ಮನ ಮಿಡಿಯುವ ಕಥೆ..! ಅಗಲಿದ ಪ್ರೀತಿಯ ಗುಬ್ಬಚ್ಚಿಗೆ ಸಮಾಧಿ ಕಟ್ಟಿ ಕಂಬನಿ ಮಿಡಿದ ಗ್ರಾಮ..!


ತಂದೆ ತಾಯಿ ತೀರಿ ಹೋದ್ರೆ, ತಿಥಿ ಮಾಡ್ಬೇಕೋ? ಬೇಡ್ವೋ ಅಂತಾ ಯೋಚಿಸೋ ಕಾಲ ಇದು. ಅಂತದ್ರಲ್ಲಿ ಗುಬ್ಬಿಚ್ಚಿ ಮರಿಯೊಂದು ಸತ್ತು ಹೋಗಿದೆ. ಅದಕ್ಕೆ ತಿಥಿ ಮಾಡಬೇಕು ಅಂತಾ ಯಾರಾದರೂ ಯೋಚಿಸುತ್ತಾರಾ? ಇಲ್ಲ ಅಲ್ವಾ? ಆದರೆ ಇಲ್ಲಿ ಇಡೀ ಊರಿಗೆ ನೆಚ್ಚಿನ ಪಕ್ಷಿಯಾದ ಗುಬ್ಬಚ್ಚಿ ತೀರಿ ಹೋಗಿರುತ್ತೆ. ಆದ್ರೆ ಈಗ ಊರೋರೆಲ್ಲಾ ಅದಕ್ಕೆ ಸಮಾಧಿ ಕಟ್ಟಿ ತಿಥಿ ಮಾಡಿ ಪೂಜೆ ಮಾಡ್ತಿದಾರೆ ಅಂದ್ರೆ ನೀವು ನಂಬ್ಲೇಬೇಕು.

 

‘ಮತ್ತೆ ಹುಟ್ಟಿ ಬಾ ಗೆಳೆಯಾ’ ಅಂತಾ ಬ್ಯಾನರ್‌ ಹಾಕ್ತಾರೆ. ಅಗಲಿದ ಪ್ರೀತಿಯ ಗೆಳೆಯನಿಗೆ ಪೂಜೆ ಪುನಸ್ಕಾರ ಮಾಡ್ತಾರೆ. ಹಾರ ಹಾಕಿ, ಕಾಯಿ ಒಡೆದು ಶ್ರದ್ಧಾಂಜಲಿ ಸಲ್ಲಿಸ್ತಾರೆ. ಕೇವಲ ಮನುಷ್ಯರಿಗೆ, ಪ್ರೀತಿಯಿಂದ ಸಾಕಿದ್ದ ದನಕರುಗಳಿಗೆ ಮಾತ್ರ ಸಮಾಧಿ ಕಟ್ಟಿರೋ ಸುದ್ದಿ ಕೇಳಿದ್ದೀರಾ. ಆದ್ರೆ, ಊರಲ್ಲಿದ್ದ ಗುಬ್ಬಚ್ಚಿಗೊಂದು ಸಮಾಧಿ ಕಟ್ಟಿರೋ ಸುದ್ದಿ ಕೇಳಿದ್ದೀರಾ? ಇಲ್ಲಿದೆ ಅದರ ಮಾಹಿತಿ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಸವಪಟ್ಟಣದಲ್ಲಿ ಸತ್ತಿರೋ ಗುಬ್ಬಚ್ಚಿಯೊಂದಕ್ಕೆ ಸಮಾಧಿ ಕಟ್ಟಿ ಪೂಜೆ ಮಾಡಲಾಗ್ತಿದೆ. ಕಳೆದ ವಾರ ಗುಬ್ಬಚ್ಚಿ ಮರಿಯೊಂದು ತೀರಿ ಹೋಗಿತ್ತು. ಹೀಗಾಗಿ ಅಂದು ಬ್ಯಾನರ್‌ ಹಾಕಿ, ಶ್ರದ್ಧಾಂಜಲಿ ಕೋರಿದ್ದ ಜನ ಈಗ ಗುಬ್ಬಚ್ಚಿ ಮರಿಗೆ ಸಮಾಧಿ ಕಟ್ಟಿದ್ದಾರೆ. ಇದು ನಂಬಲು ಆಶ್ಚರ್ಯ ಎನಿಸಿದರೂ ಸತ್ಯ. ಹೀಗೆ ಪಕ್ಷಿ ಪ್ರೇಮವನ್ನು ತೋರಿದ ಗ್ರಾಮಸ್ಥರು ಗುಬ್ಬಚ್ಚಿ ಮರಿ ಸಾವಿಗೆ ಭಾವುಕರಾಗಿದ್ದಾರೆ.

ಗುಬ್ಬಚ್ಚಿ ಸಾವಿಗೆ ಸಮಾಧಿ ಕಟ್ಟಿ ಪೂಜೆ ಸಲ್ಲಿಸೋದಾ? ಕೇಳೋಕೆ ಆಶ್ಚರ್ಯ ಅನ್ನಿಸುತ್ತೆ ಅಲ್ವಾ? ಯಾಕಂದ್ರೆ ಗುಬ್ಬಚ್ಚಿ ಜೊತೆಗೆ ಗ್ರಾಮಸ್ಥರಿಗಿದ್ದ ಭಾವುಕ ನಂಟು ಅಂತಹದ್ದು. ನೂರಾರು ಗುಬ್ಬಚ್ಚಿಗಳು ಬಡಾವಣೆಯೊಂದರಲ್ಲಿ ವಾಸವಿದ್ದವು. ಆದರೇ ಈಗ ಸತ್ತಿರೋ ಗುಬ್ಬಚ್ಚಿ ಮಾತ್ರ ಯಾವಾಗಲೂ ಒಂದೇ ಸ್ಥಳದಲ್ಲಿ ಕೂರುತ್ತಿತ್ತು. ಹೀಗಾಗಿ, ಇದು ಜನರಿಗೆ ಇಷ್ಟವೂ ಆಗಿತ್ತು. ಗುಬ್ಬಚ್ಚಿ ಜೊತೆ ಒಂದು ನಂಟು ಬೆಸೆದು ಹೋಗಿತ್ತು. ಈಗ ಅದೇ ಗುಬ್ಬಚ್ಚಿ ಸತ್ತಿದ್ದಕ್ಕೆ ಜನ ಸಮಾಧಿ ಕಟ್ಟಿದ್ದಾರೆ. ಈ ಹಳ್ಳಿಯಲ್ಲಿ ಇರೋರೆಲ್ಲಾ ಕೂಲಿ ಮಾಡೋರೆ. ಹೀಗಿದ್ರೂ ಅಲ್ಪ ಸ್ವಲ್ಪ ದುಡ್ಡು ಕೂಡಿಸಿ, ಸಮಾಧಿ ನಿರ್ಮಿಸಿದ್ದಾರೆ. ಮತ್ತೆ ಹುಟ್ಟಿ ಬಾ ಗೆಳೆಯಾ ಅನ್ನೋ ಬ್ಯಾನರ್‌ ಹಾಕಿದ್ದಾರೆ.

ಕಳೆದ ವಾರ ಗುಬ್ಬಚ್ಚಿ ಅಂತ್ಯಸಂಸ್ಕಾರ ಮಾಡುತ್ತಿರುವ ಬಗ್ಗೆ ಹಲವಾರು ಜನ ಟೀಕೆ ಮಾಡಿದ್ದರಂತೆ. ಇದೀಗ ಟೀಕೆ ಮಾಡಿದ್ದ ಜನರೇ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಸಮಾಧಿ ಕಟ್ಟಲಾಗಿದೆ. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಗ್ರಾಮದಲ್ಲಿ ಮಾಡಿರುವ ಅಂತ್ಯಸಂಸ್ಕಾರಕ್ಕೆ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ.

ವಿಶೇಷ ಬರಹ: ರೋಷನ್‌, ನ್ಯೂಸ್‌ಫಸ್ಟ್‌, ಚಿಕ್ಕಬಳ್ಳಾಪುರ

News First Live Kannada


Leave a Reply

Your email address will not be published.