ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಾಲಿಗೆ ಇಂದು ಮಹತ್ವದ ದಿನ. 25 ವರ್ಷಗಳ ಸಿನಿ ಜರ್ನಿಯಲ್ಲಿ ಸುದೀಪ್‍ರವರು ಸಕ್ಸಸ್ ಕಾಣಲು ಜುಲೈ 6 ಪ್ರಮುಖ ಪಾತ್ರವಹಿಸಿದೆ.

ಹೌದು, ಜುಲೈ 6 ಕಿಚ್ಚ ಸುದೀಪ್ ಅಭಿನಯಿಸಿದ ಹುಚ್ಚ ಹಾಗೂ ಈಗ ಎರಡು ಸಿನಿಮಾಗಳು ಬಿಡುಗಡೆಯಾದ ದಿನ. ಸಿನಿರಂಗದಲ್ಲಿ ಸುದೀಪ್‍ರವರಿಗೆ ಸ್ಟಾರ್ ಪಟ್ಟ ತಂದು ಕೊಟ್ಟ ಸಿನಿಮಾ ಹುಚ್ಚ ಆದರೆ, ಇಡೀ ಭಾರತೀಯ ಸಿನಿಮಾ ರಂಗವೇ ಕಿಚ್ಚನ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಈಗ. ಸದ್ಯ ಈ ಕುರಿತಂತೆ ಸುದೀಪ್‍ರವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ತಾಯವ್ವ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಸುದೀಪ್, ನಂತರ ರಮೇಶ್ ಅರವಿಂದ್ ಅಭಿನಯದ ಪ್ರತ್ಯಾರ್ಥ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ನಿರ್ದೇಶಕ ಕುಮಾರ್ ದೇಸಾಯಿ ನಿರ್ದೇಶಿಸಿದ ಸ್ಪರ್ಶ ಸಿನಿಮಾದ ಮೂಲಕ ನಾಯಕರಾಗಿ ಹೊರಹೊಮ್ಮಿದರು. ಆದರೆ ಈ ಸಿನಿಮಾ ಸುದೀಪ್‍ರವರಿಗೆ ಅಷ್ಟಾಗಿ, ಖ್ಯಾತಿ ಹಾಗೂ ಯಶಸ್ಸು ತಂದು ಕೊಡಲಿಲ್ಲ.

ಆದರೆ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಸುದೀಪ್‍ರವರ ಕಾಂಬೀನೇಷನ್‍ನಲ್ಲಿ 2001ರ ಜುಲೈ 6 ರಂದು ಬಿಡುಗಡೆಯಾದ ಹುಚ್ಚ ಸಿನಿಮಾ ಚಂದನವನದಲ್ಲಿ ಬಿಗ್ ಸಕ್ಸಸ್ ಕಂಡಿತು. ಈ ಸಿನಿಮಾ ಸುದೀಪ್‍ರವರ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡುವುದರ ಜೊತೆಗೆ ಕಿಚ್ಚ ಎಂಬ ಸ್ಟಾರ್ ಪಟ್ಟ ತಂದು ಕೊಟ್ಟಿತು. ಸದ್ಯ ಹುಚ್ಚ ಸಿನಿಮಾ ಬಿಡುಗಡೆಯಾಗಿ ಇಂದಿಗೆ 20 ವರ್ಷ ತುಂಬಿದೆ.

ಮತ್ತೊಂದು ವಿಶೇಷವೆಂದರೆ ಕಿಚ್ಚ ಸುದೀಪ್ ಅಭಿನಯಿಸಿದ ಟಾಲಿವುಡ್ ಸಿನಿಮಾ ಈಗ ಕೂಡ 2012 ಜುಲೈ 6 ರಂದು ಬಿಡುಗಡೆಗೊಂಡಿತು. ಮೊದಲ ಬಾರಿಗೆ ತೆಲುಗಿನಲ್ಲಿ ಬಣ್ಣ ಹಚ್ಚಿದ್ದ ಸುದೀಪ್‍ರವರಿಗೆ ಈ ಸಿನಿಮಾ ಟಾಲಿವುಡ್ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯುವುದರ ಜೊತೆಗೆ, ಬಿಗ್ ಸಕ್ಸಸ್ ಕಂಡಿತು. ನಂತರ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಸುದೀಪ್ ಸ್ಟಾರ್ ನಟರಾಗಿ ಗುರುತಿಸಿಕೊಂಡರು.

ಸದ್ಯ ಈ ವಿಶೇಷ ದಿನದ ಪ್ರಯುಕ್ತ ಸುದೀಪ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ, 11 ವರ್ಷಗಳ ಅಂತರದಲ್ಲಿ. ರೆಹಮಾನ್ ಮತ್ತು ಓಂ ಪ್ರಕಾಶ್, ಸಾಯಿ ಗುರು ಹಾಗೂ ರಾಜಮೌಳಿಯವರಿಗೆ ಬಹಳ ಧನ್ಯವಾದ, ಲವ್ ಯೂ ಆಲ್ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

The post ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ: ಸುದೀಪ್ appeared first on Public TV.

Source: publictv.in

Source link