ಮನೆಯಲ್ಲಿ ಜಲೋದ್ಭವ ಅಚ್ಚರಿ; ಕೊಣೆಯೊಳಗಿನ ಹುತ್ತಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಕುಟುಂಬಸ್ಥರ ಪರದಾಟ | Family members facing problems due to heavy Rain water has penetrated home in chitradurga


ಮನೆಯಲ್ಲಿ ಜಲೋದ್ಭವ ಅಚ್ಚರಿ; ಕೊಣೆಯೊಳಗಿನ ಹುತ್ತಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಕುಟುಂಬಸ್ಥರ ಪರದಾಟ

ಬರದನಾಡಿನ ಮನೆಯಲ್ಲಿ ನೀರು

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಯರಬಳ್ಳಿ ಗ್ರಾಮದ ಮನೆಯೊಂದರಲ್ಲಿ ಏಕಾಏಕಿ ಜಲೋದ್ಭವ (water) ಆಗಿರುವ ಅಚ್ಚರಿಯ ಘಟನೆ ನಡೆದಿದೆ. ಕಳೆದ ಮೂರ್ನಾಲ್ಕು ದಿನದಿಂದ ಮನೆಯಲ್ಲಿ ಏಕಾಏಕಿ ನೀರು ಉತ್ಪತ್ತಿಯಾಗುತ್ತಿದೆ. ಯರಬಳ್ಳಿ ಗ್ರಾಮದ ಪುರದಮ್ಮ ಹಾಗೂ ಪೂಜಾರಪ್ಪ ದಂಪತಿಯ ಮನೆಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ನೀರು ಹೊರ ಹಾಕಿದಷ್ಟು ಮತ್ತೆ ಮನೆ (Home) ತುಂಬಾ ನೀರು ತುಂಬುತ್ತಿದ್ದು ಚಕಿತಗೊಳಿಸುತ್ತಿದೆ. ನೀರು ಹೇಗೆ ಬರುತ್ತಿದೆ ಎಂಬುವುದು ತಿಳಿಯದಾಗಿದ್ದು, ಗ್ರಾಮದ ಜನರಲ್ಲಿ ವಿಸ್ಮಯ ಮೂಡಿಸಿದೆ. ಮೂರ್ನಾಲ್ಕು ದಿನದಿಂದ ಸಾಕಷ್ಟು ಸಲ ನೀರು ಹೊರ ಹಾಕಿದರೂ ಮತ್ತೆ ಸುಮಾರು ಐದಾರು ಇಂಚು ನೀರು ತುಂಬುತ್ತಿದೆ. ಆದರೆ, ನೀರು ಎಲ್ಲಿಂದ ಬರುತ್ತಿದೆ, ಹೇಗೆ ಬರುತ್ತಿದೆ ಎಂಬುವುದು ತಿಳಿಯದಾಗಿದೆ ಎಂದು ಮನೆಯೊಡತಿ ಪುರದಮ್ಮ ಹೇಳಿದ್ದಾರೆ.

ಮನೆಗೋಡೆ ಮೇಲೆ ಬೆಳೆದ ಹುತ್ತಕ್ಕೆ ಧಕ್ಕೆ ಮಾಡದೆ ಹಾಗೇ ಉಳಿಸಿದ್ದೇವೆ. ನಿತ್ಯ ನಿಯಮದಿಂದ ಪೂಜೆ ಪುನಸ್ಕಾರ ಮಾಡುತ್ತ ಬಂದಿದ್ದೇವೆ. ಇಷ್ಟು ವರ್ಷಕಾಲ ಯಾವುದೇ ತೊಂದರೆಗಳು ಆಗಿಲ್ಲ. ಈಗ ಏಕಾಏಕಿ ಮನೆಗೆ ನೀರು ತುಂಬುತ್ತಿದೆ. ಮನೆಗೆ ನೀರು ಹೇಗೆ ಬರುತ್ತಿದೆಯೋ ಗೊತ್ತಾಗುತ್ತಿಲ್ಲ ಎಂದು ಮನೆ ಮಾಲಿಕ ಪೂಜಾರಪ್ಪ ತಿಳಿಸಿದ್ದಾರೆ.

ಮನೆ ವಿಶೇಷ
ಯರಬಳ್ಳಿ ಗ್ರಾಮದ ನಿವಾಸಿಗಳಾದ ಪುರದಮ್ಮ ಹಾಗೂ ಪೂಜಾರಪ್ಪ ದಂಪತಿ ಸುಮಾರು 30ವರ್ಷಗಳ ಹಿಂದೆಯೇ ಮನೆ ನಿರ್ಮಿಸಿಕೊಂಡಿದ್ದಾರೆ. ಕಳೆದ 25 ವರ್ಷಗಳ ಹಿಂದೆ ಮನೆಯ ಗೋಡೆ ಮೇಲೆ ಹುತ್ತ ಬೆಳೆದಿದೆ. ಪೂಜಾರಪ್ಪ, ಪುರದಮ್ಮ ದಂಪತಿ ಹುತ್ತಕ್ಕೆ ಪೂಜಿಸುತ್ತ ಬಂದಿದ್ದಾರೆ. ಮನೆ ರಿಪೇರಿ ವೇಳೆಯೂ ಹುತ್ತ ಉಳಿಸಿಕೊಂಡಿದ್ದಾರೆ. ಅಂದರೆ ಇವರಿಗೆ ಹುತ್ತದ ಮೇಲೆ ವಿಶೇಷ ನಂಬಿಕೆ ಇದೆ.

ಹುತ್ತದ ಪವಾಡ
ಕಳೆದ 25 ವರ್ಷಗಳಿಂದ ಪುರದಮ್ಮ ಹಾಗೂ ಪೂಜಾರಪ್ಪ ದಂಪತಿ ಹುತ್ತಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಗ್ರಾಮಸ್ಥರು ಸಹ ವಿಶೇಷ ಸಂದರ್ಭಗಳಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸುತ್ತಾರೆ. ಸುಮಾರು ವರ್ಷಗಳಿಂದ ವಿಶೇಷ ಪೂಜೆ ಹಿನ್ನೆಲೆ ಪವಾಡ ಸಂಭವಿಸಿರಬಹುದು. ಅದಕ್ಕೆ ಮನೆ ಒಳಗೆ ನೀರು ಬಂದಿದೆ ಎಂಬ ಅಭಿಪ್ರಾಯವೂ ಕೆಲ ಗ್ರಾಮಸ್ಥರಿಂದ ವ್ಯಕ್ತವಾಗಿದೆ.

ಅಧಿಕಾರಿಗಳಿಂದ ಪರಿಶೀಲನೆಗೆ ಮನವಿ
ಹುತ್ತವಿರುವ ಮನೆಯಲ್ಲಿ ನೀರು ಉದ್ಭವ ಆಗುತ್ತಿರುವುದು ವಿಚಿತ್ರವಾಗಿದೆ. ಗ್ರಾಮಸ್ಥರಲ್ಲಿ ವಿವಿಧ ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಮನೆಯ ಬಳಿ ಹಳೇ ಬಾವಿಯೊಂದಿತ್ತು. ಇಪ್ಪತ್ತು ವರ್ಷಗಳ ಹಿಂದೆ ಅದನ್ನು ಮುಚ್ಚಲಾಗಿತ್ತು. ಇತ್ತೀಚೆಗೆ ಹೆಚ್ಚು ಮಳೆ ಬರುತ್ತಿರುವ ಕಾರಣ ನೀರು ಉದ್ಭವ ಆಗಿರಬಹುದು. ಸಂಬಂಧಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಘಟನೆಗೆ ಕಾರಣ ಏನೆಂಬುದನ್ನು ಪತ್ತೆ ಮಾಡಿ ತಿಳಿಸಬೇಕು ಎಂದು ಗ್ರಾಮಸ್ಥರಾದ ರಂಗನಾಥ್ ಮನವಿ ಮಾಡಿಕೊಂಡಿದ್ದಾರೆ.

ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಹಿಂಗಾರು ವೇಳೆ ಎರಡು ವರ್ಷಕ್ಕೆ ಸುರಿಯುವ ಮಳೆ ನಿರಂತರವಾಗಿ ಸುರಿದಿದೆ. ಬಹುತೇಕ ಕೆರೆ, ಕಟ್ಟೆಗಳು, ಕೊಳ, ಬಾವಿಗಳು ಭರ್ತಿ ಆಗಿವೆ. ಪರಿಣಾಮ ಭೂಮಿಯ ಮೇಲ್ಪದರದಲ್ಲಿ ನೀರು ಸಂಗ್ರಹವಾಗಿದ್ದು, ಇದು ಜಲೋದ್ಭವಕ್ಕೆ ಕಾರಣ ಆಗಿರಬಹುದು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇವೆ ಎಂದು ಜಲ ತಜ್ಞ ದೇವರಾಜರೆಡ್ಡಿ ಹೇಳಿದ್ದಾರೆ.

ವರದಿ: ಬಸವರಾಜ ಮುದನೂರ್

ಇದನ್ನೂ ಓದಿ:
ಕೋಲಾರ: ಭಾರೀ ಮಳೆಗೆ ಕೊಳೆಯುತ್ತಿರುವ ಹೂವಿನ ಬೆಳೆ; ರೈತರು ಕಂಗಾಲು

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ; ಮನೆಗಳಿಗೆ ನೀರು ನುಗ್ಗಿ ಪರದಾಟ

TV9 Kannada


Leave a Reply

Your email address will not be published. Required fields are marked *