ಮಳೆ ಅಬ್ಬರ: ಮನೆಗೋಡೆ ಕುಸಿದು ವ್ಯಕ್ತಿ ಸಾವು, ಹರಿಯುವ ನೀರಲ್ಲಿ ತೇಲಿ ಬಂತು ಅಪರಿಚಿತ ಮಹಿಳೆ ಶವ | Heavy Rain in karnataka man dies after house roof collapse on him in chikmagalur


ಮಳೆ ಅಬ್ಬರ: ಮನೆಗೋಡೆ ಕುಸಿದು ವ್ಯಕ್ತಿ ಸಾವು, ಹರಿಯುವ ನೀರಲ್ಲಿ ತೇಲಿ ಬಂತು ಅಪರಿಚಿತ ಮಹಿಳೆ ಶವ

ಮನೆಗೋಡೆ ಕುಸಿದು ವ್ಯಕ್ತಿ ಸಾವು

ಚಿಕ್ಕಮಗಳೂರು: ವರುಣನ ಅಬ್ಬರಕ್ಕೆ ಕರುನಾಡು ಕಂಗೆಟ್ಟಿದೆ. ಬಿಟ್ಟೂ ಬಿಡದೆ ಸುರೀತಿರೋ ಮಳೆಗೆ ಜೀವನ ಅಸ್ತವ್ಯಸ್ತವಾಗಿದ್ದು, ಜನರು ದಿಕ್ಕೆಟ್ಟಿದ್ದಾರೆ. ತಲೆ ಮೇಲಿನ ಸೂರು, ವರ್ಷದ ಬೆಳೆ ಎಲ್ಲವನ್ನೂ ಕಳೆದುಕೊಂಡು ಕಣ್ಣೀರಿಡ್ತಿದ್ದಾರೆ. ರಣಭೀಕರ ಮಳೆ ಹಲವೆಡೆ ಜನರ ಜೀವವನ್ನೂ ಬಲಿ ಪಡೆದಿದೆ.

ನಿರಂತರ ಮಳೆಯಿಂದ ಮನೆಗೋಡೆ ಕುಸಿದು ವ್ಯಕ್ತಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿಪುರ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್(45) ಮೃತ ದುರ್ದೈವಿ. ಮಲಗಿದ್ದ ವ್ಯಕ್ತಿ ಮೇಲೆ ಮನೆಗೋಡೆ ಕುಸಿದುಬಿದ್ದಿದ್ದು ವ್ಯಕ್ತಿ ಮೃತಪಟ್ಟಿದ್ದಾನೆ. ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ದೊಡ್ಡಕುರುಗೋಡು ಗ್ರಾಮದ ಬಳಿ ಉತ್ತರ ಪಿನಾಕಿನಿ ನದಿಯಲ್ಲಿ ಮಹಿಳೆ ಶವ ತೇಲಿಬಂದಿದೆ. ಹರಿಯುವ ನೀರಿನಲ್ಲಿ ಅಪರಿಚಿತ ಮಹಿಳೆಯ ಶವ ತೇಲಿ ಬಂದಿದೆ.

ಕಾರು, ಬೈಕ್ ನಡುವೆ ಡಿಕ್ಕಿಯಾಗಿ ಸವಾರರಿಬ್ಬರ ಸಾವು
ಮೈಸೂರು ತಾಲೂಕಿನ ಹೊಸರಮ್ಮನಹಳ್ಳಿ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ಕಾರು, ಬೈಕ್ ನಡುವೆ ಡಿಕ್ಕಿಯಾಗಿ ಸವಾರರಿಬ್ಬರು ಮೃತಪಟ್ಟಿದ್ದಾರೆ. ಬೈಕ್ನಲ್ಲಿದ್ದ ವಿಷ್ಣು(19), ವಿಶ್ವ(21) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೈಸೂರಿನ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಕಾಏಕಿ ನುಗ್ಗಿದ ನೀರಿಗೆ ದಾವಣಗೆರೆಯಲ್ಲಿ ಅನ್ನದಾತ ಬಲಿ
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆರಾಯ ದಾವಣಗೆರೆಯಲ್ಲಿ ಮೂರನೇ ಬಲಿ ಪಡೆದಿದ್ದಾನೆ. ಹುಚ್ಚವನಹಳ್ಳಿ ಕೆರೆಯಲ್ಲಿ ಜಾನುವಾರು ಮೈ ತೊಳೆಯುತ್ತಿದ್ದ ರೈತ ತಿಪ್ಪೇಸ್ವಾಮಿ, ಏಕಾಏಕಿ ರಕ್ಕಸನಂತೆ ನುಗ್ಗಿದ ನೀರಿಗೆ ಜಲಾಹುತಿಯಾಗಿದ್ದಾರೆ. ಮತ್ತೊಂದೆಡೆ ಕೋಲಾರದಲ್ಲಿ ಮಳೆ ನಡುವೆಯೂ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನೀರುಪಾಲಾಗಿದ್ದಾನೆ. ಉಲ್ಲಂಕಲ್ಲು ರಾಜಕಾಲುವೆ ಬಳಿ ಮೀನು ಹಿಡಿಯಲು ತೆರಳಿದ್ದ ವೇಳೆ ಬಿಲ್ಲಪ್ಪ ಎಂಬಾತ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ.

ಇನ್ನು ಭಾರಿ ಮಳೆ ಹಿನ್ನಲೆ ತುಂಗಾಭದ್ರಾ ನದಿ ನೀರಿನ ಮಟ್ಟ ಹೆಚ್ಚಾಗಿದೆ. ನದಿಯಿಂದ ನೀರು ಉಕ್ತಿರೋದ್ರಿಂದ, ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಬಾಗೇವಾಡಿ, ನಂದಿಪುರ ಗ್ರಾಮಗಳು ದ್ವೀಪದಂತಾಗಿದ್ವು.. ಜಾನುವಾರುಗಳನ್ನ ಮೇಯಿಸಿಲು ಹೋಗಿದ್ದವರು ನಡುಗಡ್ಡೆಯಲ್ಲಿ ಸಿಲುಕಿದ್ರು. ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಮೂವರನ್ನ ರಕ್ಷಿಸಿದ್ರು. ತುಂಗಭದ್ರಾ ಡ್ಯಾಂನಿಂದ ಕೂಡ 1 ಲಕ್ಷ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಪರಿಣಾಮ ಕೊಪ್ಪಳದ ಗಂಗಾವತಿಯ ಚಿಕ್ಕಜಂತಕಲ್ನ ಬ್ರಿಡ್ಜ್ ಮೇಲೆಯೇ ನೀರು ಹರೀತಿದೆ.

ಇದನ್ನೂ ಓದಿ: ಮನೆ ಸಂಪೂರ್ಣ ಹಾನಿಯಾಗಿದ್ದರೆ 1 ಲಕ್ಷ ಪರಿಹಾರ; ಸಿಎಂ ಬಸವರಾಜ ಬೊಮ್ಮಾಯಿ

TV9 Kannada


Leave a Reply

Your email address will not be published. Required fields are marked *