‘ಮರಗಳನ್ನು ನನ್ನ ಮಕ್ಕಳಾಗಿ ಬೆಳೆಸಿದ್ದೇನೆ..’ -ಪ್ರಶಸ್ತಿ ಸ್ವೀಕರಿಸಿದ ಬಳಿಕ ವೃಕ್ಷಮಾತೆಯ ಮೊದ್ಲ ಪ್ರತಿಕ್ರಿಯೆ


ಪರಿಸರ ಪ್ರೇಮಿ, ಕಾರವಾರ ಜಿಲ್ಲೆಯ ಹಾಲಕ್ಕಿ ಮಹಿಳೆ ಅಂಕೋಲದ ತುಳಸಿಗೌಡ ಅವರಿಗೆ ಭಾರತ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತುಳಸಿ ಗೌಡ ಅವರು ಪ್ರಶಸ್ತಿ ಸ್ವೀಕರಿಸಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 40 ವರ್ಷಗಳಿಂದ ಗಿಡ ನೆಡುತ್ತಿದ್ದು, ಕಾಡಿಗೆ ಹೋಗಿ ಬಂದರೇ ಸಸಿ ತೆಗೆದುಕೊಂಡು ನೆಡುತ್ತಿದೆ. ಅದರಲ್ಲೂ ಹಣ್ಣು, ಹಂಪಲು ಹಾಗೂ ಸ್ಥಳೀಯ ಮರಗಳ ಸಸಿಗಳನ್ನು ಹೆಚ್ಚು ಬೆಳೆಸಿದ್ದೇನೆ. ಯಾರೇ ಬೇಡ ಅಂದರೂ ನನಗೆ ಗಿಡ ನೆಡಲು ಮನಸ್ಸಾಗುತ್ತಿತ್ತು. ಆದ್ದರಿಂದಲೇ ಈ ಕಾರ್ಯ ಮಾಡಿದ್ದೀನಿ ಎಂದು ಹೇಳಿದರು.

ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಮೋದಿ ಅವರಿಗೆ ನಮಸ್ಕಾರ ಮಾಡಿದೆ, ಅವರು ನಮಸ್ಕರಿಸಿದರು ಎಂದರು. ನಿಮ್ಮನ್ನು ಯಾರಾದ್ರು ಮಾತನಾಡಿಸಿದ್ರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿಗೆ ಕನ್ನಡವೇ ಬರೋಲ್ಲ.. ನಾನು ವೇದಿಕೆಗೆ ಹೋಗುವಾಗ ಮೋದಿ ಅವರನ್ನ ನೋಡಿ ಕೈ ಮುಗಿದೆ ಅವರು ಕೂಡ ನನಗೆ ಕೈ ಮುಗಿದರು. ನಾನು ಅವರನ್ನ ಕನ್ನಡದಲ್ಲಿಯೇ ಮಾತನಾಡಿಸಿದ್ದು ಅವರ ಕೂಡ ನನ್ನನ್ನು ಸ್ವಲ್ಪ ಸ್ವಲ್ಪ ಕನ್ನಡದಲ್ಲಿಯೇ ಮಾತನಾಡಿಸಿದರೆಂದು ಮುಗ್ಧ ಭಾವದಲ್ಲಿಯೇ ಆನಂದವನ್ನ ಹಂಚಿಕೊಂಡರು.

40 ವರ್ಷದಿಂದ ನಾನು ಸಸಿ ನೆಡುತ್ತಿದ್ದೆನೆ. ಅವುಗಳನ್ನು ನನ್ನ ಮಕ್ಕಳಾಗಿ ಬೆಳೆಸಿದ್ದೆನೆ. ದಯವಿಟ್ಟು ಯಾರು ಅರಣ್ಯನಾಶ ಮಾಡಲು ಮುಂದಾಗಬೇಡಿ ಎಂದು ಇದೇ ವೇಳೆ ಮನವಿ ಮಾಡಿದರು. ಜೊತೆಗೆ ಭೂ ತಾಯಿಯ ಒಡಲಿಗೆ ಮಾರಕವಾದ ಅಕೇಶಿಯಾ ಮರಗಳನ್ನ ನೆಡೋದು ಬೇಡ ಎಂದರು.

ಅಂದಹಾಗೇ, ವೃಕ್ಷಮಾತೆಯಾದ ಈಕೆ ಒಂದಲ್ಲಾ, ಎರಡಲ್ಲಾ ಲಕ್ಷಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ತಾನು ಬೆಳೆಸಿದ ಸಸಿಗಳನ್ನು ಕಾರವಾರ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಇವರು ಸುಮಾರು 30 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನ ಮಾಡುತ್ತಾ ಬಂದಿದ್ದಾರೆ. ಇವರ ಈ ಕಾರ್ಯವನ್ನ ಮೆಚ್ಚಿದ ಭಾರತ ಸರ್ಕಾರ ಸಾಮಾಜಿಕ ಸೇವೆ ವಿಭಾಗದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಿದೆ.

News First Live Kannada


Leave a Reply

Your email address will not be published.