ಮಳೆ ಹಾನಿ ಕುರಿತು ಅಧಿಕಾರಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ; ಮುಖ್ಯಾಂಶಗಳು ಇಲ್ಲಿದೆ | CM Basavaraj Bommai meeting with officials on Rain Updates Karnataka Rains


ಮಳೆ ಹಾನಿ ಕುರಿತು ಅಧಿಕಾರಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ; ಮುಖ್ಯಾಂಶಗಳು ಇಲ್ಲಿದೆ

ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಬೆಂಗಳೂರು ನಗರ ಸೇರಿದಂತೆ ಚಿಕ್ಕಬಳ್ಳಾಪುರ, ಕೊಪ್ಪಳ, ಕೋಲಾರ ಮುಂತಾದ ಭಾಗಗಳಲ್ಲಿ ಜೋರಾಗಿ ಮಳೆ ಆಗುತ್ತಿದೆ. ಇದರಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಉಂಟಾಗಿದೆ. ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ. ಈ ಎಲ್ಲಾ ವಿಚಾರಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು (ನವೆಂಬರ್ 21) ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ.

ನವೆಂಬರ್ ತಿಂಗಳಿನಲ್ಲಿ ಆಗಿರುವ ಅಕಾಲಿಕ ಮಳೆಯಿಂದ ಪ್ರಾಥಮಿಕ ಅಂದಾಜಿನಂತೆ ಸಂಭವಿಸಿದ ನಷ್ಟದ ವಿವರ ಈ ರೀತಿ ಇದೆ:
1. ಜೀವ ಹಾನಿ 24
2. ಮನೆ ಹಾನಿ
a. ಸಂಪೂರ್ಣ 658
b. ಭಾಗಶಃ 8495
3. ಜಾನುವಾರು- 191
4. ಬೆಳೆ ಹಾನಿ
a. ಕೃಷಿ- 5 ಲಕ್ಷ ಹೆಕ್ಟೇರ್
b. ತೋಟಗಾರಿಕೆ- 30114 ಹೆಕ್ಟೇರ್
5. ರಸ್ತೆ ಹಾನಿ- 2203 ಕಿ.ಮೀ.
6. ಸೇತುವೆಗಳು- 165
7. ಶಾಲೆಗಳು 1225
8. ಪ್ರಾಥಮಿಕ ಆರೋಗ್ಯ ಕೇಂದ್ರ – 39
9. ವಿದ್ಯುತ್ ಕಂಬ- 1674
10. ವಿದ್ಯುತ್ ಟ್ರಾನ್ಸ್ ಫಾರ್ಮರ್- 278

ಸಭೆಯ ಮುಖ್ಯಾಂಶಗಳು ಇಲ್ಲಿ ನೀಡಲಾಗಿದೆ:
1. ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ವರದಿಯಾಗಿದೆ.
2. ರಾಜ್ಯದಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಬಳಿ 689 ಕೋಟಿ ರೂ. ಎಸ್ ಡಿ ಆರ್ ಎಫ್ ನಿಧಿ ಲಭ್ಯವಿದೆ. ಹೆಚ್ಚುವರಿ ಅಗತ್ಯವಿದ್ದಲ್ಲಿ ಕೂಡಲೇ ಬಿಡುಗಡೆ ಮಾಡಲು ಸೂಚಿಸಲಾಯಿತು.
3. ಕೃಷಿ ಇಲಾಖೆಯವರು ಕಂದಾಯ, ತೋಟಗಾರಿಕೆ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ಕೂಡಲೇ ಪ್ರಾರಂಭಿಸಿ, ತ್ವರಿತವಾಗಿ ನಷ್ಟದ ವಿವರವನ್ನು ಪರಿಹಾರ ಆಪ್ ನಲ್ಲಿ ದಾಖಲಿಸಲು ಪ್ರಾರಂಭಿಸಬೇಕು. ಅವರಿಗೆ ಬೆಳೆನಷ್ಟ ಪರಿಹಾರ ವಿತರಣೆಯೂ ತ್ವರಿತವಾಗಿ ಆಗಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
4. ಕೃಷಿ ಇಲಾಖೆಯ ಎಲ್ಲ ಸ್ತರದ ಅಧಿಕಾರಿ ಹಾಗೂ ಸಿಬ್ಬಂದಿ ಮುಂದಿನ 15-20 ದಿನಗಳ ಕಾಲ ಸಂಪೂರ್ಣವಾಗಿ ಬೆಳೆ ಸಮೀಕ್ಷೆಯ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಯಿತು.
5. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ 3.43 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 1.5 ಲಕ್ಷ ರೈತರಿಗೆ 130 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಉಳಿದ 79 ಸಾವಿರ ರೈತರಿಗೆ ಪರಿಹಾರ ನೀಡಲು 52 ಕೋಟಿ ರೂ. ಕೂಡಲೇ ಬಿಡುಗಡೆ ಮಾಡುವಂತೆ ಸಿಎಂ ಬೊಮ್ಮಾಯಿ ಸೂಚಿಸಿದರು.
6. ಮನೆ ಹಾನಿ ವಿವರಗಳನ್ನು ತಂತ್ರಾಂಶದಲ್ಲಿ ಛಾಯಾಚಿತ್ರಗಳೊಂದಿಗೆ ಕೂಡಲೇ ದಾಖಲಿಸಿ, ಮನೆ ಸಂಪೂರ್ಣ ಹಾನಿಯಾದವರಿಗೆ ಮೊದಲ ಕಂತಿನ ಪರಿಹಾರ ತಲಾ 1 ಲಕ್ಷ ರೂ. ನಂತೆ ಕೂಡಲೇ ವಿತರಿಸಲು ಕ್ರಮ ವಹಿಸಬೇಕು. ಆಯಾ ಜಿಲ್ಲೆಗಳ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸುವಂತೆ ತಿಳಿಸಲಾಯಿತು.
7. ವಿಮಾ ಕಂಪೆನಿಗಳು ಸಹ ಬೆಳೆನಷ್ಟಕ್ಕೆ ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
8. ರಸ್ತೆ ಹಾನಿ ವರದಿ ಪಡೆದು, ಮಳೆ ಕಡಿಮೆಯಾದ ಕೂಡಲೇ ದುರಸ್ತಿ ಪಡಿಸುವಂತೆ ತಿಳಿಸಲಾಯಿತು. ಸಂಚಾರ ಸಂಪರ್ಕ ಕಡಿತಗೊಂಡ ಸ್ಥಳಗಳನ್ನು ಆದ್ಯತೆ ಮೇರೆಗೆ ಸರಿಪಡಿಸುವಂತೆ ಸೂಚಿಸಿದರು ರಸ್ತೆಗಳ ದುರಸ್ತಿಗಾಗಿ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ 500 ಕೋಟಿ ರೂ ಕೂಡಲೇ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಮುಖ್ಯಮಂತ್ರಿಗಳು ಆದೇಶಿಸಿದರು.
9. ಗ್ರಾಮೀಣ ರಸ್ತೆಗಳ ಹಾನಿಯ ಕುರಿತು ತಾಲ್ಲೂಕುವಾರು ವಿವರ ನೀಡುವಂತೆ ಸೂಚಿಸಲಾಯಿತು.
10. 4 ಕೆರೆಗಳು ಸಂಪೂರ್ಣ ಹಾನಿಯಾಗಿದೆ. ಕೆರೆಗಳ ದುರಸ್ತಿಯನ್ನು ಸಮರೋಪಾದಿಯಲ್ಲಿ ಮಾಡಿ, ನೀರು ವ್ಯರ್ಥವಾಗದಂತೆ ಎಚ್ಚರ ವಹಿಸುವಂತೆ ಸೂಚಿಸಲಾಯಿತು.
11. ವಿದ್ಯುತ್ ಸರಬರಾಜು ಕಂಪೆನಿಗಳು ಸಹ ತ್ವರಿತವಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕು.
12. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಹಾನಿ ಪರಿಹಾರ ಕಾರ್ಯಕ್ಕೆ ಪ್ರತಿ ವಲಯಕ್ಕೆ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚಲು ವಸ್ತುಸ್ಥಿತಿ ಆಧಾರಿತ ವರದಿಯನ್ನು ಕೂಡಲೇ ಸಲ್ಲಿಸಿ, ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
13. ಮಾರಣಾಂತಿಕ ರಸ್ತೆ ಗುಂಡಿಗಳ ಬಳಿ ಬ್ಯಾರಿಕೇಡ್ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಬೇಕು. ಕೂಡಲೇ ದುರಸ್ತಿಗೆ ಕ್ರಮ ವಹಿಸಲು ಸೂಚಿಸಲಾಯಿತು.
14. ಬೆಂಗಳೂರಿನಲ್ಲಿ ಮಳೆ ಹಾನಿ ಸಂಭವಿಸಿದ ಕುರಿತು ವಾರ್ಡ್ ವಾರು ವರದಿ ಸಲ್ಲಿಸುವಂತೆ ಸೂಚಿಸಲಾಯಿತು.
15. ಗೃಹ ರಕ್ಷಕ ದಳ, ಪೌರ ರಕ್ಷಣಾ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿಯ ಸೇವೆ ಪಡೆಯಲು ಸೂಚಿಸಲಾಗಿದೆ.

ಕಂದಾಯ ಸಚಿವ ಆರ್. ಅಶೋಕ್, ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕೋಲಾರ ಸಂಸದ ಕೆ. ಮುನಿಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಕೊಪ್ಪಳ: ಭಾರಿ ಮಳೆಯಿಂದ ತುಂಗಭದ್ರಾ ಡ್ಯಾಂ ಭರ್ತಿ; 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್​ ನೀರು ಬಿಡುಗಡೆ

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಭಾರೀ ಮಳೆಯಿಂದ ಅವಾಂತರ; ಮನೆ ಕಳೆದುಕೊಂಡವರಿಗೆ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ

TV9 Kannada


Leave a Reply

Your email address will not be published. Required fields are marked *