ಹಾವೇರಿ: ಮೇ ತಿಂಗಳು ಕೊನೆಯ ವಾರದಲ್ಲಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯಿತು. ಅದಾಗಲೆ ಬಿತ್ತನೆಗೆ ಭೂಮಿ ಸಜ್ಜುಗೊಳಿಸಿಕೊಂಡಿದ್ದ ರೈತರು ಸೋಯಾಬಿನ್, ಮೆಕ್ಕೆಜೋಳ, ಹತ್ತಿ, ಶೇಂಗಾ ಮತ್ತು ಭತ್ತವನ್ನು ಬಿತ್ತನೆ ಮಾಡಿದ್ದರು. ಜಿಲ್ಲೆಯ ಹಾವೇರಿ, ಹಾನಗಲ್ ಸೇರಿದಂತೆ ಹಲವೆಡೆ ಬಿತ್ತನೆ ಮಾಡಿದ್ದ ಬೀಜ ಮೊಳಕೆಯೊಡೆದು ರೈತರಲ್ಲಿ ಉತ್ತಮ ಫಸಲು ಬರುವ ಆಸೆ ಹುಟ್ಟಿಸಿತ್ತು. ಆದರೆ ಜೂನ್ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ನಿರಂತರ ಸುರಿದ ಜಿಟಿಜಿಟಿ ಮಳೆಗೆ ಜಿಲ್ಲೆಯ ಹಲವೆಡೆ ರೈತರ ಜಮೀನಿನಲ್ಲಿ ನೀರು ನಿಂತು ಬೆಳೆಗಳು ಕೆಂಪು ಬಣ್ಣಕ್ಕೆ ತಿರುಗಿವೆ. ಹೀಗಾಗಿ ರೈತರು ಬೆಳೆ ನಾಶ ಮಾಡುತ್ತಿದ್ದಾರೆ.

ತಾಲೂಕಿನ ಹೊಸ ಕಿತ್ತೂರು ಗ್ರಾಮದ ರೈತ ಶಿವಕುಮಾರ್ ಕುರುಬರ್, ನಾಲ್ಕು ಬೆಳೆ ನಾಶ ಮಾಡಿದ್ದಾರೆ. ನಾಲ್ಕು ದಿನಗಳ ಮಳೆಗೆ ಜಮೀನಿನಲ್ಲಿ ನೀರು ನಿಂತಿದ್ದರಿಂದ ಬೆಳೆ ಹಾಳಾಗಿವೆ. ಬೆಳೆ ಕೆಂಪಾಗಿ ಹಾಳಾಗುತ್ತಿರುವುದರಿಂದ ಹಾಗೆ ಬಿಟ್ಟರೂ ಮುಂದೆ ಉಪಯೋಗಕ್ಕೆ ಬರುವುದಿಲ್ಲ. ನೀರು ನಿಂತು ಮೆಕ್ಕೆಜೋಳದ ಬೆಳೆ ಕೆಂಪು ಬಣ್ಣಕ್ಕೆ ತಿರುಗಿದೆ. ಹೀಗಾಗಿ ರೈತರು ಬೆಳೆದು ನಿಂತಿರುವ ಒಂದರಿಂದ ಒಂದೂವರೆ ತಿಂಗಳಿನ ಬೆಳೆಯನ್ನು ಹರಗಿ ನಾಶ ಮಾಡುತ್ತಿದ್ದಾರೆ.

ಮೇ ತಿಂಗಳ ಕೊನೆಯ ವಾರದಲ್ಲಿ ಬಂದ ಧಾರಾಕಾರ ಮಳೆಗೆ ರೈತರು ಖುಷಿಯಿಂದ ಬಿತ್ತಿದ್ದರು. ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದರು. ಪ್ರತಿ ಎಕರೆಗೆ ಹತ್ತರಿಂದ ಹದಿನೈದು ಸಾವಿರ ರುಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಆದರೆ ಮಳೆರಾಯನ ಆಟದಿಂದ ಬೆಳೆಯುತ್ತಿದ್ದ ಬೆಳೆ ಹಾಳಾಗಿ ಹೋಗಿದೆ. ಬೆಳೆ ಹಾಳಾಗಿದ್ದರಿಂದ ಕೆಲವೆಡೆ ರೈತರು ಬೆಳೆ ನಾಶ ಮಾಡಿ ಮತ್ತೆ ಬೇರೆ ಬೀಜ ಬಿತ್ತನೆ ಮಾಡಬೇಕೆಂಬ ಚಿಂತೆಯಲ್ಲಿದ್ದಾರೆ. ಈಗಾಗಲೆ ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದ ರೈತರು ಅಕ್ಷರಶಃ ಚಿಂತೆಗೆ ಜಾರಿದ್ದಾರೆ.

ಜಿಲ್ಲೆಯ ಕೆಲವೆಡೆ ಮಳೆ ಅತಿಯಾಗಿ ಬೆಳೆ ಹಾಳಾಗಿದ್ದರೆ ಮತ್ತೊಂದೆಡೆ ಬಿತ್ತನೆ ಮಾಡಿ ಬೀಜ ಮೊಳಕೆಯೊಡೆದ ನಂತರ ಮಳೆ ಆಗಿಲ್ಲ. ಶಿಗ್ಗಾಂವಿ, ಸವಣೂರು ಸೇರಿದಂತೆ ಕೆಲವೆಡೆ ರೈತರು ಮಳೆಗಾಗಿ ಎದುರು ನೋಡುತ್ತಿದ್ದಾರೆ.

The post ಮಳೆರಾಯನ ಆಟಕ್ಕೆ ಕೆಂಪಾದ ಮೆಕ್ಕೆಜೋಳ- ಬೆಳೆ ಹಾಳು ಮಾಡಿದ ಅನ್ನದಾತ appeared first on Public TV.

Source: publictv.in

Source link