ಮನ್ಮುಲ್​ನಲ್ಲಿ ಹಾಲಿಗೆ ನೀರು ಬೆರೆಸಿದ್ದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣವನ್ನು ಮಂಡ್ಯ ಪೊಲೀಸರು ಸಿಐಡಿಗೆ ಹಸ್ತಾಂತರಿಸಿದ ಬೆನ್ನಲ್ಲೇ ತನಿಖೆ ಚುರುಕುಗೊಂಡಿದೆ. ಇಂದು ತನಿಖೆಗಾಗಿ ಮನ್ಮುಲ್ ಕಚೇರಿಗೆ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಲಿದೆ ಎಂದು ನ್ಯೂಸ್​​ ಫಸ್ಟ್​ಗೆ ಉನ್ನತ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಮನ್ಮುಲ್ ಪ್ರಕರಣವನ್ನ ಸಿಐಡಿ ತನಿಖೆಗೆ ನೀಡಿ ಆದೇಶ ಹೊರಡಿಸಲಾಗಿತ್ತು. ಸರ್ಕಾರದ ಉಪ‌ಕಾರ್ಯದರ್ಶಿ ನಾಗರತ್ನಮ್ಮರಿಂದಲೇ ಈ ಆದೇಶ ಬಂದಿತ್ತು. ಘಟನೆ ನಡೆದ ಒಂದು ತಿಂಗಳ ನಂತರ ಸಿಐಡಿ ತನಿಖೆಗೆ ಹಸ್ತಾಂತರ ಮಾಡಲಾಗಿದೆ. ಈಗಾಗಲೇ ಮನ್ಮುಲ್​ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣ ಸಂಬಂಧ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಚಿವ ಎಸ್.ಟಿ ಸೋಮಶೇಖರ್ ಅವರು ಕೂಡ ಮದ್ದೂರಿನ ಗೆಜ್ಜಲಗೆರೆ ಡೈರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿಎಂ ಯಡಿಯೂರಪ್ಪ ಆದೇಶದ ಮೇರೆಗೆ ಈ ಪ್ರಕರಣ ಸಿಐಡಿಗೆ ವರ್ಗಾಯಿಸಲಾಗಿದೆ. ಯಡಿಯೂರಪ್ಪನವರೇ ಖುದ್ದು ಈ ಪ್ರಕರಣದ ತನಿಖೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. 14 ಒಕ್ಕೂಟಗಳಲ್ಲೂ ಟ್ಯಾಂಕರ್‌ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು.

ಏನಿದು ಪ್ರಕರಣ?
ಮನ್ಮುಲ್​ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ ಮಾಡಲಾಗುತ್ತಿತ್ತು. ಟ್ಯಾಂಕರ್‌ಗಳ ಗುತ್ತಿಗೆದಾರರು, ಸಾಗಾಣಿಕೆದಾರರರು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಸುಮಾರು 200 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.

The post ಮನ್ಮುಲ್​ನಲ್ಲಿ ಹಾಲಿಗೆ ನೀರು ಮಿಶ್ರಣ ಪ್ರಕರಣ; ಡೈರಿಗೆ ಇಂದು ಸಿಐಡಿ ಅಧಿಕಾರಿಗಳ ಭೇಟಿ appeared first on News First Kannada.

Source: newsfirstlive.com

Source link