ಬೆಂಗಳೂರು: ಆತ ಇಬ್ಬರು ಹೆಂಡಿತಿಯರ ಮುದ್ದಿನ ಗಂಡ. ಮೊದಲ ಪತ್ನಿ ಸಾವಿನ ಮನೆ ಸೇರಿದ ನಂತರ ಮಕ್ಕಳನ್ನು ಎರಡನೇ ಹೆಂಡತಿಯತ್ರ ಕರ್ಕೊಂಡ್ ಕೂಡ ಬಂದಿದ್ದ. ಆದರೆ ಭಂಡ ಗಂಡ ಎರಡನೇ ಮಡದಿಯ ಮೋಹದ ಮಾತುಗಳಿಗೆ ಮರುಳಾಗಿದ್ದ. ಮಕ್ಕಳಿಗೆ ಆಸರೆಯಾಗಬೇಕಿದ್ದ ತಂದೆ ಮಾಡಿದ್ದು ಮಾತ್ರ ಅಕ್ಷರಶಃ ಕ್ರೌರ್ಯ.

ಮೊದಲ ಪತ್ನಿಯ ಮಕ್ಕಳಿಗೆ ತಂದೆಯೇ ಟಾರ್ಚರ್
ಜೆ.ಪಿ ನಗರ ನಿವಾಸಿ ಸೆಲ್ವ, ಮಕ್ಕಳಿಗೆ ಹಿಂಸೆ ಕೊಟ್ಟ ಆರೋಪಿಯಾಗಿದ್ದು, ಈತನಿಗೆ ಇಬ್ಬರು ಹೆಂಡತಿಯರು, ಐದು ಜನ ಮಕ್ಕಳು. ಆರೋಪಿ ಸೆಲ್ವಾನ ಮೊದಲ ಹೆಂಡತಿ ಮೂರು ತಿಂಗಳ ಹಿಂದೆ ಮೊದಲ ಹೆಂಡತಿ ಇಹಲೋಕ ತ್ಯಜಿಸಿದ್ದರು.

ತಾಯಿ ಇಲ್ಲದ ನೋವಿನಲ್ಲಿದ್ದ ಮಕ್ಕಳನ್ನು ಈತ ತನ್ನ ಎರಡನೇ ಪತ್ನಿಯ ಜೆ.ಪಿ ನಗರದ ನಿವಾಸಕ್ಕೆ ಕರೆದುಕೊಂಡು ಬಂದಿದ್ದ. ಮಕ್ಕಳಿಗೆ ಎರಡನೇ ತಾಯಿಯಾಗಬೇಕಿದ್ದ ಮಲತಾಯಿ, ಸೆಲ್ವ ಕೆಲ್ಸ ಮುಗಿಸಿ ಬರುತ್ತಿದ್ದಂತೆಯೇ ಈ ಮೂರು ಅಪ್ರಾಪ್ತ ಮಕ್ಕಳ ಬಗ್ಗೆ ಚಾಡಿ ಹೇಳಿ ಹಿಂಸೆ ಕೊಡುವುದನ್ನು ಮಾಡುತ್ತಿದ್ದರು ಎನ್ನಲಾಗಿದೆ. ಇತ್ತ ಹೆಂಡತಿಯ ಮಾತು ಕೇಳಿದ ಸೆಲ್ವಾ, ತನ್ನ ಮಕ್ಕಳೆಂಬುದನ್ನು ಮರೆತು, ಮಕ್ಕಳ ಕೈಕಾಲುಗಳನ್ನು ದೋಸೆ ಮೊಣಚುವ ಕೈಯಿಂದ ಮಕ್ಕಳ ಕೈ, ಮೈ, ಮುಖ ಸೇರಿದಂತೆ ದೇಹದ ಮೇಲೆ ಸುಟ್ಟು ಹಿಂಸೆ ಮಾಡಿದ್ದಾನೆ.

ನಿನ್ನೆ ರಾತ್ರಿ ಕೂಡ ಸೆಲ್ವ ಮಕ್ಕಳ ಮೇಲೆ ಹಲ್ಲೆ ಮಾಡಿದ್ದು, ನೋವು ತಡೆಯಲಾಗದೆ ಮಕ್ಕಳು ಮನೆಯಿಂದ ಹೊರ ಬಂದಿದ್ದಾರೆ. ಮಕ್ಕಳ ಸ್ಥಿತಿಯನ್ನ ನೋಡಿ ನೆರೆಹೊರೆಯ ಜನರು ಮಕ್ಕಳ ಸಹಾಯಾವಾಣಿ ಹಾಗೂ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಘಟನೆ ಕುರಿತಂತೆ ಮಾಹಿತಿ ಪಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಕ್ಕಳನ್ನು ರಕ್ಷಣೆ ಮಾಡಿ, ವಿಕ್ಟೋರಿಯ ಆಸ್ಪತ್ರೆಗೆ ದಾಖಲಿದ್ದಾರೆ. ಘಟನೆಯ ಸಂಬಂಧ ತಂದೆ ಸೆಲ್ವಾ ಮೇಲೆ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 307 ಅಡಿ,ಎಫ್.ಐ.ಆರ್ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಕುರಿತಂತೆ ಮಾಹಿತಿ ನೀಡಿರುವ ಬೆಂಗಳೂರು ದಕ್ಷಿಣ ಡಿಸಿಪಿ ಹರೀಶ್ ಪಾಂಡೆ, ಘಟನೆ ನಿನ್ನೆ ರಾತ್ರಿ ನಮ್ಮಗಮನಕ್ಕೆ ಬಂದಿದೆ. ಆರೋಪಿಗಳನ್ನ ಬಂಧಿಸಿದ್ದೇವೆ. ಮಕ್ಕಳನ್ನ ರೆಸ್ಕ್ಯೂ ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಿಗೆ ಊಟ ಬಟ್ಟೆಯ ವ್ಯವಸ್ಥೆ ಮಾಡಲಾಗಿದೆ. ಆರೋಪಿಗಳಿಗೆ ಕಾನೂನು ರೀತಿಯ ಕಠಿಣ ಕ್ರಮ ಆಗಬೇಕಿದೆ. ಮಕ್ಕಳನ್ನು ಭಿಕ್ಷಾಟಣೆಗೆ ಕಳುಹಿಸಲು ಈ ರೀತಿ ಮಾಡಲಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದು, ಮಕ್ಕಳ ದೇಹದ ಮೇಲಿನ ಗಾಯ ನೋಡಿದರೆ ಇದು ಒಂದು ದಿನದ ಗಾಯಗಳಲ್ಲ. ಈ ಹಿಂದೆಯೂ ಅವರ ಮೇಲೆ ಹಲ್ಲೆ ಮಾಡಿರುವುದು ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ತಾಯಿಯನ್ನ ಕಳ್ಕೊಂಡ ಕಂದಮ್ಮಗಳಿಗೆ ಆಸರೆಯಾಗಬೇಕಿದ್ದ ತಂದೆನೇ ಇಲ್ಲಿ ಕ್ರೌರ್ಯ ಮೆರೆದು ಕಂಬಿ ಹಿಂದೆ ಸೇರಿದ್ದಾನೆ. ಇತ್ತ ತಾಯಿಯು ಇಲ್ಲದೆ, ಅತ್ತ ತಂದೆಯೂ ಇಲ್ಲದೆ ಮಕ್ಕಳು ಮಾತ್ರ ತಬ್ಬಲಿಯಾಗಬೇಕಾಗಿದ್ದು ನಿಜಕ್ಕೂ ದೊಡ್ಡ ದುರಂತ.

The post ಮಲತಾಯಿ ಮಾತು ಕೇಳಿ ಅಪ್ಪನ ಕ್ರೌರ್ಯ- ಪುಟ್ಟಮಕ್ಕಳಿಗೆ ಚಿತ್ರ ಹಿಂಸೆ ನೀಡಿದ ರಾಕ್ಷಸ appeared first on News First Kannada.

Source: newsfirstlive.com

Source link