ಮಳೆ ನಿಂತರೂ ತಪ್ಪದ ಸಂಕಷ್ಟ; ತುಂಬಿ ಹರಿಯುತ್ತಿವೆ ಹಳ್ಳ-ಕೊಳ್ಳಗಳು; ಜೀವಭಯದಲ್ಲಿ ಜನ


ರಾಜ್ಯದಲ್ಲಿ ವರುಣಾರ್ಭಟ ತಗ್ಗಿದ ಮೇಲೆ ವರುಣ ಪ್ರಹಾರದ ಗುರುತುಗಳು ಎಲ್ಲೆಡೆ ಕಣ್ಣಿಗೆ ರಾಚುತ್ತಿವೆ . ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆರೆಗಳ ಕೋಡಿ ಒಡೆಯುತ್ತಿವೆ. ಮನೆ ಕುಸಿದು ಬೀಳುತ್ತಿದ್ದು, ಜೀವಭಯದಲ್ಲೇ ಜನ ದಿನದೂಡುವಂತಾಗಿದೆ. ಸಂಪರ್ಕ ಕಳೆದುಕೊಂಡಿರೋ ಗ್ರಾಮಗಳ ಪಾಡಂತೂ ಹೇಳ ತೀರದಾಗಿದೆ.

ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ.. ಹಲವು ವರ್ಷಗಳಿಂದ ತುಂಬದಿದ್ದ ಕೆರೆಗಳು ತುಂಬಿ ಕೋಡಿ ಒಡೆಯುತ್ತಿವೆ.. ಮನೆಗಳು ಧರಾಶಾಹಿಯಾಗುತ್ತಿವೆ. ಸೇತುವೆಗಳು ಕೊಚ್ಚಿ ಹೋಗಿ ಜನ ಸಂಪರ್ಕ ಕಡಿತಗೊಳ್ಳುತ್ತಿದೆ. ಈ ಎಲ್ಲಾ ದೃಶ್ಯಗಳು ರಾಜ್ಯಕ್ಕೆ ಎದುರಾಗಿರೋ ಜಲಕಂಟಕಕ್ಕೆ ಸಾಕ್ಷಿ ಹೇಳುತ್ತಿವೆ. ವರುಣನ ಅಬ್ಬರ ತಗ್ಗಿದ್ರೂ ಅವಾಂತರಗಳು ಮುಂದುವರೆದಿವೆ.

ನಿರಂತರ ಮಳೆಯಿಂದಾಗಿ ರಾಮನಗರದ ಮೇಳೆಹಳ್ಳಿಗೆ ಸಂಪರ್ಕ ಕಲ್ಪಿಸೋ ಸೇತುವೆ ಕುಸಿದು ಬಿದ್ದಿದೆ. ಸೇತುವೆ ಕುಸಿತದಿಂದ 5 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಹಲವಾರು ವರ್ಷಗಳಿಂದ ಸೇತುವೆ ದುಸ್ಥಿತಿಯಲ್ಲಿರೋದ್ರ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ರೂ ನಿರ್ಲಕ್ಷ್ಯ ವಹಿಸಿದ್ದಾರೆ ಅಂತಾ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಅಂತಾನೆ ಖ್ಯಾತವಾಗಿರೋ ದಾವಣಗೆರೆಯ ಶಾಂತಿ ಸಾಗರ ಕೆರೆ ಕೋಡಿ ಒಡೆದಿದೆ. ಕೆರೆ ಕೋಡಿ ಒಡೆದು ಜಲಪಾತದ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ನಿರಂತರ ಮಳೆಗೆ ಕೋಟೆನಾಡಿನ ಜನ ಕಂಗಾಲಾಗಿದ್ದಾರೆ. ಮಳೆಯಿಂದಾಗಿ ಮನೆಗಳು ಕುಸಿದು ಬೀಳುತ್ತಿದ್ದು, ಜಿಲ್ಲೆಯಾದ್ಯಂತ ಈವರೆಗೂ

188 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ರೆ, 463 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರಿನಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಇನ್ನು ನಿರಂತರ ಮಳೆಯಿಂದಾಗಿ 5 ವರ್ಷದ ಬಳಿಕ ಹಿರಿಯೂರಿನ ಗಾಯತ್ರಿ ಡ್ಯಾಂ ಭರ್ತಿಯಾಗಿದೆ. ಭರ್ತಿಯಾಗಿರೋ ಜಲಾಶಯದಲ್ಲೇ ಈಜಲು ಹೋಗಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಭಾರೀ ಮಳೆಗೆ ಕೊಡಿ ಬಿದ್ದ ಏಷ್ಯಾದ 2ನೇ ದೊಡ್ಡ ಕೆರೆ ಶಾಂತಿಸಾಗರ.. ಸೃಷ್ಟಿ ಆಯ್ತು ಜಲಪಾತ

ಕಾಫಿನಾಡು ಚಿಕ್ಕಮಗಳೂರಿನ ಜನರನ್ನು ವರುಣ ಕಂಗೆಡಿಸಿದ್ದಾನೆ. ಕಡೂರು ತಾಲೂಕಿನ ಯಗಟಿಪುರದಲ್ಲಿ ಮನೆಗೋಡೆ ಕುಸಿದುಬಿದ್ದು 45 ವರ್ಷದ ಮಂಜುನಾಥ್ ಸಾವನ್ನಪ್ಪಿದ್ದಾನೆ. ಮೂಡಿಗೆರೆಯ ದೇವರ ಮಕ್ಕಿಯಲ್ಲಿ ನಿರಂತರ ಮಳೆಗೆ ಮನೆಯೊಂದು ನೆಲಕ್ಕುರುಳಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿರಂತರ ಮಳೆಗೆ ತಮಕೂರು ಜಿಲ್ಲೆಯಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಿರೋ ಮಾರ್ಕೋನಹಳ್ಳಿ ಡ್ಯಾಂ ಭರ್ತಿಯಾಗಿದೆ. 2.4 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ಭರ್ತಿಯಾಗಿದ್ದು, 4 ಸಾವಿರ ಕ್ಯೂಸೆಕ್ಸ್​ ನೀರನ್ನು ಹೊರಗೆ ಬಿಡಲಾಗ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಮಳೆಗೆ ಹಳ್ಳಗಳು ತುಂಬಿಹರಿಯುತ್ತಿದ್ದು, ಕಮರಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜೀವ ಕೈಯಲ್ಲಿ ಹಿಡಿದುಕೊಂಡೆ ಗ್ರಾಮಸ್ಥರು ಹಳ್ಳ ದಾಟುತ್ತಿದ್ದಾರೆ

ಮಳೆ ನಿಂತ್ರೂ ಮಳೆಹನಿ ನಿಲ್ಲಲಿಲ್ಲ ಅನ್ನೋ ಹಾಗೆ ವರುಣಾರ್ಭಟ ಸೃಷ್ಟಿಸಿರೋ ಅವಾಂತರಗಳು ಜನರನ್ನು ಕಾಡುತ್ತಲೇ ಇವೆ. ಮಳೆ ಅಂದ್ರೆ ಸಾಕು ಜನ ಬೆಚ್ಚಿಬೀಳೋ ಹಾಗಾಗಿದೆ. ಮನೆ-ಮಠ, ಕಾಳು-ಕಡ್ಡಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯಕೈಗೊಳ್ಳಬೇಕಿದೆ

News First Live Kannada


Leave a Reply

Your email address will not be published. Required fields are marked *