ಬೆಂಗಳೂರು: ರಾಜ್ಯದ  ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ  ಲೋಕಸಭೆ ಉಪಚುನಾವಣೆಯ ಮತಎಣಿಕೆ ಇಂದು ನಡೆಯುತ್ತಿದೆ. ಉಪಚುನಾವಣೆಯಲ್ಲಿ ಜೆಡಿಎಸ್​​ಗೆ ಹಿನ್ನಡೆಯಾಗಿದೆ. ಈ ಹಿನ್ನೆಲೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸರಣಿ ಟ್ವೀಟ್​​ಗಳನ್ನ ಮಾಡಿದ್ದು, ಅಪಪ್ರಚಾರ, ಹಣಬಲ ನಮ್ಮ ಗೆಲುವು ಕಸಿದಿರಬಹುದು. ನಮ್ಮ ಅಸ್ತಿತ್ವವನ್ನಲ್ಲ ಎಂದು ಹೇಳಿದ್ದಾರೆ. ಹಾಗೇ ಪಂಚರಾಜ್ಯಗಳ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಗೆಲುವನ್ನ ಅವರು ಶ್ಲಾಘಿಸಿದ್ದಾರೆ. ಇದೇ ರೀತಿಯಲ್ಲಿ ಜೆಡಿಎಸ್​ ಕೂಡ ಸಿಡಿದೆದ್ದು ಬರಲಿದೆ ಎಂದು ಹೇಳಿದ್ದಾರೆ.

ಹೆಚ್​ಡಿಕೆ ಟ್ವೀಟ್​​

ಬಸವಕಲ್ಯಾಣದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಮತ ನೀಡಿದ ಎಲ್ಲರಿಗೂ ಧನ್ಯವಾದ. ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರು, ಮುಖಂಡರ ಪರವಾಗಿ ನಾನು ಇರಲಿದ್ದೇನೆ. ಅಪಪ್ರಚಾರ, ಹಣಬಲ ನಮ್ಮ ಗೆಲುವು ಕಸಿದಿರಬಹುದು. ನಮ್ಮ ಅಸ್ತಿತ್ವವನ್ನಲ್ಲ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಸೆಣಸಲು ನಾವು ಶಕ್ತರೆಂಬ ಸಂದೇಶ ರವಾನಿಸಿದ ಕಾರ್ಯಕರ್ತರಿಗೆ ನಾನು ಋಣಿ.

ಕರ್ನಾಟಕದ ಉಪ ಚುನಾವಣೆ ಫಲಿತಾಂಶದ ಜೊತೆಗೇ, 5 ರಾಜ್ಯಗಳ ಚುನಾವಣೆಗಳ ಫಲಿತಾಂಶಗಳೂ ಬಂದಿವೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮಣಿಸಲಾಗದು ಎಂಬ ಸಂದೇಶ ಹೊರಬಿದ್ದಿದೆ. ಸಾಂದರ್ಭಿಕ ಕಾರಣಗಳಿಗಾಗಿ ರಾಜ್ಯದಲ್ಲಿ ಸದ್ಯ ಸಂಕಷ್ಟದಲ್ಲಿರುವ ಜೆಡಿಎಸ್‌ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಸೆಟೆದು ನಿಲ್ಲಲಿದೆ, ಸಿಡಿದೆದ್ದು ಬರಲಿದೆ.

ಅಧಿಕಾರ, ಹಣ, ಒತ್ತಡ, ಬಲ ಪ್ರಯೋಗಗಳನ್ನು ಮೆಟ್ಟಿನಿಂತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಗಟ್ಟಿತನ ನಮಗೆ ಮಾದರಿಯಾಗಲಿದೆ. ಜೆಡಿಎಸ್‌ನಂತೆಯೇ ದಶಕಗಳ ಕಾಲ ರಾಜಕೀಯ ವನವಾಸ ಅನುಭವಿಸಿದ, ಸಂಕಷ್ಟ ಅನುಭವಿಸಿದ, ಕಠಿಣ ಸಂದರ್ಭದಲ್ಲು ಮುಂದಡಿ ಇಡುತ್ತಲೇ ಮುಂದೆ ಸಾಗಿದ ಡಿಎಂಕೆ ಮತ್ತು ಅದರ ನಾಯಕರ ತಾಳ್ಮೆ ನಮಗೆ ಪಾಠವಾಗಲಿದೆ.

ಅಧಿಕಾರ ದುರ್ಬಳಕೆಯ, ಅಪಪ್ರಚಾರದ ಪ್ರಯೋಗಗಳನ್ನು ಮೆಟ್ಟಿನಿಂತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದುಷ್ಟ ಶಕ್ತಿಗಳ ವಿರುದ್ಧ ಗೆದ್ದ ದುರ್ಗೆಯಂತೆ ಹೊರಹೊಮ್ಮಿದ್ದಾರೆ.

ಪ್ರಾದೇಶಿಕ ಅಸ್ಮಿತೆಯನ್ನು ದೇಶದ ಜನತೆ ಮತ್ತೆ ರುಜುವಾತುಪಡಿಸಿದ್ದಾರೆ. ಯಾವ ಅಧಿಕಾರ, ಹಣದ ದರ್ಪ, ಒತ್ತಡ ತಂತ್ರಗಳು, ಕುತಂತ್ರಗಳು, ಅಪಪ್ರಚಾರಗಳು ಪ್ರಾದೇಶಿಕ ಅಸ್ಮಿತೆಯನ್ನು ಚಿವುಟಿಹಾಕಲಾರವು. ಜನಮನಗೆದ್ದ ಪ್ರಾದೇಶಿಕ ಪಕ್ಷದ ನಾಯಕರನ್ನು ಜನತೆ ಕೈ ಹಿಡಿಯುತ್ತಾರೆ ಎಂಬುದಕ್ಕೆ ಇವತ್ತಿನ ಫಲಿತಾಂಶವೇ ತಾಜಾ ನಿದರ್ಶನ.

ಜೆಡಿಎಸ್‌ ತನ್ನ ಸಾಮರ್ಥ್ಯವನ್ನು ಮರಳಿ ಸಾಬೀತು ಮಾಡಲಿದೆ. ಈ ದುರಿತ ಕಾಲದಲ್ಲಿ ಕಾರ್ಯಕರ್ತರೊಂದಿಗೆ ನಾನು ನಿಲ್ಲಲಿದ್ದೇನೆ. ಸೋಲುಗಳ ಸರಣಿಯನ್ನು ಗೆಲುವಿನ ಪಾಠವಾಗಿ ಪರಿವರ್ತಿಸಿಕೊಳ್ಳುವ ಕಾಲ ನಮ್ಮೆದುರಿಗಿದೆ.

– ಹೆಚ್​ಡಿ ಕುಮಾರಸ್ವಾಮಿ, ಮಾಜಿ ಸಿಎಂ

The post ಮಮತಾ ದುಷ್ಟ ಶಕ್ತಿಗಳ ವಿರುದ್ಧ ಗೆದ್ದ ದುರ್ಗೆಯಂತೆ ಮಾದರಿ..JDS ಸಹ ಸಿಡಿದೆದ್ದು ಬರಲಿದೆ- ಹೆಚ್​ಡಿಕೆ appeared first on News First Kannada.

Source: newsfirstlive.com

Source link