ಮದರಸಾಗಳು ಆರ್​ಎಸ್​ಎಸ್​ ಶಾಖೆಗಳಂತೆ ಅಲ್ಲ: ಅಸ್ಸಾಂ ಸಿಎಂಗೆ ತಿರುಗೇಟು ಕೊಟ್ಟ ಅಸಾದುದ್ದೀನ್ ಓವೈಸಿ | AIMIM Chief Asaduddin Owaisi jibe at Assam CM Himanta Biswa Sarma Over madrassa and RSS Shakha


ಮದರಸಾಗಳು ಆರ್​ಎಸ್​ಎಸ್​ ಶಾಖೆಗಳಂತೆ ಅಲ್ಲ: ಅಸ್ಸಾಂ ಸಿಎಂಗೆ ತಿರುಗೇಟು ಕೊಟ್ಟ ಅಸಾದುದ್ದೀನ್ ಓವೈಸಿ

ಅಸಾದುದ್ದೀನ್ ಓವೈಸಿ ಮತ್ತು ಹಿಮಂತ ಬಿಸ್ವಾ ಶರ್ಮಾ

ಹಲವು ಮದರಸಾಗಳಲ್ಲಿ ವಿಜ್ಞಾನ, ಗಣಿತ ಮತ್ತು ಸಮಾಜಶಾಸ್ತ್ರ ಕಲಿಸಲಾಗುತ್ತಿದೆ ಎಂದು ಓವೈಸಿ ಹೇಳಿದ್ದಾರೆ.

ಹೈದರಾಬಾದ್​: ‘ಇಸ್ಲಾಮ್ ಧಾರ್ಮಿಕ ಶಿಕ್ಷಣ ನೀಡುವ ಮದರಸಾಗಳು ಆರ್​ಎಸ್​ಎಸ್​ ಶಾಖೆಗಳಂತೆ ಅಲ್ಲ. ಅವು ವಿದ್ಯಾರ್ಥಿಗಳಲ್ಲಿ ಆತ್ವವಿಶ್ವಾಸ ಮತ್ತು ಸಹಾನುಭೂತಿ ತುಂಬುತ್ತವೆ’ ಎಂದು ಆಲ್ ಇಂಡಿಯಾ ಮಜಿಲಿಸ್-ಎ-ಇತ್ತೆಹಾದುಲ್ ಮುಸ್ಲೀಮ್ (All India Majilis-e-Ittehadul Muslimeen – AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದರು. ‘ಮದರಸಾಗಳನ್ನು ರದ್ದುಪಡಿಸಬೇಕಿದೆ’ ಎಂದು ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ‘ಅಸ್ಸಾಂ ಮುಖ್ಯಮಂತ್ರಿ ದ್ವೇಷ ಭಾಷಣ ಮಾಡುವುದರಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಅವರ ರಾಜ್ಯದಲ್ಲಿ ಪ್ರವಾಹದಿಂದ 18 ಮಂದಿ ಮೃತಪಟ್ಟಿದ್ದು, 7 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ. ಸಂಕಷ್ಟದಲ್ಲಿರುವವರ ಕಡೆಗೆ ಅಸ್ಸಾಂ ಸಿಎಂ ಗಮನ ಹರಿಸಬೇಕು’ ಎಂದು ಸಲಹೆ ಮಾಡಿದ್ದಾರೆ.

ದೆಹಲಿಯಲ್ಲಿ ನಡೆದಿದ್ದ ಆರ್​ಎಸ್​ಎಸ್​ ಮುಖವಾಣಿ ಆರ್ಗನೈಸರ್ ಮತ್ತು ಪಾಂಚಜನ್ಯ ನಿಯತಕಾಲಿಕೆಗಳ 75ನೇ ಸಂಸ್ಥಾಪನಾ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಿಮಂತ ಬಿಸ್ವಾ ಶರ್ಮಾ, ಮದರಸಾಗಳು ಇರುವವರೆಗೆ ಮಕ್ಕಳಿಗೆ ವೈದ್ಯರು ಅಥವಾ ಎಂಜಿನಿಯರ್​ಗಳಾಗಬೇಕೆಂಬ ಯೋಚನೆಯೇ ಬರುವುದಿಲ್ಲ ಮದರಸಾ ಎಂಬ ಪದವೇ ಭಾರತದಲ್ಲಿ ಇರಬಾರದು. ಮಕ್ಕಳನ್ನು ಮದರಸಾಗಳಿಗೆ ಸೇರಿಸುವುದು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಶರ್ಮಾ ಹೇಳಿದ್ದರು.

‘ಇಸ್ಲಾಂನ ಪವಿತ್ರ ಗ್ರಂಥ ಕುರಾನ್ ಕಲಿಸಬೇಡಿ ಎಂದು ಯಾರೂ ಹೇಳುತ್ತಿಲ್ಲ. ಆದರೆ ಅದರ ಜೊತೆಗೆ ವಿಜ್ಞಾನ, ಗಣಿತ, ಜೀವಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳನ್ನೂ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಧರ್ಮ ಗ್ರಂಥಗಳ ಅಧ್ಯಯನಕ್ಕೆ ಮನೆಯಲ್ಲಿ 2-3 ಗಂಟೆ ಮೀಸಲಿಡಿ. ಆದರೆ ಶಾಲೆಗಳಲ್ಲಿ ಮಾತ್ರ ಮಗು ಎಂಜಿನಿಯರ್ ಆಥವಾ ವೈದ್ಯ ಆಗುವ ನಿಟ್ಟಿನಲ್ಲಿ ಪಾಠಗಳು ನಡೆಯಬೇಕು’ ಎಂದು ಶರ್ಮಾ ಹೇಳಿದ್ದರು.

ಶರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಹಲವು ಮದರಸಾಗಳಲ್ಲಿ ವಿಜ್ಞಾನ, ಗಣಿತ ಮತ್ತು ಸಮಾಜಶಾಸ್ತ್ರ ಕಲಿಸಲಾಗುತ್ತಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮದರಸಾಗಳು ಮುಂಚೂಣಿಯಲ್ಲಿದ್ದವು. ಆದರೆ ಆರ್​ಎಸ್​ಎಸ್​ ಕಾರ್ಯಕರ್ತರು ಬ್ರಿಟಿಷ್ ಏಜೆಂಟರಂತೆ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

‘ಮದರಸಾಗಳು (ಆರ್​ಎಸ್​ಎಸ್​) ಶಾಖೆಗಳಂತೆ ಅಲ್ಲ. ಅಲ್ಲಿ ಆತ್ಮಗೌರವ ಮತ್ತು ಸಹಾನುಭೂಮಿಯನ್ನು ಕಲಿಸಲಾಗುತ್ತದೆ. ಈ ಪರಿಕಲ್ಪನೆಗಳು ಸಂಘ ಪರಿವಾರದವರಿಗೆ ಅರ್ಥವಾಗುವುದಿಲ್ಲ. ಹಿಂದೂ ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಏಕೆ ಮದರಸಾದಲ್ಲಿ ಕಲಿಯಬೇಕಿತ್ತು? ಮುಸ್ಲಿಮರು ಈ ದೇಶದ ಸಂಸ್ಕೃತಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಇಂಥ ಪ್ರಯತ್ನಗಳನ್ನು ಮುಂದುವರಿಸುತ್ತಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಅಸ್ಸಾಂನ ಶಿಕ್ಷಣ ಸಚಿವರಾಗಿದ್ದಾಗ, ಅಸ್ಸಾಂನಲ್ಲಿ ರಾಜ್ಯ ಸರ್ಕಾರದ ಅನುದಾನದಿಂದ ನಡೆಯುತ್ತಿದ್ದ ಎಲ್ಲ ಮದರಸಾಗಳನ್ನು ವಿಸರ್ಜಿಸಲಾಯಿತು. ಕೆಲ ಮದರಾಸಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲಾಯಿತು. ಈ ಸಂಬಂಧ ಅಸ್ಸಾಂ ವಿಧಾನಸಭೆಯು ಹಲವು ಗೊತ್ತುವಳಿಗಳನ್ನು ಅಂಗೀಕರಿಸಿತ್ತು. ನಂತರದ ದಿನಗಳಲ್ಲಿ ಗುವಾಹತಿ ಹೈಕೋರ್ಟ್​ ಸಹ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು.

TV9 Kannada


Leave a Reply

Your email address will not be published. Required fields are marked *