ಮದರಸಾಗಳ ಬಾಗಿಲು ಮುಚ್ಚಿಸಿ, ಮುಸ್ಲಿಮರಿಗೆ ಉಪಕಾರ ಮಾಡುತ್ತೇನೆ: ಅಸ್ಸಾಂ ಮುಖ್ಯಮಂತ್ರಿ ಹಿಮವಂತ ಬಿಸ್ವಾ ಶರ್ಮಾ | Assam CM Himanta Biswa Sharma Sasys Shutting down madrassas bringing UCC is for benefit of Muslims at RSS event


ಮದರಸಾಗಳ ಬಾಗಿಲು ಮುಚ್ಚಿಸಿ, ಮುಸ್ಲಿಮರಿಗೆ ಉಪಕಾರ ಮಾಡುತ್ತೇನೆ: ಅಸ್ಸಾಂ ಮುಖ್ಯಮಂತ್ರಿ ಹಿಮವಂತ ಬಿಸ್ವಾ ಶರ್ಮಾ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ

ಮದರಸಾಗಳನ್ನು ಮುಚ್ಚಿಸಲು ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಗಳಿಸಲು ಯಾರೇ ಪ್ರಯತ್ನಿಸಿದರೂ ಅದರಿಂದ ಭಾರತೀಯ ಮುಸ್ಲಿಮರಿಗೆ ಅನುಕೂಲವೇ ಹೆಚ್ಚು ಎಂದು ಹೇಳಿದರು.

ಗುವಾಹತಿ: ಭಾರತವನ್ನು ಒಕ್ಕೂಟಗಳ ದೇಶ ಎಂದು ಪದೇಪದೆ ಉಲ್ಲೇಖಿಸುವ ಮೂಲಕ ರಾಹುಲ್ ಗಾಂಧಿ ಅವರು ದೇಶವನ್ನು ಛಿದ್ರಗೊಳಿಸಲು ಯತ್ನಿಸುತ್ತಿರುವವರಿಗೆ ಬೆಂಬಲ ನೀಡುತ್ತಿದ್ದಾರೆ. ಮದರಸಾಗಳನ್ನು ಮುಚ್ಚಿಸಲು ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಗಳಿಸಲು ಯಾರೇ ಪ್ರಯತ್ನಿಸಿದರೂ ಅದರಿಂದ ಭಾರತೀಯ ಮುಸ್ಲಿಮರಿಗೆ ಅನುಕೂಲವೇ ಹೆಚ್ಚು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ಹೇಳಿದರು. ಭಾರತವು ರಾಜ್ಯಗಳ ಒಕ್ಕೂಟವಾಗಿದ್ದರೆ 5,000 ವರ್ಷಗಳ ಸಮೃದ್ಧ ಇತಿಹಾಸ ಸುಳ್ಳೇ? ಕಾಂಗ್ರೆಸ್ ಪಕ್ಷವು ತನ್ನನ್ನು ತಾನು ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂದು ಕರೆದುಕೊಂಡು, ದೇಶದ ವಿವಿಧೆಡೆ ಸಭೆಗಳನ್ನು ಆಯೋಜಿಸಿದಾಗಲೂ ಕಾಂಗ್ರೆಸ್ ನಾಯಕರು ಭಾರತವನ್ನು ರಾಜ್ಯಗಳ ಒಕ್ಕೂಟ ಎಂದೇ ಭಾವಿಸಿದ್ದರೆ? ರಾಹುಲ್ ಗಾಂಧಿ ಅವರು ಪದೇಪದೇ ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ಕರೆಯುವ ಮೂಲಕ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಆರ್​ಎಸ್​ಎಸ್​ ಮುಖವಾಣಿಗಳಾದ ಆರ್ಗನೈಸರ್ ಮತ್ತು ಪಾಂಚಜನ್ಯಗಳ 75ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಳಸುತ್ತಿರುವ ಭಾಷೆ ಮತ್ತು ಹೇಳುತ್ತಿರುವ ವಿಧಾನ ಬೇರೆ ಇರಬಹುದು. ಆದರೆ ರಾಹುಲ್ ಗಾಂಧಿ ಅವರ ಹೇಳಿಕೆಗಳು ಒಂದೇ ಭಾವನೆ ಹೊಂದಿವೆ ಎಂದು ದೂರಿದರು. ಇಂಥ ಹೇಳಿಕೆಗಳಿಗಾಗಿ ನಾನು ರಾಹುಲ್ ಗಾಂಧಿ ಅವರನ್ನು ದೂರುವುದಿಲ್ಲ. ಅವರು ಜೆಎನ್​ಯು ವಿದ್ವಾಂಸರಿಂದ ಪಾಠ ಕೇಳಿರಬಹುದು ಎಂದು ವ್ಯಂಗ್ಯವಾಡಿದರು. ಕಳೆದ ಶನಿವಾರ ಲಂಡನ್​ನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ‘ಭಾರತವು ಸಂವಿಧಾನದಲ್ಲಿ ವಿವರಿಸುವಂತೆ ರಾಜ್ಯಗಳ ಒಕ್ಕೂಟವೇ ಆಗಿದೆ’ ಎಂದು ಹೇಳಿದ್ದರು.

ನಾನು ಕಾಂಗ್ರೆಸ್​ನಲ್ಲಿ 22 ವರ್ಷಗಳಿದ್ದೆ. ಗಾಂಧಿ ಕುಟುಂಬಕ್ಕೆ ಮೋಸ ಮಾಡುವುದನ್ನು ಅಲ್ಲಿ ದೇಶದ್ರೋಹ ಎಂದು ಭಾವಿಸುತ್ತಾರೆ. ಆದರೆ ಬಿಜೆಪಿಯಲ್ಲಿ ಹಾಗಲ್ಲ. ಇಲ್ಲಿರುವವರಿಗೆ ಪಕ್ಷಕ್ಕಿಂತ ದೇಶವೇ ಮುಖ್ಯ ಎಂದು ಹೇಳಿದರು. ಅಸ್ಸಾಂನಲ್ಲಿರುವ ಸರ್ಕಾರಿ ಅನುದಾನಿತ ಮದರಸಾಗಳ ಬಾಗಿಲು ಹಾಕಿಸುವುದಾಗಿ ಹೇಳಿದರು. ಭಾರತೀಯ ಮುಸ್ಲಿಮರು ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದುವರಿಯಬೇಕು ಎಂದಾದರೆ ಮದರಸಾ ಎಂಬ ಪದವೂ ಇತಿಹಾಸದ ಪುಟ ಸೇರಬೇಕು ಎಂದು ಹೇಳಿದರು. ಧಾರ್ಮಿಕ ವಿಚಾರಗಳನ್ನು ಮಕ್ಕಳಿಗೆ ಕಲಿಸಬೇಕು ಎಂದಿದ್ದರೆ, ಮನೆಗಳಲ್ಲಿ ಹೇಳಿಕೊಡಿ. ಆದರೆ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಕಲಿಸಬೇಕು ಎಂದು ನುಡಿದರು.

‘ಮದರಸಾಗಳ ಬಾಗಿಲು ಹಾಕುವುದು ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದರಿಂದ ಮುಸ್ಲಿಮರಿಗೆ ಹೆಚ್ಚು ಅನುಕೂಲ’ ಎಂದು ಎಐಎಂಐಎಂ ನಾಯಕ ಅಸಾದುದ್ದಿನ್ ಓವೈಸಿ ಅವರನ್ನು ಗುರಿಯಾಗಿಸಿ ಹೇಳಿದ್ದರು. ಇದನ್ನು ನಾವು ಹಿಂದುತ್ವಕ್ಕಾಗಿ ಮಾಡಬೇಕಿಲ್ಲ. ಇಂಥ ಕೆಲಸವನ್ನು ಯಾರೇ ಮಾಡಿದರೂ ಅವರನ್ನು ಮುಸ್ಲಿಮರು ತಮ್ಮ ಗೆಳೆಯರು ಎಂದು ಭಾವಿಸಬೇಕು’ ಎಂದು ಹೇಳಿದರು. ಅಸ್ಸಾಂನಲ್ಲಿರುವ ಒಟ್ಟು ಜನಸಂಖ್ಯೆಯ ಪೈಕಿ ಮುಸ್ಲಿಮರ ಸಂಖ್ಯೆ ಶೇ 36ರಷ್ಟು ಇದೆ. ಇವರನ್ನು ಹಿಮವಂತ ಬಿಸ್ವಾ ಶರ್ಮಾ ಮೂರು ರೀತಿ ವಿಂಗಡಿಸಿದರು. ಮೊದಲನೆಯದು, ಅಸ್ಸಾಂ ಮೂಲ ನಿವಾಸಿಗಳಾದ ಮುಸ್ಲಿಮರು. ಎರಡನೆಯದು, ಇಂದಿಗೂ ಮನೆಗಳ ಎದುರು ತುಳಸಿ ಗಿಡ ಇರಿಸುವ ಮುಸ್ಲಿಮರು, ಮೂರನೆಯದು 1971ನೇ ಯುದ್ಧದ ಸಂದರ್ಭದಲ್ಲಿ ಅಸ್ಸಾಂಗೆ ಬಂದವರು. ಮೂರನೇ ವರ್ಗದವರನ್ನು ಮಿಯಾ ಮುಸ್ಲಿಮರು ಎಂದು ಅವರು ಲೇವಡಿ ಮಾಡಿದರು.

ಈಶಾನ್ಯ ಭಾರತದ ಜನರನ್ನು ದೇಶದ ಮುಖ್ಯಧಾರೆಯೊಂದಿಗೆ ಬೆಸೆಯುವುದು ನನ್ನ ಕನಸು. ಉತ್ತರ ಪ್ರದೇಶ ಅಥವಾ ದೆಹಲಿಯಲ್ಲಿರುವವರಂತೆಯೇ ನಾವೂ ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಆಗಬೇಕು. ಅಸ್ಸಾಂನಲ್ಲಿ ಇಂದಿಗೂ ಸ್ವಲ್ಪ ಸಮಸ್ಯೆಗಳಿರುವುದು ನಿಜ. ಈಶಾನ್ಯ ಭಾರತದಲ್ಲಿ ಭಯೋತ್ಪಾದನೆ ಸಂಪೂರ್ಣ ಅಂತ್ಯಗೊಂಡಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳಿದರು.

TV9 Kannada


Leave a Reply

Your email address will not be published. Required fields are marked *