ಕೊರೊನಾ ಎರಡನೇ ಅಲೆ ಬಂದಾಗ ಮನೆಯಲ್ಲೇ ಟ್ರೀಟ್ಮೆಂಟ್ ತೆೆಗೆದುಕೊಳ್ಳಬಹುದು ಅಂತ ಸರ್ಕಾರವೇ ಹೇಳಿತ್ತು. ಸಾಮಾನ್ಯ ಲಕ್ಷಣ ಇದ್ದವರು ಆಸ್ಪತ್ರೆಗೆ ದಾಖಲಾಗಬೇಕಾಗಿಲ್ಲ ಅಂತ ಸಚಿವರೇ ಹೇಳ್ತಾ ಇದ್ರು. ಯಾವಾಗ ಕೊರೊನಾ ಊಹಿಸಲಾಗದ ಆಘಾತ ಕೊಡ್ತೋ ಆಗ ವ್ಯವಸ್ಥೆಯೇ ಅಲುಗಾಡಿ ಹೋಗಿತ್ತು. ಈಗ ಮತ್ತೆ ಎಲ್ಲಾ ಕಡೆ ಕೊರೊನಾ ಮ್ಯಾನೇಜ್ಮೆಂಟ್ ಪ್ಲಾನ್ ಚೇಂಚ್ ಮಾಡಲಾಗ್ತಾ ಇದೆ.

ಕೊರೊನಾ ಮೊದಲನೇ ಅಲೆ ಬಂದಾಗ ಸೋಂಕು ತಗುಲಿದೆ ಅಂತ ಗೊತ್ತಾದ ತಕ್ಷಣ ಅವರನ್ನು ಹಿಡಿದು ಹಿಡಿದು ಕೋವಿಡ್ ಸೆಂಟರ್ಗಳಿಗೆ ತುಂಬಲಾಗ್ತಾ ಇತ್ತು. ಆದ್ರೆ ಬರೇ ಟ್ಯಾಬ್ಲೆಟ್ ತೆಗೆದುಕೊಳ್ಳೋಕೆ ಕೋವಿಡ್ ಸೆಂಟರ್ನಲ್ಲೇ ಇರಬೇಕಾ ಅಂತ ಪ್ರಶ್ನೆ ಹುಟ್ಟಿಕೊಂಡಿತ್ತು. ಆದರೆ, ಬೇರೆಯವರಿಗೆ ಹರಡದಂತೆ ನೋಡಿಕೊಳ್ಳುವ ಸಲುವಾಗಿ ಪೂರ್ಣ ಗುಣಮುಖರಾದ ಮೇಲೇನೇ ಹೊರಗೆ ಬಿಡ್ತಾ ಇದ್ರು. ಆದರೆ ಎರಡನೇ ಅಲೆ ಬಂದಾಗ ಸೋಂಕಿತರು ಆಸ್ಪತ್ರೆ ಸೇರಬೇಕಾಗಿಲ್ಲ, ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳಬಹುದು ಅಂತ ಹೇಳಲಾಯ್ತು. ಅದರಂತೆ ಎರಡನೇ ಅಲೆಯ ಮೊದಲ ಹಂತದಲ್ಲಿ ಬಹುತೇಕ ಜನ ಮನೆಯಲ್ಲೇ ಟ್ರೀಟ್ಮೆಂಟ್ ತೆಗೆದುಕೊಳ್ತಾ ಇದ್ರು. ಆದ್ರೆ ಕೊರೊನಾ ಕೊಟ್ಟ ಶಾಕ್ಗೆ ಎಲ್ಲರೂ ಆಸ್ಪತ್ರೆ ಬಾಗಿಲಿಗೆ ಬಂದು ಬಿಟ್ರು.

ಎರಡನೇ ಅಲೆಯಲ್ಲಿ ಕೊರೊನಾ ವೈರಸ್ ತನ್ನ ಭೀಕರತೆಯನ್ನು ತೋರಿಸತೊಡಗಿತ್ತು. ಮನೆಯಲ್ಲೇ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದ ಅನೇಕರು ಉಸಿರಾಟದ ಸಮಸ್ಯೆಯಿಂದ ಕಂಗಾಲಾಗಿ ಹೋದ್ರು. ಆದ್ರೆ ಆಸ್ಪತ್ರೆಗೆ ಅಡ್ಮಿಟ್ ಆಗಲು ಬಂದ್ರೆ ಅಲ್ಲಿ ಎಲ್ಲಾ ಬೆಡ್ ಫುಲ್. ಇನ್ನು ಆಕ್ಸಿಜನ್ ದೂರದ ಮಾತು. ಒಮ್ಮೆಲೆ ಯಾವಾಗ ಈ ಪ್ರಾಬ್ಲಮ್ ಶುರುವಾಯ್ತೋ ಅಗ ವ್ಯವಸ್ಥೆಯೇ ಅಲುಗಾಡಿ ಹೋಗುವಂತಾಗಿತ್ತು. ಮನೆಯಲ್ಲಿದ್ದವರೆಲ್ಲ ಆಸ್ಪತ್ರೆ ಸೇರಿಕೊಂಡು ಸೇಫ್ ಆಗೋಣ ಅಂತ ಕ್ಯೂ ಹಚ್ಚಿಬಿಟ್ರು. ಸೀರಿಯಸ್ ಆದ್ರೆ ಮಾತ್ರ ಆಸ್ಪತ್ರೆಗೆ ಬನ್ನಿ, ಉಳಿದವರು ಮನೆಯಲ್ಲೇ ಇರಿ ಅಂತ ಎಷ್ಟೇ ಮನವಿ ಮಾಡಿದ್ರೂ ಆಸ್ಪತ್ರೆಗಳಲ್ಲಿ ಜನ ಕಡಿಮೆಯಾಗಲಿಲ್ಲ. ಅದೆಷ್ಟೋ ಜನ ಅರಾಮಾಗಿಯೇ ಇದ್ರೂ ಮುಂಜಾಗ್ರತೆಯಾಗಿ ಆಸ್ಪತ್ರೆಗೆ ಬಂದು ಸೇರಿಕೊಂಡುಬಿಟ್ರು. ಇದರಿಂದ ನಿಜವಾಗಿಯೂ ರೋಗ ಉಲ್ಭಣಗೊಂಡು ಆಕ್ಸಿಜನ್, ವೆಂಟಿಲೇಟರ್ ಬೇಕಾದವರಿಗೂ ತೊಂದರೆ ಆಗಿ ಹೋಯ್ತು. ಮತ್ತೆ ಸರ್ಕಾರ ಮನವಿ ಮಾಡಿದರೂ ಜನ ಕೇಳ್ತಾ ಇರಲಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗಿತ್ತು.

ಆದರೆ, ಈಗ ಪ್ಲಾನ್ ಉಲ್ಟಾ ಆಗಿದೆ. ಮನೆಯಲ್ಲೇ ಇರಿ, ಮೈಲ್ಟ್ ಸಿಂಪ್ಟಮ್ಸ್ ಇದ್ದವರು ಆಸ್ಪತ್ರೆಗೆ ಬರಬೇಡಿ, ಕೋವಿಡ್ ಸೆಂಟರ್ ಕೂಡ ಬೇಕಾಗಿಲ್ಲ ಅಂತ ಹೇಳ್ತಿದ್ದವರು ಈಗ ಮನೆಯಲ್ಲಿರೋದೇ ಬೇಡಾ ಎಲ್ಲಾ ಕೋವಿಡ್ ಸೆಂಟರ್​​ಗಳಿಗೇ ಬಂದು ಬಿಡಿ ಅಂತಿದ್ದಾರೆ. ಕಾರಣ ಮನೆಯಲ್ಲಿದ್ದೇ ನಿರ್ವಹಣೆ ಮಾಡೋಕಾಗದೆ ಅನಾಹುತ ಸಂಭವಿಸೋದೇ ಹೆಚ್ಚು ಅಂತ ಗೊತ್ತಾಗ್ತಾ ಇದೆ. ಮನೆಯಲ್ಲಿದ್ರೆ ರೋಗ ಉಲ್ಭಣಗೊಳ್ಳುವ ಲಕ್ಷಣಗಳು ಗೊತ್ತಾಗದೇ ಬಳಿಕ ಅಪಾಯ ತಂದುಕೊಳ್ತಿದಾರೆ ಅನ್ನೋದು ಒಂದಾದ್ರೆ ಇನ್ನೊಂದು ಬೇರೆಯವರಿಗೆ ಇವ್ರಿಂದ ಸೋಂಕು ತಗುಲ್ತಾ ಇರೋದೂ ಕೂಡ ಹೆಚ್ಚಾಗ್ತಿದೆ ಅಂತ ಮನವರಿಕೆ ಆಗಿತ್ತು. ಹೀಗಾಗಿ ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಯಾರೇ ಸೋಂಕಿತರಾಗಿದ್ರೂ ತಕ್ಷಣ ಕೋವಿಡ್ ಸೆಂಟರ್ಗೇ ಅವರು ಬಂದು ಅಡ್ಮಿಟ್ ಆಗಬೇಕು.

ಎರಡನೇ ಅಲೆ ಏರುಗತಿ ಪಡೆದುಕೊಂಡಾಗ ಕೇಸ್ ಮೊದಲು ಹೆಚ್ಚಾಗಿದ್ದೇ ಮಹಾರಾಷ್ಟ್ರದಲ್ಲಿ. ಹೀಗಾಗಿ ಮುಂಬೈ ಮತ್ತೆ ಹೆಚ್ಚು ಕಡಿಮೆ ಲಾಕ್ ಆಗಿತ್ತು. ಮುಂಬೈನಲ್ಲಿ ಎಲ್ಲಾ ಚಟುವಟಿಕೆಗಳನ್ನೂ ನಿರ್ಬಂಧಿಸಲಾಗಿತ್ತು. ಸಂಚಾರ, ಸಾರಿಗೆ ಹೆಚ್ಚು ಕಡಿಮೆ ಬಂದ್ ಆಗಿತ್ತು. ಹೊರಗಿನಿಂದ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿತ್ತು. ಟೆಸ್ಟಿಂಗ್, ಟ್ರ್ಯಾಕಿಂಗ್ ಮತ್ತು ಟ್ರೀಟ್ಮೆಂಟ್ ಸೂತ್ರವನ್ನು ಚುರುಕುಗೊಳಿಸಿದ ಮಹಾರಾಷ್ಟ್ರ ಸರ್ಕಾರ, ಹದಿನೈದು ದಿನಗಳಲ್ಲಿ ಕೊರೊನಾವನ್ನು ಬಹುತೇಕ ನಿಯಂತ್ರಣಕ್ಕೆ ತಂದಿತ್ತು. ಮಹಾರಾಷ್ಟ್ರ ಮಾದರಿ ದೇಶದಲ್ಲೇ ಮೆಚ್ಚುಗೆಗೆ ಪಾತ್ರವಾಗಿತ್ತು. ಗರಿಷ್ಠ ಕೇಸ್ಗಳು ಬರ್ತಾ ಇದ್ದ ಮಹಾರಾಷ್ಟ್ರದಲ್ಲಿ ಇದೀಗ ಹೊಸ ಕೇಸ್ಗಳು ಬರ್ತಾ ಇರೋದು ಕಡಿಮೆಯಾಗಿದೆ. ಅಷ್ಟೇ ಅಲ್ಲ, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆ ಆಗಿದೆ. ಈಗ ಮಹಾರಾಷ್ಟ್ರ ಪೂರ್ಣವಾಗಿ ಕೊರೊನಾ ತೊಲಗಿಸಲು ಪಣ ತೊಟ್ಟಿದೆ.

ದೇಶದಲ್ಲಿ ಸೋಂಕಿತರು ಕಡಿಮೆಯಾಗ್ತಾ ಇದ್ರೂ ಸಾವಿನ ಸಂಖ್ಯೆ ಮಾತ್ರ ಇಳಿಮುಖವಾಗ್ತಾ ಇಲ್ಲ. ಇದು ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯಗಳಲ್ಲಿ ಆತಂಕ ಹೆಚ್ಚಿಸಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಈಗ ಹೋಮ್ ಐಸೋಲೇಷನ್ ಕ್ಯಾನ್ಸಲ್ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಹಿಂದಿನ ವರ್ಷದಂತೆಯೇ ಯಾರು ಸೋಂಕಿತರಾದರೂ ತಕ್ಷಣ ಅವರನ್ನು ಕೋವಿಡ್ ಸೆಂಟರ್ಗೆ ಅಡ್ಮಿಟ್ ಆಗುವಂತೆ ನೋಡಿಕೊಳ್ತಾ ಇದೆ. ಇದರಿಂದ ಸೋಂಕಿತರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಸಿಗೋದ್ರಿಂದ ರೋಗ ಉಲ್ಭಣಗೊಳ್ಳೋದು ಮತ್ತು ಮರಣ ಹೊಂದೋದು ಕಡಿಮೆ ಆಗುತ್ತೆ ಅನ್ನೋ ಲೆಕ್ಕಾಚಾರ. ಹೋಮ್ ಐಸೋಲೇಷನ್ ನಲ್ಲಿದ್ದು ಟ್ರೀಟ್ ಮೆಂಟ್ ತೆಗೆದುಕೊಳ್ತಾ ಇದ್ದವರೆ ಬಳಿಕ ಸೀರಿಯಸ್ ಆಗಿ ಹೆಚ್ಚಾಗಿ ಸಾವನ್ನಪ್ತಾ ಇದ್ದಾರೆ ಅನ್ನೋ ಅಂಕಿ ಅಂಶದಿಂದ ಈ ಕ್ರಮ ಜರುಗಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಹೋಮ್ ಐಸೋಲೇಷನ್​​ಗೆ ಬ್ರೇಕ್
ಸೋಂಕಿತರಿಗೆ ಮುಂದೆ ಕೋವಿಡ್ ಸೆಂಟರ್​​ನಲ್ಲೇ ಚಿಕಿತ್ಸೆ

ಮಹಾರಾಷ್ಟ್ರದಲ್ಲಿ ಕೊರೊನಾ ಸ್ಥಿತಿಗತಿಯ ಬಗ್ಗೆ ಅವಲೋಕಿಸಲು ಸರ್ಕಾರ ಕರೆದಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಪುಣೆ, ಮುಂಬೈ ಸೇರಿದಂತೆ ಕೊರೊನಾ ಸೋಂಕು ಹೆಚ್ಚುತ್ತಿರುವ ಒಟ್ಟು 18 ಜಿಲ್ಲೆಗಳಲ್ಲಿ ಹೋಂ ಐಸೋಲೇಷನ್ಗೆ ನಿಷೇಧ ಹೇರಿದ್ದು, ಸೋಂಕಿತರು ಕಡ್ಡಾಯವಾಗಿ  ಕೋವಿಡ್ ಸೆಂಟರ್ನಲ್ಲೇ ಚಿಕಿತ್ಸೆ ಪಡೆಯಬೇಕೆಂದು ಆದೇಶ ಹೊರಡಿಸಿದೆ. ಯಾವುದೇ  ವ್ಯಕ್ತಿಗೆ ಕೊರೊನಾ ಸೋಂಕಿನ ಗುಣಲಕ್ಷ್ಷಣ ಇರ್ಲಿ, ಇಲ್ಲದೇ ಇರ್ಲಿ ಪಾಸಿಟಿವ್ ರಿಪೋರ್ಟ್ ಬಂದ್ರೆ ಕಡ್ಡಾಯವಾಗಿ ಕೋವಿಡ್ ಸೆಂಟರ್​​ಗೆ ದಾಖಲಾಗ್ಬೇಕೆಂದು  ಕಟ್ಟುನಿಟ್ಟಿನ  ಆದೇಶ ಹೊರಡಿಸಿದೆ. ಅಲ್ಲದೇ ಆಯಾ ಜಿಲ್ಲೆಯಗಳಲ್ಲಿ ಜಿಲ್ಲಾಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದೆ. ಇದ್ರಿಂದ ಇನ್ಮುಂದೆ ಸೋಂಕಿತರು ಯಾವುದೇ ಗುಣಲಕ್ಷ್ಮಣ ವಿಲ್ಲದಿದ್ರೂ ಅನಿವಾರ್ಯವಾಗಿ ಕೋವಿಡ್ ಕೇರ್ ಸೆಂಟರ್​​ಗಳಲ್ಲೆ  ಚಿಕಿತ್ಸೆ ಪಡೆಯಲೇಬೇಕಾಗುತ್ತದೆ.

ಹೋಮ್ ಐಸೋಲೇಷನ್ ಸೊಂಕಿತರೇ ಕೊರೊನಾ ಸ್ಪ್ರೆಡ್ಡರ್ಸ್?
ಹೋಮ್ ಐಸೋಲೇಷನಿಂದ ಕೊರೊನಾ ಕಡಿಮೆ ಆಗ್ತಾ ಇಲ್ವಾ? 

ಹೌದು.. ಹೋಮ್ ಐಸೋಲೇಷನ್ ಆದ ಸೋಂಕಿತರೇ ಕೊರೊನಾ ಸೂಪರ್ ಸ್ಪ್ರೆಡ್ಡರ್ಸ್ ಆಗ್ತಿದ್ದಾರೆ ಎಂಬ ಆರೋಪಗಳು ಇದೀಗ ಎಲ್ಲೆಡೆ ಕೇಳಿಬರ್ತಿದೆ.  ಕೆಲ ಹೋಮ್ ಐಸೋಲೇಷನ್ ಆದ ಸೋಂಕಿತರು ಕೊರೊನಾದ ಬಗ್ಗೆ ನಿರ್ಲಕ್ಷ್ಯ ವಹಿಸಿ ಹೊರಗಡೆ ಆರಾಮಾಗಿ ಓಡಾಡುತ್ತಿದ್ದು, ಇದ್ರಿಂದ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿಬರ್ತಿದೆ. ಸೋಂಕಿತರು ಹೋಮ್ ಐಸೋಲೇಷನ್ ಆಗೋದ್ರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತಿದ್ದೆ ಎಂದು ನೋಡೋದಾದ್ರೆ..

ಮನೆಯಲ್ಲೇ ಇದ್ರೆ ಏನು ಪ್ರಾಬ್ಲಮ್?

  1. ಮನೆಯಲ್ಲೇ ಚಿಕಿತ್ಸೆ ಅಂತ ಅನೇಕರಿಂದ ಹೊರಗಡೆ ಓಡಾಟ
  2. ಸೋಂಕಿತರು ಹೊರಗಡೆ ಓಡಾಡುತ್ತಿರುವುದರಿಂದ ಹರಡುವಿಕೆ ಹೆಚ್ಚು
  3. ಸೋಂಕಿತರು ಮನೆಯಲ್ಲಿದ್ರು ಕುಟುಂಬದ ಇತರ ಸದಸ್ಯರಿಗೂ ಅಪಾಯ
  4. ರೋಗ ಉಲ್ಭಣವಾದ್ರೆ ಲಕ್ಷಣ ಗೊತ್ತಾಗದೆ ಅಪಾಯ ಎದುರಾಗುವ ಸಾಧ್ಯತೆ
  5. ನಿತ್ಯ ಪರೀಕ್ಷೆ ಮಾಡಿಸಿಕೊಳ್ಳದೇ ಇರೋದ್ರಿಂದ ಏರಿಳಿತದ ಅರಿವು ಇರಲ್ಲ
  6. ಗಂಭೀರ ಸ್ವರೂಪ ಪಡೆದುಕೊಂಡಾಗ ಅಡ್ಮಿಟ್ ಆದ್ರೆ ಉಪಯೋಗವಾಗ್ತಿಲ್ಲ

ಇಷ್ಟೆಲ್ಲಾ ಸಮಸ್ಯೆ ಆಗ್ತಾ ಇರುವಾಗ ಇನ್ಮುಂದೆ ಕೊರೊನಾವನ್ನು ಕಂಪ್ಲೀಟ್ ಆಗಿ ಕಂಟ್ರೋಲ್ ಮಾಡಬೇಕು ಅಂದ್ರೆ ಹೀಗೆ ಮಾಡೋದೇ ಬೆಸ್ಟ್ ಅನ್ನೋ ತೀರ್ಮಾನಕ್ಕೆ ಮಹಾರಾಷ್ಟ್ರ ಸರ್ಕಾರ ಬಂದಿದೆ. ಕರ್ನಾಟಕ ಸರ್ಕಾರ ಕೂಡ ಈ ಬಗ್ಗೆ ಚಿಂತನೆ ನಡೆಸಿದೆ.

ಕರ್ನಾಟಕದಲ್ಲೂ ಮುಂದೆ ಮನೆಯಲ್ಲೇ ಚಿಕಿತ್ಸೆ ಪಡೆಯುವಂತಿಲ್ಲವಾ?
ಕಠಿಣ ನಿಯಮ ಜಾರಿಗೆ ತರಲು  ರಾಜ್ಯ  ಸರ್ಕಾರದ ಚಿಂತನೆ

ಕರ್ನಾಟಕದಲ್ಲಿ ಈಗಾಗಲೇ ಹೋಮ್ ಐಸೋಲೇಟ್ಗೆ ಬ್ರೇಕ್ ಹಾಕುವ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್, ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿಕೆ ನೀಡಿದ್ರು ಕೂಡ ಅದು ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ಈಗ್ಲೂ ಹಲವು ಸೋಂಕಿತರು ಹೋಮ್ ಐಸೋಲೇಟ್ ಆಗ್ತಿದ್ದಾರೆ. ಕೊರೊನಾ ಸೋಂಕು ಬೆಂಗಳೂರಿನಂತಹ ಮಹಾನಗರಳಲ್ಲಿ ಇಳಿಮುಖ ಕಾಣುತ್ತಿದ್ರೂ, ಹಳ್ಳಿಗಳಲ್ಲಿ ಮಾತ್ರ ಸೋಂಕು ಪಸರಣದ ವೇಗ ಹೆಚ್ಚಿದೆ. ಹಳ್ಳಿಗಳಲ್ಲಿ ಹೋಮ್ ಐಸೋಲೇಷನ್ ಗೆ ಬ್ರೇಕ್ ಹಾಕುವುದರಿಂದ ಸೋಂಕಿನ ವೇಗಕ್ಕೆ ಕಡಿವಾಣ ಹಾಕಬಹುದು. ಮತ್ತು ರೋಗ ಉಲ್ಭಣಗೊಂಡು ಅಪಾಯ ತಪ್ಪಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರ.

ಹೀಗೆ ಹೋಮ್ ಐಸೋಲೆಷನ್ಗೆ​​ ಬ್ರೇಕ್ ಹಾಕಿ ಸೋಂಕಿತರನ್ನು ಕೋವಿಡ್ ಸೆಂಟರ್​ಗೆ ದಾಖಲು ಮಾಡುವುದರಿಂದ ಸೋಂಕು ಇತರರಿಗೆ ಹರಡದಂತೆ ತಡೆಯಬಹುದೇನೋ ನಿಜ. ಆದ್ರೆ ಕೋವಿಡ್ ಸೆಂಟರ್​​ಗಳಲ್ಲಿ ಸೋಂಕಿತರ ಆತ್ಮವಿಶ್ವಾಸ ಹಾಗೂ ಅವರ ಆತ್ಮಸ್ಥೆರ್ಯ ಕಡಿಮೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಹೆಗಲ ಮೇಲಿದೆ. ಅಲ್ಲದೇ ಕೋವಿಡ್ ಸೆಂಟರ್ ಗಳಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಹೊಣೆ ಕೂಡ ಸರ್ಕಾರದ್ದು. ಯಾಕಂದ್ರೆ ಈ ಹಿಂದೆ ಹಲವು ಕೋವಿಡ್ ಸೆಂಟರ್ ಗಳಲ್ಲಿ ಸರಿಯಾದ ಚಿಕಿತ್ಸೆ ವ್ಯವಸ್ಥೆ ಇಲ್ಲದೆ ಸೋಂಕಿತರು ತೊಂದರೆಗೀಡಾಗಿದ್ರು. ಆದ್ದರಿಂದ ಈ ಬಾರಿ ಸರ್ಕಾರ ಮಾತ್ರವಲ್ಲದೇ ಆಯಾ ಜಿಲ್ಲೆಯ ಜಿಲ್ಲಾಡಳಿತವು ಉತ್ತಮ ಕ್ರಮ ಕೈಗೊಂಡರೆ ಸೋಂಕು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕೋವಿಡ್ ಸೆಂಟರ್​​ಗಳಲ್ಲಿ ಸೋಂಕಿತರ ಚಿಕಿತ್ಸೆಯ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಸರ್ಕಾರ ತಮ್ಮ ಮೇಲಿರುವ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನ  ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ಕೊರೊನಾ ಕಂಟ್ರೋಲ್ಗೆ ಮಹಾರಾಷ್ಟ್ರ ಸರ್ಕಾರ ಒಂದಲ್ಲ ಒಂದು ರೀತಿಯಲ್ಲಿ ಕಠಿಣ ನಿಯಮಗಳನ್ನ ಜಾರಿಗೆ ತರ್ತಿರುವುದರಿಂದ ಕೊರೊನಾ ಕೂಡ ಮಹಾರಾಷ್ಟ್ರದಲ್ಲಿ ಸದ್ಯ ನಿಯಂತ್ರಣಕ್ಕೆ ಬಂದಿದೆ. ಇನ್ನೂ ಹೋಮ್ ಐಸೋಲೇಷನ್ ಗೆ ಬ್ರೇಕ್ ಹಾಕೋದ್ರಿಂದ ಹರಡುವಿಕೆಯೂ ತಗ್ಗುತ್ತೆ, ಸೋಂಕಿತರಿಗೆ ಅಪಾಯ ಎದುರಾಗೋದು ಕೂಡ ಕಡಿಮೆ.

The post ಮನೇಲೆ ಇರಿ ಅಂತಿದ್ದ ಸರ್ಕಾರಗಳು ಈಗ ಕೋವಿಡ್​ ಸೆಂಟರ್​​​ಗಳಿಗೆ ಬನ್ನಿ ಅಂತಿರೋದೇಕೆ..? appeared first on News First Kannada.

Source: newsfirstlive.com

Source link