ನಟ ರಕ್ಷಿತ್​ ಶೆಟ್ಟಿ ನಿರ್ಮಾಣ ಮಾಡಿ ನಟಿಸಿರುವ 777 ಚಾರ್ಲಿ ಸಿನಿಮಾ ಇದಾಗಲೇ ಶೂಟಿಂಗ್​ ಮುಗಿಸಿ ಪೋಸ್ಟ್​ ಪ್ರೊಡಕ್ಷನ್​​ ಹಂತದಲ್ಲಿದೆ. ಅಕ್ಟೋಬರ್​ನಲ್ಲಿ ಸಿನಿಮಾ ರಿಲೀಸ್​ ಮಾಡುವ ತವಕದಲ್ಲಿರುವ ಚಾರ್ಲಿ ಚಿತ್ರತಂಡ, ಇದೀಗ ಬ್ಯಾಕ್​ ಟು ಬ್ಯಾಕ್​ ಗುಡ್​ ನ್ಯೂಸ್​ ನೀಡ್ತಿದೆ. ನಿನ್ನೆಯಷ್ಟೆ ಮಲಯಾಳಂ ಸ್ಟಾರ್​ ನಟ ಪೃಥ್ವಿರಾಜ್​ ಸುಕುಮಾರನ್​, ಚಾರ್ಲಿಯ ಮಲಯಾಳಂ ಡಿಸ್ಟ್ರಿಬ್ಯೂಷನ್​​ ಹಕ್ಕುಗಳನ್ನ ಪಡೆದಿರೋದು, ಚಿತ್ರತಂಡ ಅಧಿಕೃತವಾಗಿ ತಿಳಿಸಿತ್ತು. ಇದೀಗ ತಮಿಳಿನ ಸ್ಟಾರ್​ ನಿರ್ದೇಶಕರೊಬ್ಬರ ನಿರ್ಮಾಣ ಸಂಸ್ಥೆ ತಮಿಳಿನ ವಿತರಣಾ ಹಕ್ಕುಗಳನ್ನ ಪಡೆದುಕೊಂಡಿದೆ ಅನ್ನೋದು ಬಹಿರಂಗ ಪಡಿಸಿದೆ.

ಹೌದು.. ತಮಿಳಿನ ಪೆಟಾ, ಜಿಗರ್​ಥಂಡ, ಇನ್ನೂ ಅನೇಕ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿರುವ ಹೆಸರಾಂತ ನಿರ್ದೇಶಕ ಕಾರ್ತಿಕ್​ ಸುಬ್ಬರಾಜ್​​, 777 ಚಾರ್ಲಿಯ ತಮಿಳು ಡಿಸ್ಟ್ರಿಬ್ಯೂಷನ್​ ರೈಟ್ಸ್​​​ ಪಡೆದುಕೊಂಡಿದ್ದಾರೆ. ಈ ಬಗ್ಗೆ ನಟ ರಕ್ಷಿತ್​ ಶೆಟ್ಟಿ ಹಾಗೂ 777 ಚಾರ್ಲಿ ಅಧಿಕೃತ ಪೇಜ್​​ ಟ್ವೀಟ್​ ಮಾಡಿದ್ದು, ‘777ಚಾರ್ಲಿ ಚಿತ್ರದ ತಮಿಳು ಅವತರಣಿಕೆಯನ್ನು ಪ್ರಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ಸ್ಟೋನ್​ ಬೆಂಚ್​ ಫಿಲಂಸ್​ ನಿರ್ಮಾಣ ಸಂಸ್ಥೆ ಪ್ರಸ್ತುತ ಪಡಿಸಲಿದೆ’ ಅಂತ ಅಧಿಕೃತವಾಗಿ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ನಿರ್ದೇಶಕ ಕಾರ್ತಿಕ್​ ಸುಬ್ಬರಾಜ್​ ಕೂಡ ಟ್ವೀಟ್​ ಮಾಡಿದ್ದು, ‘ರಕ್ಷಿತ್​ ಶೆಟ್ಟಿ ನಟನೆಯ, ಕಿರಣ್​ ರಾಜ್​ ನಿರ್ದೇಶನದ 777 ಚಾರ್ಲಿ ಸಿನಿಮಾ ನಿಜಕ್ಕೂ ಒಂದು ಅದ್ಭುತ ಮಗು ಹಾಗೂ ಮಾನವನ ನಡುವಿನ ಸಂಬಂಧ, ಬೇಷರತ್ತಾದ ಪ್ರೀತಿಯನ್ನ ತೋರಿಸುತ್ತದೆ. ಈ ಸಿನಿಮಾದ ತಮಿಳು ಅವತರಣೆಕೆಯನ್ನ ಪ್ರಸ್ತುತ ಪಡಿಸೋದಕ್ಕೆ ನಾವು (ಸ್ಟೋನ್​ ಬೆಂಚ್​ ಫಿಲಂಸ್​​) ಸಂತೋಷ ವ್ಯಕ್ತ ಪಡಿಸುತ್ತೇವೆ’ ಅಂತ ಖುಷಿಯಿಂದಲೇ ಬರೆದು 777 ಚಾರ್ಲಿ ಪೋಸ್ಟರ್​ ಕೂಡ ಪೋಸ್ಟ್​ ಮಾಡಿದ್ದಾರೆ.

ಜೂನ್​ 6, ರಕ್ಷಿತ್​ ಶೆಟ್ಟಿ ಹುಟ್ಟುಹಬ್ಬದಂದು 777 ಚಾರ್ಲಿ ಸಿನಿಮಾದ ಸ್ಪೆಷಲ್​ ಟೀಸರ್​ವೊಂದು ರಿಲೀಸ್​ ಆಗಲಿದೆ. ವಿಶೇಷ ಅಂದ್ರೆ, ರಕ್ಷಿತ್​​ ಬರ್ತ್​ಡೇಗೆ ಚಾರ್ಲಿಯ ಜರ್ನಿಯನ್ನ ಈ ಟೀಸರ್​ನಲ್ಲಿ ತೋರಿಸಲಾಗುವುದು. ಕಿರಣ್​ ರಾಜ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದು, ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.

The post ಮಲಯಾಳಂನಲ್ಲಿ ಸೂಪರ್​ ಸ್ಟಾರ್​..ತಮಿಳಿನಲ್ಲಿ ಸ್ಟಾರ್​ ನಿರ್ದೇಶಕ.. ‘ನಾಯಿ’ಗೂ ಇದು ಕಾಲ appeared first on News First Kannada.

Source: newsfirstlive.com

Source link