ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸುರಿದ ಮಳೆ ಹಲವು ಅನಾಹುತಗಳನ್ನು ಸೃಷ್ಟಿ ಮಾಡಿದೆ. ಈ ನಡುವೆ ಮಳೆಯಿಂದ ಉಂಟಾಗಿರೋ ಹಾನಿ ಹಾಗೂ ಪರಿಹಾರ ಕಾರ್ಯ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದರು. ಹುಬ್ಬಳ್ಳಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿ ತುರ್ತು ಸಭೆ ನಡೆಸಿದ್ದರು. ಆದರೆ ಬೆಂಗಳೂರಿನಲ್ಲಿಯೇ ಇದ್ದ ಪದ್ಮನಾಭನಗರ ಶಾಸಕ, ಕಂದಾಯ ಸಚಿವ ಆರ್.ಅಶೋಕ್ ಗೈರಾಗಿದ್ದರು.
ಸಚಿವ ಆರ್.ಅಶೋಕ್ ಮಾತ್ರವಲ್ಲದೇ ಸಚಿವ ವಿ. ಸೋಮಣ್ಣ ಅವರು ಸಭೆಗೆ ಹಾಜರಾಗಿರಲಿಲ್ಲ. ಈ ಇಬ್ಬರು ನಾಯಕರ ನಡುವೆ ಬೆಂಗಳೂರು ಉಸ್ತುವಾರಿ ಪಡೆಯುವ ಬಗ್ಗೆ ಪೈಪೋಟಿ ನಡೆದಿದೆ. ಈ ನಡುವೆ ಸಚಿವರು ಗೈರಾಗೋ ಮೂಲಕ ಸಿಎಂಗೆ ಪರೋಕ್ಷವಾಗಿ ಸಂದೇಶ ರವಾನೆ ಮಾಡಿದ್ದರಾ ಎಂಬ ಸಂದೇಹ ಈಗ ಎದುರಾಗಿದೆ.
ಕಂದಾಯ ಸಚಿವರಾದ ಆರ್ ಅಶೋಕ್ ಅವರು, ನಿನ್ನೆ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರೋ ಇಟ್ಟಮಡು ರಾಜಕಾಲುವೆ ಕಾಮಗಾರಿಯ ಪರಿಶೀಲನೆಗೆ ತೆರಳಿದ್ದರು. ಬಳಿಕ ಪದ್ಮನಾಭನಗರದ ಕೆ ಎಸ್ ಆರ್ ಟಿ ಸಿ ಬಡಾವಣೆಯಲ್ಲಿ ನೂತನ ಟೆನಿಸ್ ಮೈದಾನ, ಹಾಗೂ ಬೆಂಗಳೂರು ಒನ್ ಕೇಂದ್ರ ಪ್ರಾರಂಭಿಸುವ ಕುರಿತು ಸ್ಥಳಪರಿಶೀಲನೆ ನಡೆಸಿ, ಆಟವಾಡುತ್ತಿದ್ದ ಮಕ್ಕಳೊಂದಿಗೆ ಕ್ರಿಕೆಟ್ ಆಡಿ, ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು. ಇದೇ ವೇಳೆ ಸಿಎಂ ಬೆಂಗಳೂರಿನ ಭಾರೀ ಮಳೆ ಬಗ್ಗೆ ತುರ್ತು ಸಭೆ ನಡೆಸಿದ್ದರು. ಆದರೆ ಸಭೆಗೆ ಗೈರಾಗಿದ್ದು ಏಕೆ ಎಂಬ ಅಶೋಕ್ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ.