ವ್ಯಾಯಾಮ
ವ್ಯಾಯಾಮ ಅಭ್ಯಾಸದಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು ವ್ಯಾಯಾಮ ಸಹಾಯಕವಾಗಿದೆ. ಮಧುಮೇಹದಂತಹ ಸಮಸ್ಯೆ ನಿಯಂತ್ರಣಕ್ಕೆ ಈ ಕೆಲವು ಯೋಗ ಭಂಗಿಗಳು ಸಹಾಯಕ. ಈ ಕೆಲವು ಯೋಗ ಆಸನಗಳನ್ನು ಪ್ರತಿನಿತ್ಯ ರೂಢಿಯಲ್ಲಿಟ್ಟುಕೊಳ್ಳಿ. ನೀವು ನಿಯಮಿತವಾದ ಆಹಾರ ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳ ಮೂಲಕ ಅರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ನೀವು ಆರೋಗ್ಯವಂತರಾಗಿರಲು ಮತ್ತು ಸದೃಢರಾಗಿರಲು ಯೋಗ ಆಸನಗಳು ಸಹಾಯ ಮಾಡುತ್ತವೆ. ಪ್ರತಿನಿತ್ಯ ಬೆಳಗ್ಗೆ ಬೇಗ ಎದ್ದು ಯೋಗ ಆಸನಗಳನ್ನು ಮಾಡುವ ಅಭ್ಯಾಸದಿಂದ ಸ್ನಾಯುಗಳು ಬಲಗೊಳ್ಳುತ್ತವೆ. ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ ಜೊತೆಗೆ ದೇಹದಲ್ಲಿನ ಹೆಚ್ಚುವರಿ ಕೊಬ್ಬು ಕರಗಲು ಸಹಾಯಕವಾಗುತ್ತದೆ. ಇದರಿಂದ ನೀವು ಫಿಟ್ ಆಗಿರಲು ಸಾಧ್ಯ. ಹಾಗಿರುವಾಗ ನೀವು ಈ ಕೆಲವು ಯೋಗ ಆಸನಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಬಹುದು.
ಹಲಾಸನ
ಈ ಯೋಗ ಭಂಗಿಯನ್ನು ನೇಗಿಲು ಭಂಗಿ ಎಂದು ಕರೆಯುತ್ತಾರೆ. ಯೋಗದ ಮ್ಯಾಟ್ ಮೇಲೆ ನೇರವಾಗಿ ಮಲಗಿಕೊಳ್ಳಿ. ನಿಮ್ಮ ಕೈಗಳನ್ನು ನಿಮ್ಮ ಬದಿಯಯಲ್ಲಿ ನೇರವಾಗಿರಿಸಿ. ನಿಮ್ಮ ಸೊಂಟಭಾಗವನ್ನು ಮೇಲಕ್ಕೆತ್ತಿ ಮತ್ತು ನಿಮ್ಮ ಕಾಲ್ಬೆರಳುಗಳು ನೆಲಕ್ಕೆ ತಾಗುವಂತೆ ಸಂಪೂರ್ಣ ಬಾಗಿ. ನಿಮ್ಮ ಮೊಣಕಾಲುಗಳನ್ನು ಬಗ್ಗಿಸದಿರಲು ಪ್ರಯತ್ನಿಸಿ. ಕನಿಷ್ಠ 20 ಸೆಕೆಂಡುಗಳ ಕಾಲ ಅದೇ ಯೋಗ ಭಂಗಿಯಲ್ಲಿರಿ.
ವೃಕ್ಷಾಸನ
ದೇಹವನ್ನು ಸಡಿಲಬಿಟ್ಟು ಆರಾಮವಾಗಿ ನೆಲದ ಮೇಲೆ ನಿಂತುಕೊಳ್ಳಿ. ಒಂದು ಕಾಲನ್ನು ಮೇಲಕ್ಕೆತ್ತಿ ಮತ್ತೊಂದು ಕಾಲಿನ ತೊಡೆಯ ಮೇಲಿರಿಸಿ. ನಿಮ್ಮ ಕೈಗಳನ್ನು ಮೇಲಕ್ಕೆ ಚಾಚಿ ನಮಸ್ಕರಿಸಿ. ಕನಿಷ್ಠ 10 ಸೆಕೆಂಡುಗಳ ಕಾಲ ಈ ಯೋಗ ಭಂಗಿಯಲ್ಲಿರಲು ಪ್ರಯತ್ನಿಸಿ.
ಪಶ್ಚಿಮೋತ್ತಾನಾಸನ
ನೀವು ನೆಲದ ಮೇಲೆ ಕುಳಿತುಕೊಂಡು ಕಾಲುಗಳನ್ನು ನೇರವಾಗಿ ಚಾಚಿ. ಮುಂದಕ್ಕೆ ಬಾಗುತ್ತಾ ನಿಮ್ಮ ಕೈಗಳಿಂದ ಕಾಲುಗಳ ಪಾದವನ್ನು ಹಿಡಿದುಕೊಳ್ಳಿ. ನಿಮ್ಮ ತಲೆಯ ಭಾಗ ಕೆಳಗೆ ಬಾಗಿರಲಿ. ಈ ಯೋಗ ಭಂಗಿಯಲ್ಲಿ 10 ಸೆಕೆಂಡುಗಳ ಕಾಲ ಹಾಗೆಯೇ ಇರಲು ಪ್ರಯತ್ನಿಸಿ.
ಬಾಲಾಸನ
ವಜ್ರಾಸನದ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಸಂಪೂರ್ಣವಾಗಿ ಮುಂದಕ್ಕೆ ಬಾಗಿ. ಕೈಗಳು ನೇರವಾಗಿರಲಿ. ಜೊತೆಗೆ ನಿಮ್ಮ ಉಸಿರಾಟ ಕ್ರಿಯೆಯನ್ನು ನಿಯಂತ್ರಿಸಿ. ಈ ಯೋಗ ಭಂಗಿಯಲ್ಲಿ ಕನಿಷ್ಠ 10 ಸೆಕೆಂಡುಗಳ ಕಾಲ ಹಾಗೆಯೇ ಇರಿ.