ಬೀದರ್: ಗಡಿ ಜಿಲ್ಲೆ ಬೀದರ್‍ನಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು, ಮಹಾ ಮಳೆಗೆ ಔರಾದ್ ತಾಲೂಕಿನ ದಾಪಕಾ ಗ್ರಾಮ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಬೆಳಗ್ಗೆಯಿಂದ ಬೀದರ್, ಹುಮ್ನಬಾದ್, ಚಿಟ್ಟಗುಪ್ಪ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದೆ. ಆದರೆ ಔರಾದ್ ತಾಲೂಕಿನಲ್ಲಿ ದಾಖಲೆಯ ಮಳೆಯಾಗಿದೆ. ಸತತ ಮೂರು ಗಂಟೆಗಳಲ್ಲಿ ಔರಾದ ತಾಲೂಕಿನಲ್ಲಿ ಬರೋಬ್ಬರಿ 66 ಮಿಲಿ ಮೀಟರ್ ಮಳೆಯಾಗಿದ್ದು, ಮಹಾ ಮಳೆಗೆ ಔರಾದ್ ನಲುಗಿ ಹೋಗಿದೆ. ದಾಪಕಾ ಗ್ರಾಮ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ರಸ್ತೆ ಮೇಲೆ ಭಾರೀ ಪ್ರಮಾಣದ ನೀರು ಹರಿದು, ಗ್ರಾಮದ ರಸ್ತೆಗಳು ಅಕ್ಷರಶಃ ಕೆರೆಯಂತಾಗಿವೆ.

ಇಗಾಗಲೇ ರೈತರು ಬಿತ್ತನೆ ಮಾಡಿದ್ದು, ಚಿಗುರೊಡೆಯುತ್ತಿದ್ದ ಅಪಾರ ಪ್ರಮಾಣದ ಮೊಳಕೆಯಲ್ಲಿದ್ದ ಬೆಳೆ ಸಂಪೂರ್ಣ ಹಾಳಾಗಿದೆ. ಮಹಾ ಮಳೆಗೆ ರೈತರು ಕಂಗಾಲಾಗಿದ್ದಾರೆ. ಬೀದರ್ ನಲ್ಲಿ ಇಂದು ದಾಖಲೆಯ ಮುಂಗಾರು ಮಹಾಮಳೆಯಾಗಿದ್ದು, ಇನ್ನೂ ಹಲವು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

The post ಮಹಾಮಳೆಗೆ ಬೀದರ್‌ನ ದಾಪಕಾ ಗ್ರಾಮ ಸಂಪೂರ್ಣ ಜಲಾವೃತ appeared first on Public TV.

Source: publictv.in

Source link