ಮಂಗಳೂರು: ಮದುವೆಯಾಗುವಂತೆ ಪೀಡಿಸುತ್ತಿದ್ದ ಪುಡಿ ರೌಡಿಯೊಬ್ಬ ತನ್ನ ತಂಡದೊಂದಿಗೆ ಯುವತಿಯ ಮನೆಗೆ ನುಗ್ಗಿ, ಮನೆಯ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದಾರೆ. ಪುಡಿ ರೌಡಿ ತಂಡವನ್ನು ಮಂಗಳೂರಿನ ಪೊಲೀಸರು ಹೆಡೆಮುರಿ ಕಟ್ಟಿದ್ದು, ಒಟ್ಟು ಏಳು ಮಂದಿ ರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಗಾಗಿ ನಡೆದ ದಾಳಿ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ನಗರದ ಶಕ್ತಿನಗರದಲ್ಲಿ ಮೇ 30ರ ರಾತ್ರಿ ಏಳೆಂಟು ಪುಡಿ ರೌಡಿಗಳ ತಂಡವೊಂದು ಮನೆಗೆ ನುಗ್ಗಿ ಇಬ್ಬರು ಗಂಡು ಮಕ್ಕಳು ಎಲ್ಲಿ ಎಂದು ಕೇಳಿತ್ತು. ಅವರು ಮನೆಯಲ್ಲಿಲ್ಲ ಎಂದು ಹೇಳಿದ್ದೇ ತಡ ಇಡೀ ಮನೆಯನ್ನು ಪುಡಿಗೈಯಲು ಆರಂಭಿಸಿತ್ತು. ಮನೆಯಲ್ಲಿದ್ದ ವಯಸ್ಸಾದವರನ್ನೂ ಬಿಡದೆ ಎಲ್ಲರಿಗೂ ಥಳಿಸಿ ಹೋಗಿತ್ತು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲ್ಲೆಗೈದಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಬಂಟ್ವಾಳ ತಾಲೂಕಿನ ಬಾರೆಕ್ಕಾಡು ನಿವಾಸಿ ಹೇಮಂತ್ (22), ರೌಡಿಶೀಟರ್ ರಂಜಿತ್ (28), ಉರ್ವಾ ಸ್ಟೋರ್ ನಿವಾಸಿ ಅವಿನಾಶ್ (23), ಕೊಟ್ಟಾರ ಚೌಕಿಯ ಪ್ರಜ್ವಲ್(24), ಕೋಡಿಬೆಂಗ್ರೆ ನಿವಾಸಿ ದೀಕ್ಷಿತ್ (21), ಉರ್ವಾ ಸ್ಟೋರಿನ ಧನುಷ್ (19), ಕುಂಜತ್ ಬೈಲಿನ ಯತಿರಾಜ್ (23) ಬಂಧಿತರು.

ಯುವತಿಗಾಗಿ ದಾಳಿ
ಶಕ್ತಿನಗರ ನಿವಾಸಿ 18 ವರ್ಷದ ಯುವತಿಯನ್ನು ರೌಡಿಶೀಟರ್ ಹೇಮಂತ್ ಪ್ರೀತಿಸುತ್ತಿದ್ದ. ಆದರೆ ಯುವತಿ ಈತನನ್ನು ರಿಜೆಕ್ಟ್ ಮಾಡಿದ್ದಳು. ಬಳಿಕ ತಾನು ಕರೆದ ಕಡೆ ಬರಬೇಕು, ನನಗೆ ಇಷ್ಟ ಆಗುವ ಹಾಗೆ ಇರಬೇಕು ಎಂದು ರೌಡಿಶೀಟರ್ ಹೇಮಂತ್ ಯುವತಿಗೆ ತಾಕೀತು ಮಾಡಿದ್ದ. ಯುವತಿ ಇದನ್ನು ತನ್ನ ಅಣ್ಣಂದಿರಿಗೆ ಹೇಳಿದ್ದಳು. ಇದರಿಂದ ಯುವತಿ ಅಣ್ಣಂದಿರು ಹೇಮಂತ್ ಗೆ ಕರೆ ಮಾಡಿ ಎಚ್ಚರಿಕೆ ನೀಡಿ, ತಂಗಿಯ ಸಹವಾಸಕ್ಕ ಬರಬೇಡ ಎಂದು ಹೇಳಿದ್ದರು.

ಇದರಿಂದ ಕೋಪಗೊಂಡ ಹೇಮಂತ್, ತನ್ನ ರೌಡಿ ಗ್ಯಾಂಗ್ ನೊಂದಿಗೆ ಯುವತಿ ಮನೆಗೆ ನುಗ್ಗಿದ್ದಾನೆ. ಆಕೆಯ ಅಣ್ಣಂದಿರಿಬ್ಬರನ್ನು ಕೊಲ್ಲಲು ಮುಂದಾಗಿದ್ದಾನೆ. ಅವರಿಲ್ಲದ ಕಾರಣ ಸಿಕ್ಕ ಸಿಕ್ಕ ಕಡೆ ದಾಳಿ ಮಾಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನು ಇವರೆಲ್ಲ ಅಪರಾಧ ಹಿನ್ನೆಲೆ ಉಳ್ಳವರು ಎಂದು ತಿಳಿದುಬಂದಿದೆ. ಇವರ ಗ್ಯಾಂಗ್ ನಲ್ಲಿರುವ ಉಳಿದ ಆರೋಪಿಗಳಿಗಾಗಿ ಖಾಕಿ ತಲಾಶ್ ಮುಂದುವರೆದಿದೆ.

The post ಮದುವೆಯಾಗುವಂತೆ ಪೀಡಿಸಿ, ಯುವತಿಯ ಮನೆಗೆ ನುಗ್ಗಿ ದಾಂಧಲೆ- ಮಂಗಳೂರಿನ ಪುಡಿ ರೌಡಿ ತಂಡ ಅರೆಸ್ಟ್ appeared first on Public TV.

Source: publictv.in

Source link