ಭೋಪಾಲ್: ಮಧ್ಯಪ್ರದೇಶದಲ್ಲಿ ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದ ಕಿರಿಯ ವೈದ್ಯರಿಗೆ ಮಧ್ಯಪ್ರದೇಶ ಹೈಕೋರ್ಟ್ 24 ಗಂಟೆಗಳ ಒಳಗಾಗಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಈ ಸೂಚನೆಯ ಬೆನ್ನಲ್ಲೇ 3 ಸಾವಿರಕ್ಕೂ ಅಧಿಕ ವೈದ್ಯರು ರಾಜೀನಾಮೆ ನೀಡಿದ್ದಾರೆ.

ಕೊರೊನಾ ಸಂಕಷ್ಟದ ನಡುವೆ ಮಧ್ಯಪ್ರದೇಶದಲ್ಲಿ ಕಿರಿಯ ವೈದ್ಯರು ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆಯನ್ನು ಕಾನೂನು ಬಾಹಿರ ಮತ್ತು 24 ಗಂಟೆಯ ಒಳಗಾಗಿ ವೈದ್ಯರು ಕರ್ತವ್ಯಕ್ಕೆ ಹಾಜರಾಗಬೇಕೆಂದು ಹೈಕೋರ್ಟ್ ಸೂಚನೆ ಹೊರಡಿಸಿತ್ತು. ಇದರಿಂದ ಅಸಮಾಧಾನಗೊಂಡ 3000ಕ್ಕೂ ಅಧಿಕ ವೈದ್ಯರು ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

ಕಿರಿಯ ವೈದ್ಯರು ತಮಗೆ ಹೆಚ್ಚಿನ ಭತ್ಯೆ, ಕೊರೊನಾ ಕಷ್ಟಕಾಲದಲ್ಲಿ ಸೇವೆ ಮಾಡಿದ ವೈದ್ಯರ ಕುಟುಂಬದವರಿಗೆ ಉಚಿತ ಚಿಕಿತ್ಸೆ ಸೇರಿದಂತೆ, ವಿವಿಧ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದರು.

6 ವಿವಿಧ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 3 ಸಾವಿರಕ್ಕೂ ಅಧಿಕ ಮಂದಿ ವೈದ್ಯರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದು, ಈಗಾಗಲೇ ರಾಜೀನಾಮೆ ಪತ್ರವನ್ನು ಕಾಲೇಜಿನ ಡೀನ್‍ಗಳಿಗೆ ಕಳುಹಿಸಿದ್ದಾರೆ ಎಂದು ಮಧ್ಯಪ್ರದೇಶದ ಕಿರಿಯ ವೈದ್ಯರ ಸಂಘದ(ಎಂಪಿಜೆಡಿಎ) ಅಧ್ಯಕ್ಷರಾದ ಅರವಿಂದ್ ಮೀನಾ ಹೇಳಿದ್ದಾರೆ.

ನಮ್ಮ ಬೇಡಿಕೆ ಈಡೇರುವವರೆಗೆ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ಸರ್ಕಾರ ಈಗಾಗಲೇ ನಮ್ಮ 3ನೇ ವರ್ಷದ ಪದವಿಯ ಪರೀಕ್ಷೆಗಳನ್ನು ರದ್ದು ಮಾಡಿ ನಮ್ಮನ್ನು ಕೊರೊನಾ ಸೇವೆಗೆ ಹಾಕಿಕೊಂಡಿದೆ. ಆದರೆ ನಮ್ಮ ಬೇಡಿಕೆ ಮಾತ್ರ ಈಡೇರಿಸಲು ಒಪ್ಪುತ್ತಿಲ್ಲ. ನಾವು ಇದರ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸುತ್ತೇವೆ ಎಂದರು.

ನಮ್ಮ ಪ್ರತಿಭಟನೆಗೆ ಕೇರಳ, ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದ ಕಿರಿಯ ವೈದ್ಯರು ಬೆಂಬಲ ಸೂಚಿಸಿದ್ದಾರೆ. ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

The post ಮಧ್ಯಪ್ರದೇಶದಲ್ಲಿ 3 ಸಾವಿರಕ್ಕೂ ಅಧಿಕ ಕಿರಿಯ ವೈದ್ಯರ ರಾಜೀನಾಮೆ appeared first on Public TV.

Source: publictv.in

Source link