ಬೆಂಗಳೂರು: ರಾಜ್ಯದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದು ತಣ್ಣಗಾಗಿದ್ದಾನೆ. ಆದ್ರೆ, ವರುಣ ಮಾಡಿರೋ ಅವಾಂತರದ ಕುರುಹುಗಳು ಕಣ್ಣಿಗೆ ರಾಚುತ್ತಿವೆ. ಅನ್ನದಾತನ ಕಣ್ಣೀರಿಗೆ ಸಾಕ್ಷಿಯಾಗಿವೆ. ಆದ್ರೆ, ಇಷ್ಟೆಲ್ಲಾ ಅನಾಹುತಗಳು ಸಂಭವಿಸಿದ್ರೂ ರಾಜ್ಯದಲ್ಲಿರೋ ಬಿಜೆಪಿ ಸಂಸದರು ಮಾತ್ರ ಸೈಲೆಂಟ್ ಆಗಿದ್ದಾರೆ. ರೈತರ ನೋವನ್ನು ಕಂಡ್ರೂ ಕರಗದ ಕಲ್ಲುಗಳಾಗಿದ್ದಾರೆ.
ಅಕಾಲಿಕ ಮಳೆಯಿಂದ ರಾಜ್ಯದ ಜನರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಅನ್ನದಾತ ಕಂಗಾಲಾಗಿ ಹೋಗಿದ್ದಾನೆ. ಅದೆಷ್ಟೋ ಜನ ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದ್ರೆ, ವರುಣ ಮಾಡಿರೋ ರಾದ್ಧಾಂತಗಳು ರಾಜ್ಯದಲ್ಲಿರೋ ಬಿಜೆಪಿ ಸಂಸದರಿಗೆ ಮಾತ್ರ ಕಾಣಿಸುತ್ತಿಲ್ಲ. ಜನಸಾಮಾನ್ಯರ ಗೋಳನ್ನ ನೀಗಿಸಲು ಮುಂದಾಗ್ತಿಲ್ಲ. ಹೀಗಾಗಿ ಇಂಥವರನ್ನ ಗೆಲ್ಲಿಸಿದ್ದಕ್ಕೆ ಮತದಾರರು ಇದೀಗ ಬಾಯಿ ಬಾಯಿ ಬಡಿದುಕೊಳ್ತಿದ್ದಾರೆ. ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ.
ಪ್ರಧಾನಿ ಮೋದಿ ಮುಂದೆ ಮತ್ತೆ ಬಿಜೆಪಿ ಸಂಸದರು ಮೌನ
ಬಿಜೆಪಿ ಸಂಸದರ ಕಣ್ಣಿಗೆ ಕಾಣಿಸುತ್ತಿಲ್ಲ ಅನ್ನದಾತರ ಅಳಲು
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಚುಕ್ಕಾಣಿ ಹಿಡಿದಿದೆ. ಆದ್ರೆ, ಮಳೆಯಿಂದಾದ ಸಾವು-ನೋವುಗಳು ಮನೆಯಲ್ಲಿ ಬೆಚ್ಚಗೆ ಹೊದ್ದು ಮಲಗಿರೋ ಈ 25 ಮಂದಿ ಸಂಸದರ ಕಿವಿಗೆ ಬಿದ್ದಿದೆಯೋ ಇಲ್ವೋ.. ಹೀಗಾಗಿ ಅನ್ನದಾತನ ಅಳಲನ್ನ ಪ್ರಧಾನಿ ಮೋದಿಗೆ ಮುಟ್ಟಿಸಲು ಎಳ್ಳಷ್ಟು ಪ್ರಯತ್ನ ಮಾಡ್ತಿಲ್ಲ. ಟೋಟಲ್ ಆಗಿ ಈ 25 ಮಂದಿ ಬಿಜೆಪಿ ಸಂಸದರು ಸದ್ಯಕ್ಕೆ ಇದ್ದರೂ ಇಲ್ಲದಂತಾಗಿದ್ದಾರೆ. ರೈತರ ಆಕ್ರೋಶದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಜ್ಯದ ‘ಮೌನ’ ಮುನಿಗಳು!
ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ದುರಾದೃಷ್ಟವಶಾತ್ ಪ್ರವಾಹ ಪರಿಸ್ಥಿತಿ ಬಗ್ಗೆ ಸಿಎಂ ಬೊಮ್ಮಾಯಿಗೇ ವರದಿ ನೀಡುವಂತೆ ಕೇಂದ್ರ ಸರ್ಕಾರ ಕೇಳಿದೆ. ಅಲ್ಲದೇ ಕೇಂದ್ರವೇ ವರದಿ ತರಿಸಿಕೊಳ್ಳೊ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇತ್ತ ಕೇಂದ್ರದಲ್ಲಿ ರಾಜ್ಯವನ್ನ ಪ್ರತಿನಿಧಿಸುವ ಕೇಂದ್ರ ಸಚಿವರು ಕೂಡಾ ಸೈಲೆಂಟ್ ಆಗಿದ್ದಾರೆ. ಜನಸ್ವರಾಜ್ ಹಾಗೂ ಜನಾಶೀರ್ವಾದ ಯಾತ್ರೆಗೆ ಮಾತ್ರ ಸೀಮಿತರಾಗಿದ್ದಾರೆ. ಇದುವರೆಗೂ ಈ ಎಲ್ಲಾ ಸಂಸದರು ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಕೂಡಾ ಮಾಡಿಲ್ಲ. ಪ್ರವಾಹ, ಕೋವಿಡ್ ಸಮಯಕ್ಕೂ ಕೂಡಾ ಬಂದಿಲ್ಲ. ಈ ಮಧ್ಯೆ ಸಮಸ್ಯೆಗಳು ಎದುರಾದ ವೇಳೆ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲೂ ಮತ್ತೆ ವಿಫಲರಾಗ್ತಿದ್ದಾರೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಬಿಜೆಪಿ ಸಂಸದರ ಈ ನಡೆಯ ಬಗ್ಗೆ ವಿಪಕ್ಷ ಕಾಂಗ್ರೆಸ್ ಟೀಕಿಸುತ್ತಲೇ ಇದೆ. ಪ್ರವಾಹದಂತ ಕಠಿಣ ಸಂದರ್ಭದಲ್ಲೂ ಮೋದಿ ಮುಂದೆ ಮನಬಿಚ್ಚದ ಬಿಜೆಪಿ ಸಂಸದರನ್ನ ತರಾಟೆಗೆ ತೆಗೆದುಕೊಂಡಿದೆ. ಒಟ್ನಲ್ಲಿ ರಾಜ್ಯದಲ್ಲಿ ಸಂಸದರು ಇದ್ದರೂ ಇಲ್ಲದಂತಾಗಿದ್ದಾರೆ. ಇಂಥವರು ನೆರವಿಗೆ ಬಂದ್ರೆಷ್ಟು ಬಿಟ್ಟರೆಷ್ಟು ಅಂತಾ ಜನ ಹಿಡಿಶಾಪ ಹಾಕ್ತಿದ್ದಾರೆ.
ವಿಶೇಷ ಬರಹ: ಗಣಪತಿ, ನ್ಯೂಸ್ಫಸ್ಟ್, ಬೆಂಗಳೂರು