ಮನೆ, ಉದ್ಯೋಗ ಕೊಟ್ಟಿದ್ದ ಸಹಾಯಕ ಪ್ರಾಧ್ಯಾಪಕನ ಪತ್ನಿಯನ್ನೇ ಕೊಲೆ ಮಾಡಿದ ಕಾರು ಚಾಲಕ ! | A driver strangling and electrocuting a 32 year old woman in Delhi


ಮನೆ, ಉದ್ಯೋಗ ಕೊಟ್ಟಿದ್ದ ಸಹಾಯಕ ಪ್ರಾಧ್ಯಾಪಕನ ಪತ್ನಿಯನ್ನೇ ಕೊಲೆ ಮಾಡಿದ ಕಾರು ಚಾಲಕ !

ಸಾಂಕೇತಿಕ ಚಿತ್ರ

ದೆಹಲಿ: ಇಲ್ಲಿನ ಯೂನಿವರ್ಸಿಟಿಯಲ್ಲಿನ ಸಹಾಯಕ ಪ್ರಾಧ್ಯಾಪಕರೊಬ್ಬರ ಪತ್ನಿಯನ್ನು ಹತ್ಯೆ ಮಾಡಿದ 31 ವರ್ಷದ ವ್ಯಕ್ತಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.  ಮೃತಳನ್ನು ಪಿಂಕಿ ಎಂದು ಗುರುತಿಸಲಾಗಿದ್ದು, ಆಕೆಗೆ 32 ವರ್ಷ. ರಾಕೇಶ್​ ಎಂಬಾತ ಆರೋಪಿ. ಈತ ಪಿಂಕಿಯ ಕತ್ತು ಹಿಸುಕಿದ್ದಲ್ಲದೆ, ಆಕೆಗೆ ವಿದ್ಯುತ್​ ಶಾಕ್​ ಕೊಟ್ಟು ಕೊಂದಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ರಾಕೇಶ್​ ಮಹಿಳೆಯನ್ನು ಕೊಂದ ಬಳಿಕ ಗಾಬರಿಯಿಂದ ದೆಹಲಿಯ ಬುರಾರಿ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಕುಳಿತಿದ್ದ. ನಂತರ ಪೊಲೀಸರ ಎದುರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಾನು ನನ್ನ ಅತ್ತಿಗೆಯಂತಿರುವ ಮಹಿಳೆಯನ್ನು ಹತ್ಯೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. 

ಆರೋಪಿಯೇ ಸಂತ್​ ನಗರದಲ್ಲಿರುವ ಮಹಿಳೆಯ ಮನೆಯನ್ನೂ ಪೊಲೀಸರಿಗೆ ತೋರಿಸಿದ್ದಾನೆ.  ಮೃತದೇಹವನ್ನು ಪರಿಶೀಲಿಸಿದ ಬಳಿಕ ಪೊಲೀಸರು ಆರೋಪಿ ರಾಕೇಶ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ, ನಾನು ಹತ್ಯೆ ಮಾಡಿದ ಮಹಿಳೆ ಪಿಂಕಿಯ ಪತಿ ವೀರೇಂದ್ರ ಕುಮಾರ್​ ಕಳೆದ ಮೂರು ವರ್ಷಗಳ ಹಿಂದೆ ನನಗಿಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿದ್ದರು. ನಾನು ಈ ಮನೆಯ ಕೊನೇ ಫ್ಲೋರ್​​ನಲ್ಲಿ ವಾಸಿಸುತ್ತಿದ್ದೆ. ನನ್ನ ಕೈಯಲ್ಲಿ ಕೆಲಸವಿರಲಿಲ್ಲ. ಆಗಲೂ ಸಹ ವೀರೇಂದ್ರ ಕುಮಾರ್​ ಸಹಾಯ ಮಾಡಿದರು. ತಮ್ಮ ಕಾರನ್ನು ನನಗೆ ಬಾಡಿಗೆಗೆ ಕೊಟ್ಟು ಅದರಲ್ಲಿ ಬಾಡಿಗೆ ಹೊಡೆದು ಹಣ ಸಂಪಾದನೆ ಮಾಡಿಕೋ ಎಂದು ಹೇಳಿದ್ದರು ಎಂಬುದಾಗಿ ರಾಕೇಶ್​ ತಿಳಿಸಿದ್ದಾನೆ.

ತಾನ್ಯಾಕೆ ಪಿಂಕಿಯನ್ನು ಹತ್ಯೆ ಮಾಡಿದೆ ಎಂಬ ಬಗ್ಗೆ ವಿವರಿಸಿದ ಆತ,   2021ರ ಫೆಬ್ರವರಿಯಲ್ಲಿ ವೀರೇಂದ್ರ ಕುಮಾರ್ ಈ ಪಿಂಕಿಯವರನ್ನು ಮದುವೆಯಾಗಿದ್ದರು. ಆದರೆ ನನಗೆ ಇತ್ತೀಚೆಗೆ ಆದಾಯ ಅಷ್ಟು ಇರಲಿಲ್ಲ. ಇದರಿಂದಾಗಿ ವೀರೇಂದ್ರ ಕುಮಾರ್​ ಅವರಿಗೆ ಮನೆ ಬಾಡಿಗೆ ನೀಡಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ಪಿಂಕಿ ನನ್ನನ್ನು ಮನೆಯಿಂದ ಹೊರಹಾಕಿದ್ದರು. ಇದು ನನಗೆ ಕೆಟ್ಟ ಕೋಪ ತರಿಸಿತ್ತು. ಕುಮಾರ್​ ಮನೆಯಲ್ಲಿ ಇಲ್ಲದ ಹೊತ್ತಲ್ಲಿ ಹೋಗಿ ಹತ್ಯೆ ಮಾಡಿದೆ ಎಂದು ರಾಕೇಶ್​ ಹೇಳಿದ್ದಾನೆ.

ಇದನ್ನೂ ಓದಿ:  ಪ್ರಿಯಾಂಕ್ ಖರ್ಗೆ ವಸೂಲಿ ಕಿಂಗ್, ಬಿಟ್ ಕಾಯಿನ್ ದಂಧೆ ಕುರಿತು ದಾಖಲೆಯಿದ್ದರೆ ಬಹಿರಂಗಪಡಿಸಲಿ; ಸಚಿವ ಈಶ್ವರಪ್ಪ ಸವಾಲ್

TV9 Kannada


Leave a Reply

Your email address will not be published. Required fields are marked *