
ಸಿದ್ದರಾಮಯ್ಯ ಸಿಟಿ ರೌಂಡ್ಸ್
ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಒತ್ತುವರಿಯಾಗಿರುವ ರಾಜಕಾಲುವೆಗಳ ತೆರವಿಗೆ ಒತ್ತಾಯಿಸಿದರು.
ಬೆಂಗಳೂರು: ಸುರಿದ ಧಾರಾಕರ ಮಳೆ(Rain)ಗೆ ಬೆಂಗಳೂರಿನಲ್ಲಿ ಜನಜೀವನ ತತ್ತರಿಸಿದ್ದು, ರಾಜಕಾಲುವೆಗಳ ನೀರು ರಸ್ತೆಗೆ ನುಗ್ಗಿತ್ತು. ಈ ನಿಟ್ಟಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಬೆಂಗಳೂರು ಸಿಟಿ ರೌಂಡ್ಸ್ ಹೊಡಿದ್ದಾರೆ. ಗಾಂಧಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಳೆ ಹಾನಿ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಿದ್ದರಾಮಯ್ಯ, ಶೇಷಾದ್ರಿಪುರ ರಾಜಕಾಲುವೆ (storm water drain) ಬಳಿ ಪರಿಶೀಲನೆ ನಡೆಸಿದರು. ನಿನ್ನೆ ಸುರಿದ ಭಾರಿ ಮಳೆಗೆ ಈ ರಾಜಕಾಲುವೆಯಿಂದ ನೀರು ಉಕ್ಕಿಹರಿದಿತ್ತು. ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಕಾಲುವೆ ಒತ್ತುವರಿ ತೆರವಿಗೆ ಇಚ್ಛಾಶಕ್ತಿ ಬೇಕು
ಬೆಂಗಳೂರಿನಲ್ಲಿ ರಾಜಕಾಲುವೆಗಳ ಒತ್ತುವರಿಯಿಂದಾಗಿ ಸಮಸ್ಯೆಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ರಾಜಕಾಲುವೆಗಳ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಸಿಟಿ ರೌಂಡ್ಸ್ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೆಲವರು ಅಕ್ರಮವಾಗಿ ರಾಜಕಾಲುವೆಗಳಲ್ಲಿ ಮನೆ ಕಟ್ಟಿಕೊಂಡು ಕೂತಿದ್ದಾರೆ. ನಮ್ಮ ಅವಧಿಯಲ್ಲಿ ರಾಜಕಾಲುವೆ ತೆರವು ಮಾಡಿದ್ದೆವು. ಇದಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿ ಇರಬೇಕು ಎಂದರು.