ಮತ್ತೊಂದು ರೂಪದಲ್ಲಿ ಎಂಟ್ರಿ ಕೊಟ್ಟ ಹೆಮ್ಮಾರಿ ಕೊರೊನಾ

ಜಗತ್ತು ಈಗಷ್ಟೇ ಕೋವಿಡ್‌ ಹೊಡೆತದಿಂದ ಸ್ವಲ್ಪ ಸ್ವಲ್ಪ ಸುಧಾರಿಸಿಕೊಳ್ತಿದೆ. ಹೀಗಿರುವಾಗ ಹೋದಿಯಾ ಪಿಶಾಚಿ ಅಂದ್ರೆ ಮತ್ತೆ ಬಂದೆ ಗವಾಕ್ಷಿ ಎಂಬಂತೆ, ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ರೂಪಾಂತರಿ ಪತ್ತೆಯಾಗಿದೆ. ಇದು ದೇಶಕ್ಕೂ ಎಂಟ್ರಿಯಾಗೋ ಭೀತಿ ಶುರುವಾಗಿದ್ದು, ಭಾರತಕ್ಕೆ ನೋ ಎಂಟ್ರಿ ಹೇಳೋಕೆ ಕೇಂದ್ರ ಸಕಲ ಸಿದ್ಧತೆ ಮಾಡಿಕೊಳ್ತಿದೆ.

ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಮತ್ತೊಂದು ರೂಪ
ಯೆಸ್, ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಹೊಸ ಕೋವಿಡ್ ರೂಪಾಂತರವನ್ನು ಪತ್ತೆ ಮಾಡಿದ್ದಾರೆ. ಇದು ಈಗಷ್ಟೇ ಕೋವಿಡ್‌ ಹೊಡೆತದಿಂದ ಚೇತರಿಸಿಕೊಳ್ತಿರೋ ವಿಶ್ವಕ್ಕೆ ಮತ್ತೊಂದು ಶಾಕ್ ಎದುರಾದಂತಾಗಿದೆ. ಈ ರೂಪಾಂತರಿ ಬಗ್ಗೆ ಇಡೀ ವಿಶ್ವವೇ ಭಾರೀ ಎಚ್ಚರಿಕಾ ಕ್ರಮಗಳನ್ನು ಅನುಸರಿಸೋಕೆ ಮುಂದಾಗಿವೆ. ಅದರಂತೆ ಭಾರತವೂ ಕೂಡ ಬೋಟ್ಸ್ವಾನಾ, ದಕ್ಷಿಣ ಆಫ್ರಿಕಾ ಮತ್ತು ಹಾಂಗ್ ಕಾಂಗ್‌ನಿಂದ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಲು ಎಚ್ಚರಿಕೆ ನೀಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ಪತ್ರ ನೀಡಿದೆ.

ರೂಪ ಬದಲಿಸಿ ಬಂದ ಮಾರಿ
ಬೋಟ್ಸ್ವಾನಾ, ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್‌ನಲ್ಲಿ ರೂಪಾಂತರಿ ಪತ್ತೆಯಾಗಿದೆ. ಕೊರೊನಾ ಹೊಸ ರೂಪಾಂತರ ತಳಿ B.1.1529 ದೃಢಪಟ್ಟಿದೆ. ಈ ಹಿನ್ನೆಲೆ ಆ ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ಕಣ್ಣು ಇಡಲು ಸೂಚಿಸಲಾಗಿದೆ. ಅಲ್ಲದೆ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕಠಿಣ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಪ್ರಯಾಣಿಕರ ಸಂಪರ್ಕಗಳನ್ನು ಸಹ ನಿಕಟವಾಗಿ ಟ್ರ್ಯಾಕ್ ಮಾಡಲು ಸೂಚಿಸಲಾಗಿದೆ. ಈ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ರವಾನೆ ಮಾಡಿದ್ದಾರೆ.

ಕೊರೊನಾ ಅಟ್ಟಹಾಸಕ್ಕೆ ಇಡೀ ಜಗತ್ತೆ ಸಂಕಷ್ಟ ಅನುಭವಿಸಿ ಈಗಷ್ಟೇ ಚೇತರಿಸಿಕೊಳ್ತಿದೆ. ಇಂತಹ ಸಂದರ್ಭದಲ್ಲೆ ಗಾಯದ ಮೇಲೆ ಬರೆ ಎಂಬಂತೆ ದಕ್ಷಿಣ ಆಫ್ರಿಕಾದಲ್ಲಿ ಮತ್ತೊಂದು ರೂಪದಲ್ಲಿ ಡೆಡ್ಲಿ ಕೊರೊನಾ ಕಾಣಿಸಿಕೊಂಡಿದೆ. ಇದು ಭಾರತ ಸೇರಿ ವಿಶ್ವದ ಅನೇಕ ರಾಷ್ಟ್ರಗಳಿಗೆ ತಲೆನೋವು ತಂದಿದೆ. ಮತ್ತೊಂದು ಕೊರೊನಾ ಹೊಡೆತಕ್ಕೆ ಸಿಲುಕದಿರಲು ಭಾರತ ಈಗಾಗಲೇ ಎಲ್ಲ ರಾಜ್ಯಗಳಿಗೂ ಅಲರ್ಟ್ ಆಗಿರುವಂತೆ ಎಚ್ಚರಿಸಿದೆ.

News First Live Kannada

Leave a comment

Your email address will not be published. Required fields are marked *