ಹಾಸನ: ಕೊರೊನಾ ಪಾಸಿಟಿವ್ ನಡುವೆಯೂ ಹಾಸನದ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಆರೋಗ್ಯವಾಗಿದ್ದಾರೆ.

ಸಕಲೇಶಪುರ ಮೂಲದ ರಮ್ಯ ಮತ್ತು ಲೋಹಿತ್ ಎಂಬವರಿಗೆ ಹತ್ತು ವರ್ಷದ ಹಿಂದೆ ವಿವಾಹವಾಗಿತ್ತು. ಹತ್ತು ವರ್ಷ ಕಳೆದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ನಂತರ ರಮ್ಯ ಗರ್ಭಿಣಿಯಾದರು. ಡೆಲಿವರಿಗೆ ಇನ್ನು ಕೇವಲ ಹನ್ನೊಂದು ದಿನ ಮಾತ್ರ ಬಾಕಿಯಿರುವಾಗಲೇ ರಮ್ಯಾಗೆ ಕೊರೊನಾ ಸೋಂಕು ತಗುಲಿತು. ಕೂಡಲೇ ಅವರನ್ನು ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.

ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ 400ಕ್ಕೂ ಹೆಚ್ಚು ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಆಸ್ಪತ್ರೆಯಲ್ಲಿ ರಮ್ಯಾ ಚಿಕಿತ್ಸೆ ಪಡೆಯುತ್ತಿದ್ದು ಗರ್ಭದಲ್ಲಿರುವ ಮಕ್ಕಳಿಗೂ ಸೋಂಕು ತಗುಲುವ ಸಾಧ್ಯತೆ ಜೊತೆಗೆ ತಾಯಿ-ಮಕ್ಕಳು ಬದುಕಿ ಉಳಿಯುವುದು ಕಷ್ಟವಾಗಿತ್ತು. ಹಗಲಿರುಳೆನ್ನದೆ ದುಡಿಯುತ್ತಿರುವ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ರಮ್ಯಾಳ ಬಗ್ಗೆ ಹೆಚ್ಚು ನಿಗಾವಹಿಸಿ ಸಿಸೇರಿಯನ್ ಮೂಲಕ ಅವಳಿ ಮಕ್ಕಳನ್ನು ಹೊರತೆಗೆದಿದ್ದಾರೆ. ಅವಳಿ ಹೆಣ್ಣು ಮಕ್ಕಳು ಆರೋಗ್ಯವಾಗಿದ್ದಾರೆ.

ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ ಪ್ರಾಣಾಯಾಮದಿಂದ ಪಾರಾಗಿದ್ದಾರೆ. ರಮ್ಯಾಳ ಪತಿ ಲೋಹಿತ್ ಹಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೆಲವರು ವೈದ್ಯರನ್ನು, ವೈದ್ಯಕೀಯ ಸಿಬ್ಬಂದಿಯನ್ನು ಬಯ್ಯುತ್ತಿದ್ದಾರೆ. ಅವರು ಅವರ ಕುಟುಂಬ ಮರೆತು ನಮ್ಮ ಕುಟುಂಬಕ್ಕಾಗಿ ದುಡಿಯುತ್ತಿದ್ದಾರೆ. ಈಗಲೂ ನನ್ನ ಪತ್ನಿ ಇನ್ನೂ ಕೋವಿಡ್‍ನಿಂದ ಸಂಪೂರ್ಣ ಗುಣಮುಖರಾಗಿಲ್ಲ. ಯಾರೂ ವೈದ್ಯರನ್ನು ದೂಷಿಸಬೇಡಿ. ದೇವರ ರೀತಿ ನಮಗೆ ಸಹಾಯ ಮಾಡಿದ ಹಾಸನ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಹಾಸನದ ಹಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರ ನಡುವೆ ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆ ಹಾಗೂ ಅವಳಿ ಮಕ್ಕಳನ್ನು ಉಳಿಸಲು ಪಟ್ಟ ಶ್ರಮಕ್ಕೆ ಸಾರ್ವಜನಿಕರು ಪ್ರಶಂಸಿದ್ದಾರೆ. ಇತ್ತ ತಾಯಿ-ಮಗು ಆರೋಗ್ಯವಾಗಿರುವುದು ರಮ್ಯಾ ಹಾಗೂ ಲೋಹಿತ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

The post ಮದ್ವೆಯಾಗಿ 10 ವರ್ಷಗಳ ಬಳಿಕ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ appeared first on Public TV.

Source: publictv.in

Source link