ಕೊರೊನಾ ಕಡಿಮೆ ಆಯ್ತು ಅಂತ ನಿಟ್ಟುಸಿರು ಬಿಟ್ಟಿದ್ದ ಮಹಾರಾಷ್ಟ್ರಕ್ಕೆ ಶಾಕ್ ಆಗಿದೆ. ಶೀಘ್ರದಲ್ಲೇ ಮೂರನೇ ಅಲೆ ಅಪ್ಪಳಿಸುವ ಬಗ್ಗೆ ಅಲ್ಲಿ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮುಂಬೈ ಕಡಲು ತೀರದಲ್ಲಿ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಕೊರೊನಾ ಎರಡನೇ ಅಲೆಯಿಂದ ಮುಂಬೈ ಪಾರಾಗಿತ್ತು. ತಿಂಗಳುಗಟ್ಟಲೇ ಲಾಕ್ ಡೌನ್ ಮಾಡಲಾಗಿದ್ದ ಮುಂಬೈನಲ್ಲಿ ಹೆಚ್ಚು ಕಡಿಮೆ ಈಗ ಲಾಕ್​​ಡೌನ್ ತೆರವು ಮಾಡಲಾಗ್ತಾ ಇದೆ. ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ಕೊಡಲಾಗ್ತಾ ಇದೆ. ಈ ನಡುವೆ, ಮುಂಬೈನಲ್ಲಿ ಮಳೆಯಿಂದ ಒಂದೆರಡು ದಿನ ಪ್ರಾಬ್ಲಮ್ ಆಗಿತ್ತು. ಆದ್ರೆ ಚೇತರಿಕೆಯ ಹಾದಿ ಹಿಡೀತಾ ಇತ್ತು. ಮಹಾರಾಷ್ಟ್ರದಲ್ಲಿ ಎರಡನೇ ಅಲೆ ಮೊದಲು ಅಬ್ಬರ ತೋರಿಸಿತ್ತಾದರೂ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಸಕಾಲಿಕ ಕ್ರಮದಿಂದ ಹೆಚ್ಚಿನ ಅನಾಹುತ ತಪ್ಪಿತ್ತು. ಮೊದಲೇ ಲಾಕ್​ಡೌನ್ ಘೋಷಣೆ ಮಾಡಿ, ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿ ಕೊರೊನಾ ಕಂಟ್ರೋಲ್ ಮಾಡಿತ್ತು ಮಹಾರಾಷ್ಟ್ರ ಸರ್ಕಾರ.

ಆದ್ರೆ ಮುಂಬೈನಲ್ಲಿ ಲಾಕ್ ಡೌನ್ ಮಾಡಿದ ತಕ್ಷಣ ಲಕ್ಷಾಂತರ ಜನ ಗ್ರಾಮಾಂತರ ಪ್ರದೇಶಗಳಿಗೆ ವಲಸೆ ಹೋಗಿದ್ದರಿಂದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಮೂರನೇ ಅಲೆ ಜೋರಾಗಿಯೇ ಇತ್ತು. ಈಗ ಮಹಾರಾಷ್ಟ್ರದ ಬಹುತೇಕ ಕಡೆ ಕೊರೊನಾ ಕಂಟ್ರೋಲ್ ಆಗಿದೆ. ಹೀಗಾಗಿ ಹಂತ ಹಂತವಾಗಿ ಠಾಕ್ರೆ ಸರ್ಕಾರ ಅನ್ ಲಾಕ್ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಅಷ್ಟರಲ್ಲಾಗಲೇ ಮಹಾರಾಷ್ಟ್ರದಲ್ಲಿ ತಜ್ಞರು ಎಚ್ಚರಿಕೆ ಸಂದೇಶ ರವಾನಿಸಿ ಬಿಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ 3ನೇ ಅಲೆ ಅಪ್ಪಳಿಸುವ ಬಗ್ಗೆ ಈಗಲೇ ಎಚ್ಚರಿಕೆ
ಮುಂದಿನ ನಾಲ್ಕು ವಾರಗಳಲ್ಲೇ ಮತ್ತೆ ಕೊರೊನಾ ಏರುಗತಿ ಸಾಧ್ಯತೆ
ಮಹಾರಾಷ್ಟ್ರ ಸರ್ಕಾರಕ್ಕೆ ಕೋವಿಡ್ ಕಾರ್ಯಪಡೆ ಗಂಭೀರ ಸಂದೇಶ

ಮುಂಬೈ ಮಹಾನಗರ ಕೊರೊನಾದಿಂದ ಚೇತರಿಸಿಕೊಂಡಿದೆ. ಏಷ್ಯಾದಲ್ಲೇ ಅತಿ ದೊಡ್ಡ ಸ್ಲಂ ಧಾರಾವಿಯಲ್ಲೂ ಕೂಡ ಕೊರೊನಾ ಕಂಪ್ಲೀಟ್ ಕಂಟ್ರೋಲ್ ಆಗಿದೆ. ಮುಂಬೈನಲ್ಲಿ ನೂರರ ಲೆಕ್ಕದಲ್ಲಿ ಹೊಸ ಕೇಸ್​ಗಳು ಬರ್ತಾ ಇದ್ದರೂ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಅಷ್ಟೇ ಅಲ್ಲ, ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಹೀಗಾಗಿ ಮಹಾರಾಷ್ಟ್ರ ನಿಟ್ಟುಸಿರುಬಿಟ್ಟಿದೆ. ಅಷ್ಟರಲ್ಲಾಗಲೇ ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಅಪ್ಪಳಿಸುವ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮುಂದಿನ ಮೂರು ತಿಂಗಳಲ್ಲೋ ಆರು ತಿಂಗಳಲ್ಲೋ ಮೂರನೇ ಅಲೆ ಬರಬಹುದು ಅಂತ ಅಂದಾಜು ಮಾಡಲಾಗಿತ್ತು. ಆದರೆ, ಮಹಾರಾಷ್ಟ್ರ ಕೋವಿಡ್ ಕಾರ್ಯಪಡೆ ಈಗ ಕೊಟ್ಟಿರುವ ವರದಿಯಲ್ಲಿ ಮುಂದಿನ ನಾಲ್ಕೇ ನಾಲ್ಕು ವಾರಗಳಲ್ಲಿ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ. ಅಂದರೆ, ಮತ್ತೆ ಒಂದೇ ತಿಂಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿ ಕಾಣುವ ಸಾಧ್ಯತೆ ಹೆಚ್ಚಿದೆ ಅಂತಾನೇ ಹೇಳಲಾಗ್ತಿದೆ. ತಜ್ಞರು ಅಂದಾಜು ಮಾಡಿರುವಂತೆ ಮೂರನೇ ಅಲೆ ಅಪ್ಪಳಿಸಿ ಬಿಟ್ಟರೆ ಅದು ಮತ್ತೆ ಕಂಟಕವಾಗಲಿದೆ.

ಎರಡನೇ ಅಲೆಗಿಂತ ಭೀಕರವಾಗಿರುತ್ತಾ ಕೊರೊನಾ 3ನೇ ಅಲೆ
2ನೇ ಅಲೆಗಿಂತ 3ನೇ ಅಲೆಯಲ್ಲಿ ದುಪ್ಪಟ್ಟು ಕೇಸ್ ದಾಖಲಾಗುತ್ತಾ?
ಮಹಾರಾಷ್ಟ್ರದಲ್ಲಿ ತಜ್ಞರು ಕೊಟ್ಟ ವರದಯಲ್ಲಿ ಏನು ಹೇಳಿದ್ದಾರೆ?

ಮಹಾರಾಷ್ಟ್ರದಲ್ಲಿ ತಜ್ಞರು ಕೊಟ್ಟಿರುವ ವರದಿಯಲ್ಲಿ ಆಘಾತಕಾರಿ ಅಂಶಗಳನ್ನು ಉಲ್ಲೇಖಿಸಲಾಗಿದೆ. ತಜ್ಞರ ಪ್ರಕಾರ ಕೊರೊನಾ ಎರಡನೇ ಅಲೆಗಿಂತ ಮೂರನೇ ಅಲೆ ಹೆಚ್ಚು ದುಷ್ಪರಿಣಾಮ ಬೀರಲಿದೆಯಂತೆ. ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ 2ರಿಂದ 3ಪಟ್ಟು ಕೇಸ್ ಹೆಚ್ಚಿನ ಕೇಸ್​ಗಳು ದಾಖಲಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಮೂರನೇ ಅಲೆಯಲ್ಲಿ ಕೊರೊನಾ ಮತ್ತಷ್ಟು ವೇಗವಾಗಿ ಹರಡುವ ಸಾಧ್ಯತೆಯೂ ಹೆಚ್ಚಾಗಿದೆ ಎನ್ನಲಾಗ್ತಾ ಇದೆ. ಹೀಗಾದರೆ ಮುಂಬೈನಂತಹ ಮಹಾನಗರದಲ್ಲಿ ಕೊರೊನಾ ಕಂಟ್ರೋಲ್ ಮಾಡಲು ಮತ್ತೆ ಲಾಕ್​​ಡೌನ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಅಷ್ಟೇ ಅಲ್ಲ ತಜ್ಞರು ಕೊಟ್ಟಿರುವ ವರದಿಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಮೂರನೇ ಅಲೆಯಲ್ಲಿ ಮತ್ತಷ್ಟು ರೂಪಾಂತರಿ ವೈರಸ್ ಕಾಡುತ್ತಾ?
3ನೇ ಅಲೆಯಲ್ಲಿ ಡೆಲ್ಟಾನೋ, ಡೆಲ್ಟಾ ಪ್ಲಸ್ಸೋ, ಮತ್ತಷ್ಟು ರೂಪಾಂತರವೊ?

ಎರಡನೇ ಅಲೆ ದೇಶವಾಸಿಗಳಿಗೆ ಕೊಟ್ಟ ಆಘಾತ ಅಷ್ಟಿಷ್ಟಲ್ಲ. ಮೊದಲನೇ ಅಲೆಯಲ್ಲಿ ಕೊರೊನಾ ಎರಡನೇ ಅಲೆಯಷ್ಟು ಆಘಾತ ತಂದಿರಲಿಲ್ಲ. ಆದರೆ ಎರಡನೇ ಅಲೆ ಗರಿಷ್ಠ ಮಟ್ಟಕ್ಕೆ ತಲುಪಿದಾಗ ಅನೇಕ ಕಡೆ ಬೆಡ್​​ಗಾಗಿ, ಆಕ್ಸಿಜನ್​ಗಾಗಿ, ರೆಮ್​​ಡಿಸಿವಿರ್​​ಗಾಗಿ ಹಾಹಾಕಾರ ಎದ್ದಿತ್ತು. ಎರಡನೇ ಅಲೆಯಲ್ಲಿವಯಸ್ಸಿನ ಬೇಧ ಭಾವ ಇಲ್ಲದೆ ಜನ ಸಾವನ್ನಪ್ಪಿದ್ರು. ವೈರಸ್ ರೂಪಾಂತರಿಯಾದ ಕಾರಣ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿತ್ತು. ದೇಶ-ವಿದೇಶಗಳಿಂದ ಆಕ್ಸಿಜನ್ ತರಿಸಿಕೊಳ್ಳುವಂತಾಯ್ತು. ವೈದ್ಯಕೀಯ ಸಲಕರಣೆಗಳನ್ನು ತರಿಸಿಕೊಳ್ಳುವಂತಾಯ್ತು. ಈಗ ಎರಡನೇ ಅಲೆ ಭೀಕರತೆ ಮಾಯವಾಗಿದೆ. ಆದ್ರೆ, ಮೂರನೇ ಅಲೆಯ ಎಚ್ಚರಿಕೆ ಈಗಲೇ ಬಂದಿದೆ.

ಈಗ ಇರುವ ಆತಂಕ ಅಂದ್ರೆ ಮೂರನೇ ಅಲೆಯಲ್ಲಿ ಇನ್ನೆಷ್ಟು ರೂಪಾಂತರಿ ವೈರಸ್ ಅಟ್ಯಾಕ್ ಆಗಿ ಅದೆಷ್ಟು ಗಂಡಾಂತರ ತಂದುಬಿಡುತ್ತೋ ಅನ್ನೋದು. ಈಗ ಡೆಲ್ಟಾ, ಡೆಲ್ಟಾ ಪ್ಲಸ್ ಅಂತೆಲ್ಲ ರೂಪಾಂತರಿ ವೈರಸ್​ಗಳನ್ನು ಗುರುತಿಸಲಾಗಿದ್ದು, ಡೆಲ್ಟಾ ಪ್ಲಸ್ ಹೆಚ್ಚು ಅಪಾಯಕಾರಿ ಅಂತಾನೇ ಹೇಳಲಾಗ್ತಾ ಇದೆ. ಇದರ ಜೊತೆಗೆ ಇನ್ನೆಷ್ಟು ರೂಪಾಂತರಿ ವೈರಸ್ ಕಾಣಸಿಕೊಳ್ಳುತ್ತೋ ಗೊತ್ತಿಲ್ಲ. ಹೀಗಾಗಿ ಮೂರನೇ ಅಲೆ ಅಪ್ಪಳಿಸುತ್ತೆ ಅನ್ನೋ ಎಚ್ಚರಿಕೆಯೇ ಭೀತಿ ತಂದಿದೆ.

ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಇಷ್ಟು ಬೇಗ ಯಾಕೆ ಬರ್ತಿದೆ?
ತಜ್ಞರು ಕೊಟ್ಟ ವರದಿಯಲ್ಲಿರುವ ಮಹತ್ವದ ಅಂಶಗಳ್ಯಾವುದು?

ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಮೂರರಿಂದ ನಾಲ್ಕೇ ವಾರಗಳಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಅಂತ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಯಾಕೆ ಇಷ್ಟೊಂದು ಬೇಗ ಮೂರನೇ ಅಲೆ ಬರ್ತಾ ಇದೆ ಅಂದುಕೊಂಡ್ರೆ ಅದಕ್ಕೆ ನಿಖರವಾದ ಕಾರಣಗಳನ್ನು ತಜ್ಞರು ಕೊಟ್ಟಿದ್ದಾರೆ. ಅನ್ ಲಾಕ್ ಪ್ರಕ್ರಿಯೆ ಬಳಿಕ ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕಡೆ ಓಡಾಡ್ತಾ ಇದಾರೆ. ಅಷ್ಟೇ ಅಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕೂಡ ಮಾಯವಾಗಿದೆ. ಅನೇಕರು ಮಾಸ್ಕ್ ಕೂಡ ಧರಿಸುತ್ತಿಲ್ಲ. ಎರಡನೇ ಅಲೆ ತಗ್ಗಿದ ಮೇಲೆ ಮತ್ತೆ ಜನ ಕೊರೊನಾ ಮರೆತಂತೆ ನಡೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಇದರಿಂದಾಗಿ ಈಗಾಗಲೇ ಇರುವ ಸಕ್ರಿಯ ಪ್ರಕರಣಗಳಿಂದ ಮತ್ತೆ ನಿಧಾನವಾಗಿ ಕೊರೊನಾ ಹೊಸ ಕೇಸ್ ಗಳ ಸಂಖ್ಯೆ ಏರುಗತಿ ಕಾಣಬಹುದು ಎಂದು ಮಹಾರಾಷ್ಟ್ರದಲ್ಲಿ ತಜ್ಞರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಎಷ್ಟೇ ನಿಯಮಗಳನ್ನು ಜಾರಿಗೆ ತಂದಿದ್ರೂ ಕೂಡ ಜನ ಮಾತ್ರ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಮುನ್ನೆಚ್ಚರಿಕೆ ಮರೆತ ಕಾರಣ ಮತ್ತೆ ಮುಂಬೈನಂತಹ ಮಹಾನಗರಗಳಲ್ಲಿ ಆತಂಕ ಮರುಕಳಿಸ್ತಾ ಇದೆ. ಅಷ್ಟೇ ಅಲ್ಲದೆ, ಲಾಕ್​​ಡೌನ್ ವೇಳೆ ವಲಸೆ ಹೋಗಿದ್ದ ಲಕ್ಷಾಂತರ ಜನ ಮತ್ತೆ ಮಹಾನಗರಿಯತ್ತ ಬರ್ತಾ ಇದ್ದಾರೆ. ಹೀಗಾಗಿ ಕೊರೊನಾ ಮತ್ತೆ ಆರ್ಭಟಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಕರ್ನಾಟಕದಲ್ಲೂ ಮುಂದೆ ಮಹಾರಾಷ್ಟ್ರದ ಹಾಗೇ ಆಗಿಬಿಡುತ್ತಾ?
ಮುನ್ನೆಚ್ಚರಿಕೆ ಮರೆತರೆ ಇಲ್ಲಿಯೂ ಬೇಗ 3ನೇ ಅಲೆ ಅಪ್ಪಳಿಸುತ್ತಾ?

ಈ ಹಿಂದೆಯೂ ಕೂಡ ಹೀಗೆಯೇ ಆಗಿತ್ತು. ಮುಂಬೈ, ದೆಹಲಿಯಲ್ಲಿ ಕೊರೊನಾ ಗರಿಷ್ಠ ಮಟ್ಟಕ್ಕೆ ತಲುಪ್ತಾ ಇತ್ತು. ಆದ್ರೆ ಕರ್ನಾಟಕದಲ್ಲಿ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಯಾವಾಗ ಕೊರೊನಾ ಆರ್ಭಟಿಸಲು ಶುರುವಾಯ್ತೋ ಆಗ ಇಲ್ಲಿ ಲಾಕ್​​ಡೌನ್ ಮಾಡಿ ಕಂಟ್ರೋಲ್ ಮಾಡೋದಕ್ಕೆ ಪ್ರಯತ್ನ ಮಾಡಲಾಯ್ತು. ಕರ್ನಾಟಕದಲ್ಲಿ ಎರಡನೇ ಅಲೆ ಆರ್ಭಟಿಸಿದಾಗ ಬೆಡ್​ಗಾಗಿ, ಆಕ್ಸಿಜನ್ಗಾಗಿ ಜನ ಎಷ್ಟು ಪರದಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತಿದೆ. ಲಾಕ್​ಡೌನ್ ಪರಿಣಾಮದಿಂದ ಕೊರೊನಾ ಈಗ ರಾಜ್ಯದಲ್ಲಿ ಸಾಕಷ್ಟು ಕಂಟ್ರೋಲ್ ಆಗಿದೆ. ನಿತ್ಯ 5 ಸಾವಿರದ ಆಸುಪಾಸಿನಲ್ಲಿ ಕೇಸ್​ಗಳು ಬರ್ತಾ ಇದೆಯಾದ್ರೂ ಪಾಸಿಟಿವಿಟಿ ಶೇಕಡಾ 3.77ಕ್ಕೆ ಇಳಿದಿದೆ. ಹೀಗಾಗಿ ಜೂನ್ 21ರ ಬಳಿಕ ಹೆಚ್ಚು ಕಡಿಮೆ ಎಲ್ಲಾ ಚಟುವಟಿಕೆಗಳಿಗೂ ಎಲ್ಲಾ ಕಡೆ ಅವಕಾಶ ಮಾಡಿಕೊಡುವುದು ಪಕ್ಕಾ ಆಗಿದೆ. ಆದರೆ, ಒಮ್ಮೆಲೆ ಜನದಟ್ಟಣೆ ಶುರುವಾದ್ರೆ ಕಂಟ್ರೋಲ್ ಮಾಡೋದು ಹೇಗೆ ಅನ್ನೋದೇ ಪ್ರಶ್ನೆಯಾಗಿದೆ. ಬಸ್ ಸಂಚಾರ ಶುರುವಾಗಿಬಿಟ್ಟರೆ ಜನರನ್ನು ನಿಯಂತ್ರಿಸೋದು ಬಹಳ ಕಷ್ಟವಾಗಲಿದೆ. ಈ ಹಿಂದೆಯೂ ಮುನ್ನೆಚ್ಚರಿಕೆ ಮರೆತ ಕಾರಣದಿಂದಲೇ ಎರಡನೇ ಅಲೆ ಆಘಾತ ಕೊಟ್ಟಿತ್ತು. ಆದರೆ, ಮುಂದೆಯೂ ಹೀಗಾಗಬಾರದು ಅಂದ್ರೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಲೇಬೇಕು. ಇಲ್ಲವಾದರೆ ಮತ್ತೆ ಒಂದೊಂದೇ ರಾಜ್ಯಕ್ಕೆ ಕೊರೊನಾ ಮೂರನೇ ಅಲೆ ಅಪ್ಪಳಿಸಲಿದೆ.

ದೇಶದಲ್ಲಿ ಹಾಲಿ ಪಾಸಿಟಿವಿಟಿ ದರ ಶೇಕಡಾ 3.24ಕ್ಕೆ ಇಳಿಕೆ
ಪ್ರತಿ ನಿತ್ಯ ಬರ್ತಾ ಇರುವ ಕೇಸ್ ಗಳ ಸಂಖ್ಯೆಯಲ್ಲೂ ಇಳಿಕೆ

ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಕಳೆದ ಹನ್ನೊಂದು ದಿನಗಳಿಂದ ಪಾಸಿಟಿವಿಟಿ ದರ ನಿರಂತರವಾಗಿ ಶೇಕಡ 5ಕ್ಕಿಂತ ಕಡಿಮೆ ದಾಖಲಾಗ್ತಾ ಇದೆ. ಹಾಲಿ ಪಾಸಿಟಿವಿಟಿ ರೇಟ್‌ ಶೇ 3.24ರಷ್ಟಿದೆ . ಇನ್ನು ನಿತ್ಯ ಬರ್ತಾ ಇರುವ ಹೊಸ ಕೇಸ್​ಗಳ ಸಂಖ್ಯೆ ಕೂಡ ಕಡಿಮೆ ಆಗಿದೆ. ಕಳೆದ 24 ಗಂಟೆಗಳಲ್ಲಿ 62,480 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಮಾತ್ರ ದಾಖಲಾಗಿವೆ. ಇದು ಕಳೆದ 61 ದಿನಗಳಲ್ಲಿ ದಾಖಲಾದ ಅತಿ ಕಡಿಮೆ ಕೊರೊನಾ ಸೋಂಕಿನ ಪ್ರಕರಣಗಳಾಗಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಇಳಿದಿದ್ದು ಹಾಲಿ 7,98,656 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವೆಲ್ಲ ಸ್ವಲ್ಪ ಸಮಾಧಾನ ತರುವ ಸಂಗತಿ. ಆದ್ರೆ ಮೂರನೇ ಅಲೆ ಹೆಚ್ಚು ಆಘಾತ ನೀಡದಂತೆ ಆದಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲೇಬೇಕಾಗಿದೆ. ಮತ್ತೆ ಒಂದೊಂದೇ ಕಡೆಗಳಲ್ಲಿ ಕೊರೊನಾ ಅಬ್ಬರಿಸತೊಡಗಿದರೆ ಮತ್ತೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಎರಡನೇ ಅಲೆ ಕಡಿಮೆ ಆಗ್ತಾ ಇದ್ದಂತೆಯೇ ಮೂರನೇ ಅಲೆ ಬಗ್ಗೆ ಆತಂಕ ಶುರುವಾಗಿದೆ. ಮುನ್ನೆಚ್ಚರಿಕೆ ಮರೆತರೆ ಮತ್ತೆ ಕೊರೊನಾ ಆಘಾತ ತರಬಹುದು. ಅನ್ ಲಾಕ್ ಆದ ಮೇಲೆಯೂ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ರೆ ಅಪಾಯ ಮಾತ್ರ ತಪ್ಪಿದ್ದಲ್ಲ.

The post ಮಹಾರಾಷ್ಟ್ರದಲ್ಲಿ 3ನೇ ಅಲೆ ಬಗ್ಗೆ ಈಗಲೇ ಎಚ್ಚರಿಕೆ.. ತಜ್ಞರ ವರದಿಯಲ್ಲಿ ಏನಿದೆ? appeared first on News First Kannada.

Source: newsfirstlive.com

Source link