರನ್, 22 ಎಸೆತ) ಭರ್ಜರಿಯಾಗಿ ಆಟವಾಡಿದರು.

ಕ್ರೀಡೆ – Udayavani – ಉದಯವಾಣಿ
Read More