ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಕುಂಭದ್ರೋಣ ಮಳೆಗೆ ವಿವಿಧ ನದಿಗಳು, ಕೆರೆಗಳು ತುಂಬಿ ಹರಿಯುತ್ತಿವೆ. ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಸಾಕಷ್ಟು ಹಾನಿಯುಂಟಾಗಿದೆ.

ಗುಡ್ನಾಪುರ ಕೆರೆ ಸಂಪೂರ್ಣ ಭರ್ತಿ
ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ಸತತವಾಗಿ ಭರ್ಜರಿ ಮಳೆಯಾಗುತ್ತಿದ್ದು, ಹಳ್ಳ ಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಅತಿ ದೊಡ್ಡ ಕೆರೆಯಾದ ಶಿರಸಿ ತಾಲೂಕಿನ ಗುಡ್ನಾಪುರ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಪ್ರಸಿದ್ಧ ಬಂಗಾರೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ದೇವಸ್ಥಾನದ ಆರಂಭದ ಮೆಟ್ಟಿಲುಗಳು ಮಾತ್ರ ಕಾಣುತ್ತಿದೆ. ದೇವಸ್ಥಾನ ಮುಳುಗಡೆಯಾದ ಕಾರಣ ದಿನದ ಪೂಜೆ ನಿಲ್ಲಿಸಲಾಗಿದೆ.

ಬನವಾಸಿಯ ವರದಾ ನದಿಯೂ ಸಹ ಮೈದುಂಬಿ ಹರಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರೆದಲ್ಲಿ ಅಕ್ಕ ಪಕ್ಕದ ಕೃಷಿ ಜಮೀನುಗಳು ಮುಳುಗಡೆಯಾಗುವ ಆತಂಕ ಎದುರಾಗಿದೆ. ಅಲ್ಲದೇ ಯಲ್ಲಾಪುರದ ಬೇಡ್ತಿ ನದಿಯಲ್ಲೂ ನೀರಿನ ಪ್ರಮಾಣ ಹೆಚ್ಚಾಗಿದ್ದು, ನದಿ ಸಮೀಪದ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ. ಅದೇ ರೀತಿ ಅಘನಾಶಿನಿ, ಶರಾವತಿ ನದಿಗಳ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಅದೇ ರೀತಿ ಶಿರಸಿ ನಗರ ಪ್ರದೇಶದ ಜನರು ಕುಂಭದ್ರೋಣ ಮಳೆಗೆ ನಲುಗಿದ್ದು, ಇಲ್ಲಿನ ಆದರ್ಶ ನಗರ, ಸಮೃದ್ಧಿ ನಗರ, ವಿಶಾಲ ನಗರ, ಪ್ರಗತಿ ನಗರಗಳಲ್ಲಿ ರಸ್ತೆಯ ಮೇಲೆ ನೀರು ನಿಂತು ಸಂಚಾರ ಅಸ್ತವ್ಯಸ್ಥಗೊಂಡಿದೆ. ಅಲ್ಲದೇ ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನದಲ್ಲಿ ವ್ಯತ್ಯಾಸವಾಗಿದೆ.

The post ಮಲೆನಾಡಲ್ಲಿ ಭಾರೀ ಮಳೆ: ಅಪಾಯದ ಮಟ್ಟ ಮೀರಿದ ಬೇಡ್ತಿ, ಅಘನಾಶಿನಿ, ಶರಾವತಿ, ವರದಾ..! appeared first on News First Kannada.

Source: newsfirstlive.com

Source link