ಬರೋಬ್ಬರಿ ಎರಡು ತಿಂಗಳ ಹಿಂದಿನ ಪ್ರಕರಣ ಅದು. ಇಡೀ ದೇಶದಲ್ಲಿಯೇ ತಲ್ಲಣ ಸೃಷ್ಟಿ ಮಾಡಿದ್ದ ಕೇಸ್. ಪ್ರಕರಣ ಬೆನ್ನತ್ತಿದ್ದು ಆರಂಭದಲ್ಲಿ ಒಂದು ರಾಜ್ಯದ ಪೊಲೀಸರು, ಆನಂತರ ಎಸ್ಐಟಿ ತಂಡ, ಆಮೇಲೆ ಸಿಬಿಐ. ಹೀಗೆ ನ್ಯಾಷನಲ್ ಏಜೆನ್ಸಿಯೊಂದು ಎಂಟ್ರಿಯಾದಾಗ ಸಹಜವಾಗಿಯೇ ತನಿಖೆಯ ವೇಗ ಜಾಸ್ತಿಯಾಯ್ತು,. ಆದ್ರೆ, ಎರಡು ತಿಂಗಳು ಕಳೆದ ಬಳಿಕ ಈಗ ಆ ಪ್ರಕರಣ ಯಾರೂ ಊಹಿಸಿಕೊಳ್ಳಲಾಗದಂತಹ ತಿರುವು ಪಡೆದುಕೊಂಡಿದೆ.
ಒಂದು ಸಾವು ಯಾವ ರೀತಿ ಟ್ವಿಸ್ಟ್ ಌಂಡ್ ಟರ್ನ್ಗಳನ್ನ ಪಡೆದುಕೊಳ್ಳುತ್ತೆ ಅನ್ನೋದಕ್ಕೆ ಸೆಪ್ಟಂಬರ್ 20ರಂದು ನಡೆದಿದ್ದ ನಿಗೂಢ ಸಾವಿನ ಪ್ರಕರಣವೇ ಸಾಕ್ಷಿ. ಅಲ್ಲಿ ಮೃತ ಪಟ್ಟಿದ್ದು ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಎಲ್ಲರಿಗೂ ಗೊತ್ತಿರುವ, ದೇಶದಲ್ಲಿ ಮಾನ್ಯತೆ ಪಡೆದಿರುವ 13 ಹಿಂದೂ ಸನ್ಯಾಸ ಸಂಸ್ಥೆಗಳ ಸರ್ವೋಚ್ಚ ನಿರ್ಣಾಯಕ ಸಂಸ್ಥೆಯಾಗಿರೋ ಎಬಿಎಪಿ ಮುಖ್ಯಸ್ಥರು. ಶ್ರೀ ಮಹಾಂತ್ ನರೇಂದ್ರ ಗಿರಿಯವರ ಸಾವು. ಅವರ ಮೃತದೇಹ ಪ್ರಯಾಗ್ರಾಜ್ನಲ್ಲಿನ ಶ್ರೀ ಮಠ ಬಘಾಂಬರಿ ಗಡ್ಡಿಯಲ್ಲಿ ಪತ್ತೆ ಯಾಗಿತ್ತು ಅಲ್ಲಿಂದಲೇ ಹುಟ್ಟಿಕೊಂಡಿತ್ತು ನೋಡಿ ಸಾಲು ಸಾಲು ಅನುಮಾನಗಳು.
ಮಹಾಂತ್ ನರೇಂದ್ರ ಗಿರಿಯವರು ಸೆಪ್ಟಂಬರ್ 20 ರಂದು ಬಘಾಂಬರಿ ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದರು. ಆ ವಿಚಾರ ರಾಷ್ಟ್ರಾವ್ಯಾಪಿ ಹಬ್ಬಿ, ಹಲವು ಹಿಂದೂ ಸಂಘಟನೆಗಳು ಹಾಗೂ ಸಂಸ್ಥೆಗಳಲ್ಲಿ ತಲ್ಲಣ ಸೃಷ್ಟಿಸಿಬಿಟ್ಟಿತ್ತು. ಯಾಕಂದ್ರೆ ಅವರದ್ದು ಒಂದು ಆತ್ಮಹತ್ಯೆ ಎಂದು ಆ ಕ್ಷಣಕ್ಕೆ ಯಾರು ಕೂಡ ಒಪ್ಪಿಕೊಳ್ಳೋದಕ್ಕೆ ಸಿದ್ದರಿರಲಿಲ್ಲ. ಜೊತೆಗೆ ದೇಶಾದ್ಯಂತ ಅವರ ಅನುಯಾಯಿಗಳ ಆಕ್ರೋಶ ಕಟ್ಟೆ ಹೊಡೆಯಲು ಆ ಸಾವು ಕಾರಣವಾಗಿತ್ತು.. ಪ್ರಕರಣ ಬೆನ್ನತ್ತಿದ್ದ ಪೊಲೀಸರು ಅದೊಂದನ್ನ ಬಿಟ್ರೆ ಬೇರೆ ಯಾವ ಕ್ಲೂ ಕೂಡ ಸಿಗಲಿಲ್ಲ.. ಅದೇನ್ ಗೊತ್ತಾ? ಮಹಾಂತ್ ನರೇಂದ್ರ ಗಿರಿಯರು ಬರೆದಿಟ್ಟಿದ್ದ ಡೆತ್ನೋಟ್
ಡೆತ್ ನೋಟ್ ಸಿಕ್ಕ ಬಳಿಕ ಬೆಳೆದ ಅನುಮಾನಗಳ ಹುತ್ತ!
ಹೌದು.. ಮಹಾಂತ ನರೇಂದ್ರ ಗಿರಿಯವರೆ ಕೋಣೆಯಲ್ಲಿ ಅಂದು 13 ಪುಟಗಳ ಒಂದು ಡೆತ್ ನೋಟ್ ಸಿಕ್ಕಿತ್ತು. ಅವರ ಸಾವಿನ ಸುದ್ದಿ ಕೇಳಿದಾಗಲೇ ಹಲವು ಸಂಶಯಗಳು ಹುಟ್ಟಿಕೊಂಡಿತ್ತು. ಇನ್ನು, ಯಾವಾಗ 13 ಪುಟಗಳ ಡೆತ್ ನೋಟ್ ಸಿಕ್ಕಿತ್ತೋ ಅದರ ಸುತ್ತ ಮತ್ತೊಂದು ಅನುಮಾನದ ಹುತ್ತ ಹುಟ್ಟಿಕೊಂಡಿತ್ತು.
ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದು ಶಿಷ್ಯನ ಹೆಸರು
ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್ನೋಟ್ ಇಡೀ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿತ್ತು. ಡೆತ್ ನೋಟ್ನಲ್ಲಿ ತನ್ನ ಸಾವಿಗೆ ಶಿಷ್ಯ ಕೊಡ್ತಿದ್ದ ಮಾನಸಿಕ ಹಿಂಸೆನೇ ಕಾರಣ ಎಂದು ಉಲ್ಲೇಖಿಸಲಾಗಿದೆ ಅಂತಾ ಹೇಳಲಾಗ್ತಿದೆ. ಆದ್ರೆ, ಶಿಷ್ಯ ಆನಂದ್ ಗಿರಿ ಮಾತ್ರ ಇದು ಆತ್ಮಹತ್ಯೆಯಲ್ಲ ಹತ್ಯೆ ಅನ್ನೋ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದ. ಶಿಷ್ಯ, ಯಾವಾಗ ಈ ರೀತಿ ಹೇಳಿಕೆ ಕೊಡ್ತಾನೋ ಪೊಲೀಸರು ದಂಗಾಗಿ ಹೋಗಿದ್ದರು..
ಗುರು-ಶಿಷ್ಯರ ನಡುವೆ ಉಂಟಾಗಿತ್ತು ಮನಸ್ತಾಪ
ಆನಂದ್ ಗಿರಿ, ಮಹಾಂತ ಅವರ ಅತ್ಯಾಪ್ತ ಶಿಷ್ಯ. ಆದರೂ, ಗುರು ಶಿಷ್ಯರ ನಡುವೆ ಬಿರುಕು ಮೂಡಿತ್ತು. ಮೇ ತಿಂಗಳಲ್ಲಿ ಅವರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಅದರಲ್ಲೂ ಆನಂದ್ ಗಿರಿ ಮೇಲೆ ಗಂಭೀರ ಆರೋಪ ಕೂಡ ಕೇಳಿ ಬಂದಿತ್ತು. ಪೂಜಾರಿಗಳ ಗುಂಪು, ಆನಂದ್ ಗಿರಿ ಮೇಲೆ ವಂಚನೆ ಹಾಗೂ ಆರ್ಥಿಕ ಅವ್ಯವಹಾರಗಳು ಇದೆ ಅನ್ನೋ ಆರೋಪ ಮಾಡಿತ್ತು. ಯಾವಾಗ ಆನಂದ್ ಗಿರಿ ಮೇಲೆ ಇಂತಹ ಆರೋಪ ಕೇಳಿ ಬಂದಿತ್ತೋ ಆಗಲೇ ಮಹಾಂತ ನರೇಂದ್ರ ಗಿರಿ ತಮ್ಮ ಶಿಷ್ಯನನ್ನ ಹೊರಗಟ್ಟಿದ್ರು. ಇದಾದ ಕೆಲವೇ ದಿನಗಳಲ್ಲಿ ಕ್ಷಮಾಪಣೆ ಕೇಳಿದ್ರೂ ಕೂಡ ಇವರ ನಡುವೆ ಹಾಗೂ ಇವರ ನಡುವಿನ ಸಂಧಾನ ಹೆಚ್ಚು ಸಮಯ ಉಳಿಯಲಿಲ್ಲ.. ಮುಂದೆ ಆನಂದ್ ಗಿರಿ ತಮ್ಮ ಗುರುವಾದ ಮಹಾಂತ ಗಿರಿಗೆ ಮಾನಸಿಕ ಹಿಂಸೆ ನೀಡುತ್ತಿದ್ರು ಅನ್ನೋ ಆರೋಪವಿದೆ.
ಗುರುವಿನ ಆತ್ಮಹತ್ಯೆಗೆ ಶಿಷ್ಯನೇ ಕಾರಣವಾದ್ರಾ?
ನರೇಂದ್ರ ಗಿರಿ ಕೊಠಡಿಯಲ್ಲಿ ಆತ್ಮಹತ್ಯೆ ಚೀಟಿಯನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ತಮ್ಮ ಆತ್ಮಹತ್ಯೆಗೆ ಶಿಷ್ಯನೊಬ್ಬ ಕಾರಣನಾಗಿದ್ದಾನೆ ಅನ್ನೋ ಮಾಹಿತಿ ಹೊರಬಿದ್ದಿದೆ. ತಮ್ಮ ಶಿಷ್ಯರಲ್ಲಿ ಒಬ್ಬರಾದ ಆನಂದ್ ಗಿರಿಯಿಂದ ಮಾನಸಿಕ ಹಿಂಸೆ ಅನುಭವಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಕಾಗದದ ಎರಡೂ ಬದಿ ಸೇರಿದಂತೆ ಒಟ್ಟು ನಾಲ್ಕು ಪುಟಗಳಷ್ಟು ಸುದೀರ್ಘ ಪತ್ರ ಬರೆಯಲಾಗಿದೆ. ತಾವು ಜೀವನವನ್ನು ಬಹಳ ಗೌರವಯುತವಾಗಿ ನಡೆಸಿದ್ದು, ಗೌರವಯುತ ಸಾವು ಬಯಸಿರುವುದಾಗಿ ಅದರಲ್ಲಿ ಮಹಾಂತ ಗಿರಿ ಹೇಳಿದ್ದಾರೆ ಎನ್ನಲಾಗಿದೆ. ತಮ್ಮ ಶಿಷ್ಯ ಆನಂದ್ ಗಿರಿ ತಮಗೆ ಮಾನಸಿಕ ಹಿಂಸೆ ನೀಡಿದ್ದಾಗಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.
ಆಸ್ತಿ ವಿಚಾರವಾಗಿ ಗುರು-ಶಿಷ್ಯರ ನಡುವೆ ಬಿರುಕು
ಪೊಲೀಸರ ಸಮ್ಮುಖದಲ್ಲೇ ನಡೆದಿತ್ತು ಸಂಧಾನ
ಕೆಲವು ತಿಂಗಳ ಹಿಂದೆ ಆಸ್ತಿ ವಿವಾದವಾಗಿ ನರೇಂದ್ರ ಗಿರಿ ಮತ್ತು ಆನಂದ್ ಗಿರಿ ನಡುವೆ ಮನಸ್ತಾಪ ಉಂಟಾಗಿತ್ತು. ಅಲ್ಲದೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ರಾಜಕಾರಣಿಗಳ ಸಮ್ಮುಖದಲ್ಲಿಯೇ ಸಂಧಾನ ನಡೆದಿತ್ತು ಅನ್ನೋ ಮಾಹಿತಿ ಕೂಡ ಇದೀಗ ಬಹಿರಂಗಗೊಂಡಿದೆ. ಆದ್ರೆ ಆನಂದ್ ಗಿರಿ ಮಾತ್ರ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.
ಇದು ಆತ್ಮಹತ್ಯೆ ಅಲ್ಲ, ಕೊಲೆ. ಅದೇ ನಿಟ್ಟಿನಲ್ಲಿ ತನಿಖೆ ಮಾಡಬೇಕು. ಡೆತ್ನೋಟಿನಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವುದು ಸಂಚಿನ ಭಾಗ. ಮಹಾಂತ ನರೇಂದ್ರ ಗಿರಿ ಅವರು ಒಮ್ಮೆಲೆ ಅಷ್ಟು ದೊಡ್ಡ ಪತ್ರ ಬರೆಯಲು ಸಾಧ್ಯವಿಲ್ಲ. ಅವರು ಅಷ್ಟು ಸುದೀರ್ಘ ಟಿಪ್ಪಣಿ ಬರೆದಿರುವುದು ಹೇಗೆ ಸಾಧ್ಯ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು..
-ಆನಂದ್ ಗಿರಿ, ಎಬಿಎಪಿ ಅಧ್ಯಕ್ಷ
ಇದೊಂದು ಆತ್ಮಹತ್ಯೆಯಲ್ಲ ಕೊಲೆ ಅನ್ನೋ ಆನಂದ್ ಗಿರಿ ಹೇಳಿಕೆ, ಪ್ರಕರಣದಲ್ಲಿ ಕಿಡಿ ಹೊತ್ತುಕೊಳ್ಳುವಂತೆ ಮಾಡಿತ್ತು.. ಪೊಲೀಸರು ಕೂಡ ಮಹಾಂತ ಗಿರಿಯ ನಿಗೂಢ ಸಾವಿನ ಅಸಲಿ ರಹಸ್ಯ ಏನು ಅನ್ನೋದರ ಕುರಿತು ತನಿಖೆ ನಡೆಸುತ್ತಿದ್ದರು. ಪ್ರಕರಣ ತೀವ್ರ ಸ್ವರೂಪವನ್ನ ಪಡೆದುಕೊಂಡ ಬಳಿಕ ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನ ಎಸ್ಐಟಿಗೆ ವರ್ಗಾಹಿಸಿತ್ತು.
ಹೀಗೆ , ಎಸ್ಐಟಿ ಟೀಮ್ ಬಘಾಂಬರಿ ಗಡ್ಡಿಗೆ ಭೇಟಿ ಕೊಟ್ಟಾಗ ಕೆಲವೊಂದು ಸಿಸಿ ಕ್ಯಾಮೆರಾಗಳನ್ನ ವಶಪಡಿಸಿಕೊಳ್ಳಲಾಗಿತ್ತು. ಆ ನಂತರ ಡೆತ್ ನೋಟ್ ವಶಕ್ಕೆ ಪಡೆದುಕೊಂಡು ಅದನ್ನ ಕೂಲಂಕುಶವಾಗಿ ಪರಿಶೀಲನೆ ನಡೆಸಿದ್ದರು. ಆಗಲೇ ನೋಡಿ ಪ್ರಕರಣ ಒಂದಷ್ಟು ತಿರುವುಗಳನ್ನ ಪಡೆದುಕೊಳ್ಳೋದಕ್ಕೆ ಶುರು ಆಗಿದ್ದು.
ಡೆತ್ನೋಟ್ನಲ್ಲಿ ಆರೋಪ ಮಾಡಿದಂತೆ ಮೂವರ ಬಂಧನ
ಮಹಂತೇಶ್ ನರೇಂದ್ರ ಗಿರಿಯವರು ಬರೆದಿಟ್ಟಿದ್ದರು ಎನ್ನಲಾಗುತ್ತಿರೋ ಡೆತ್ ನೋಟ್ನಲ್ಲಿ ಕೆಲವೊಂದಷ್ಟು ಆರೋಪಗಳನ್ನ ಮಾಡಿ, ಕೆಲವರ ಹೆಸರನ್ನ ಕೂಡ ಉಲ್ಲೇಖ ಮಾಡಿದ್ದರು. ಅದರಲ್ಲಿ ಪ್ರಮುಖವಾಗಿ ಏನಿತ್ತು ಅನ್ನೋದನ್ನ ನೋಡೋದಾದ್ರೆ
‘ಅಪವಾದ ಹೊತ್ತು ಬದುಕಲಾರೆ’
‘ನಾನು ಮಹಿಳೆಯೊಂದಿಗಿರುವ ಪೋಟೋವನ್ನು ಆನಂದ ಗಿರಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈವರೆಗೆ ನಾನು ಗೌರವದಿಂದ ಬದುಕಿದ್ದೆ, ಹಾಗಾಗಿ ಅಪವಾದ ಹೊತ್ತುಕೊಂಡು ಬದುಕಲು ಇಷ್ಟವಾಗಲಿಲ್ಲ. ಹಾಗಾಗಿ ಈ ನಿರ್ಧಾರ ಮಾಡಿದ್ದೇನೆ’
ಎಸ್.. ಇದೊಂದು ವಿಚಾರ ಅಂದು ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ದೇಶಾದ್ಯಂತ ಡೆತ್ನೋಟ್ನಲ್ಲಿ ಬರೆದಿತ್ತು ಎನ್ನಲಾಗುತ್ತಿರೋ ಮೂವರ ಹೆಸರಿನ ವ್ಯಕ್ತಿಗಳನ್ನ ಬಂಧಿಸುವಂತೆ ಕೂಗು ಕೇಳಿ ಬಂದಿತ್ತು. ಅಲ್ಲದೇ ಅಷ್ಟೋತ್ತಿಗಾಗಲೇ ಮೂವರನ್ನ ಎಸ್ಐಟಿ ಕೂಡ ಬಂಧಿಸಿದ್ದರು.
ಅಂತ ನರೇಂದ್ರ ಗಿರಿಯವರು ಡೆತ್ ನೋಟ್ನಲ್ಲಿ ತಿಳಿಸಿದ್ದಂತೆ ತಮ್ಮ ಸಾವಿಗೆ ಆನಂದಗಿರಿಯೇ ಕಾರಣ, ಆತ ತಮ್ಮನ್ನು ಸಾವಿನ ಅಂಚಿಗೆ ದೂಡಿದ್ದಾನೆ ಎಂದು ಆರೋಪಿಸಿದ್ದರು. ಆತನೊಂದಿಗೆ ಆದ್ಯ ತಿವಾರಿ ಹಾಗೂ ಆತನ ಪುತ್ರ ಸಂದೀಪ್ ಕೂಡ ತಮ್ಮ ಸಾವಿಗೆ ಕಾರಣರಾಗಿದ್ದಾರೆ ಎಂದು ಉಲ್ಲೇಖಿಸಿದ್ರು. ಈ ಮೂವರ ವಿರುದ್ಧವೂ ಆಡಳಿತ ಕ್ರಮ ಕೈಗೊಳ್ಳಬೇಕೆಂದು ನರೇಂದ್ರ ಗಿರಿಯವರು ಪತ್ರದಲ್ಲಿ ಆಗ್ರಹಿಸಿದ್ದಾರೆ. ಅದರ ಜೊತೆಗೆ ಮತ್ತೊಂದು ಅಂಶವನ್ನು ಸಹ ಉಲ್ಲೇಖಿಸಿದ್ದರು.
‘ನನ್ನ ಚಾರಿತ್ರ್ಯವಧೆಗೆ ಯತ್ನ’
‘ನಾನು ಮಹಿಳೆಯರೊಂದಿಗೆ ಇರುವ ರೀತಿಯ ತಿರುಚಿದ ಚಿತ್ರಗಳನ್ನು ಹರಿಬಿಡಲು ಆನಂದಗಿರಿ ಯೋಜಿಸುತ್ತಿದ್ದ ಎಂಬ ಮಾಹಿತಿ ಹರಿದ್ವಾರದ ಮೂಲಕ ತಿಳಿಯಿತು. ಒಂದು ವೇಳೆ ಈ ರೀತಿಯಾದರೆ ಅಖಾಡ ಪರಿಷತ್ ನ ಮುಖ್ಯಸ್ಥರಾಗಿರುವ ತಮ್ಮ ಗೌರವ, ಘನತೆಗಳಿಗೆ ಚ್ಯುತಿ ಉಂಟಾಗಿ ಚಾರಿತ್ರ್ಯ ವಧೆಯಾಗಲಿದೆ. ಪ್ರಕರಣದ ಸತ್ಯಾಸತ್ಯತೆಗಳು ಆ ನಂತರ ಇತ್ಯರ್ಥವಾಗಬಹುದು ನಾನು ನಿರ್ದೋಷಿ ಎಂಬುದು ತಿಳಿಯುವ ವೇಳೆಗೆ ನನ್ನ ಚಾರಿತ್ರ್ಯಕ್ಕೆ ಸಂಪೂರ್ಣ ಕಳಂಕ ಅಂಟಿಕೊಂಡಿರುತ್ತದೆ. ನನ್ನ ಮನಸ್ಸು ಆನಂದ ಗಿರಿಯ ಕಾರಣದಿಂದಾಗಿ ತೊಂದರೆಗೊಳಗಾಗಿದೆ’
ಹೀಗೆ, ನರೇಂದ್ರ ಗಿರಿಯವರು ತಮ್ಮ ಘನತೆಗೆ ಚ್ಯುತಿ ತರುವಂತಹ ಕೆಲಸಗಳು ಆಗುತ್ತಿತ್ತು ಎಂದು ಡೆತ್ನೋಟ್ನಲ್ಲಿ ಬರೆದಿದ್ದರು. ಅಲ್ಲದೇ, ಈ ಹಿಂದೆಯೇ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ತಿರ್ಮಾನ ಮಾಡಿದ್ದೆ ಅಂತಲೂ ತಿಳಿಸಿದ್ದರು.
‘ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’
‘ಸೆ.13ರಂದೇ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯತ್ನಿಸಿದ್ದೆ. ಆದರೆ ಧೈರ್ಯ ಸಾಲಲಿಲ್ಲ. ಇಂದು ನನಗೆ ಸಿಕ್ಕ ಮಾಹಿತಿಯ ಪ್ರಕಾರ ಒಂದು ಅಥವಾ ಎರಡು ದಿನಗಳಲ್ಲಿ ಆನಂದ ಗಿರಿ ನಾನು ಮಹಿಳೆಯರೊಂದಿಗೆ ಇರುವ ತಿರುಚಿದ ಚಿತ್ರಗಳನ್ನು ಹರಿಯಬಿಡುವವನಿದ್ದ ಎಂಬ ಮಾಹಿತಿ ಸ್ಪಷ್ಟವಾಯಿತು. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’
ಯಾವಾಗ ಈ ವಿಚಾರ ಜಗಜ್ಜಾಹೀರಾಯ್ತೋ ಅವರ ಸಾವಿಗೆ ಆನಂದ ಗಿರಿಯೆ ಕಾರಣ ಅಂತಾ ಹೇಳಲಾಗಿತ್ತು. ಆದ್ರೆ, ಆನಂದ ಗಿರಿ ಮಾತ್ರ ಇದು ಆತ್ಮಹತ್ಯೆ ಅಲ್ಲವೇ ಅಲ್ಲ, ಆಸ್ತಿಗಾಗಿ ಕೊಲೆ ಮಾಡಿದ್ದಾರೆ ಎಂದು ವಾದಮಾಡುತ್ತಿದ್ದ.. ಆದರೂ ಆತನ ಬಂಧನ ಮಾಡಲಾಗಿತ್ತು. ನಂತರ ಪ್ರಕರಣಕ್ಕೆ ಮಾಸ್ ಎಂಟ್ರಿ ಕೊಟ್ಟಿದ್ದು ಸಿಬಿಐ..
ಸತತ ಎರಡು ತಿಂಗಳ ತನಿಖೆ ನಡೆಸಿದ್ದ ಸಿಬಿಐ
ಶನಿವಾರ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ
ಹೌದು.. ಎರಡು ತಿಂಗಳಿನಿಂದ ತನಿಖೆ ನಡೆಸಿದ್ದ ಸಿಬಿಐ ನಿನ್ನೆ ಅಂದ್ರೆ ಶನಿವಾರ ಕೊರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಮಹಾಂತ್ ನರೇಂದ್ರ ಗಿರಿಯವರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಅವರ ಶಿಷ್ಯಂದಿರಾದ ಆನಂದ್ ತಿವಾರಿ, ಸಂದೀಪ್ ತಿವಾರಿ ಮತ್ತು ಆತನ ಪುತ್ರ ಆಧ್ಯ ತಿವಾರಿ ವಿರುದ್ಧ ದೋಷಾರೋಪ ಪಟ್ಟಿ ನೀಡಿದೆ.
ಸ್ಫೋಟಕ ಮಾಹಿತಿ ಚಾರ್ಜ್ಶೀಟ್ನಲ್ಲಿ ಉಲ್ಲೇಖ!
ಹೌದು.. ಮುಖ್ಯವಾಗಿ ಚಾರ್ಜ್ಶೀಟ್ನಲ್ಲಿ ಮಹಾಂತ್ ನರೇಂದ್ರ ಗಿರಿಯವರ ಆತ್ಮಹತ್ಯೆಗೆ ಕಾರಣ ಏನು ಅನ್ನೋದನ್ನ ಸಿಬಿಐ ಉಲ್ಲೇಖಿಸಿದೆ. ಅವರ ಆತ್ಮಹತ್ಯೆಗೆ ಕಾರಣವೇ ಶಿಷ್ಯಂದಿರು. ಗುರುಗಳು ಮಹಿಳೆ ಜೊತೆಗಿರುವ ಫೋಟೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದರು, ಆತ್ಮಹತ್ಯೆಗೆ ಪ್ರಚೋದಿಸುತ್ತಿದ್ದರು, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಸಿಬಿಐ ಉಲ್ಲೇಖಸಿದೆ. ಆ ಚಾರ್ಜ್ಶೀಟ್ನ ಪ್ರಯಾಗ್ರಾಜ್ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದಾಖಲು ಮಾಡಿದೆ ಪ್ರಸ್ತುತ ಚಾರ್ಜ್ಶೀಟ್ನ್ನು ಪರಿಗಣಿಸಿರುವ ನ್ಯಾಯಾಲಯ ನವೆಂಬರ್ 25ಕ್ಕೆ ವಿಚಾರಣೆ ನಿಗದಿಪಡಿಸಿದೆ.
ಒಟ್ಟಿನಲ್ಲಿ ಅಂದು ಯಾವೆಲ್ಲಾ ವಿಚಾರಗಳು ಮುನ್ನೆಲೆಗೆ ಬಂದಿತ್ತೋ, ಡೆತ್ ನೋಟ್ನಲ್ಲಿ ಯಾವ ಅಂಶವನ್ನ ಮಹಾಂತ್ ನರೇಂದ್ರ ಗಿರಿಯವರು ಉಲ್ಲೇಖಿಸಿದ್ರೋ ಅದೆಲ್ಲವು ಸತ್ಯ ಎಂದು ಸಿಬಿಐ ತನಿಖೆ ವೇಳೆ ತಿಳಿದು ಬಂದಿದೆ. 25ರಂದು ಕೋರ್ಟ್ನಲ್ಲಿ ನಡೆಯುವ ವಿಚಾರಣೆ ಕುತೂಹಲ ಕೆರಳಿಸಿದೆ.
ಮಹಾಂತ್ ನರೇಂದ್ರ ಗಿರಿಯವರ ಸಾವು ಆತ್ಮಹತ್ಯೆ ಅಂತಾ ಹೇಳಲಾಗ್ತಿದೆ ಅಷ್ಟೇ. ಆದ್ರೆ, ಅದು ಪ್ರಚೋದನಾತ್ಮಕ ಕೊಲೆ ಅಂತಲೇ ಬಿಂಬಿತವಾಗುತ್ತಿದೆ. ಎರಡು ತಿಂಗಳ ಬಳಿಕ ಡೆತ್ ನೋಟ್ನಲ್ಲಿರೋದೆಲ್ಲಾ ಸತ್ಯ ಅಂತಾ ಸಿಬಿಐ ತೋರಿಸಿದೆ. ಪ್ರಕರಣ ಮುಂದೆ ಇನ್ಯಾವ ಟ್ವಿಸ್ಟ್ ಪಡೆದುಕೊಳ್ಳುತ್ತೋ ಕಾದು ನೋಡಬೇಕು.