ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಕೃಷ್ಣಾ, ದೂದಗಂಗಾ, ವೇದಗಂಗಾ ನದಿಯ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಪ್ರವಾಹದ ಆತಂಕ ಎದುರಾಗಿದೆ.

ನಿನ್ನೆಗಿಂತ ಇಂದು ಕೃಷ್ಣಾ ನದಿ ನೀರಿನ ಒಳ ಹರಿವಿನಲ್ಲಿ ಏರಿಕೆಯಾಗಿದ್ದು, ನೀರಿನ ಒಳ ಹರಿವಿನಲ್ಲಿ 9 ಸಾವಿರ ಕ್ಯೂಸೆಕ್ ಹೆಚ್ಚಳವಾಗಿದೆ. ನಿನ್ನೆ 54 ಸಾವಿರ ಕ್ಯೂಸೆಕ್ ಇದ್ದ ನೀರಿನ ಪ್ರಮಾಣ, ಇಂದು 63 ಸಾವಿರ ಕ್ಯೂಸೆಕ್‍ಗೆ ಏರಿಕೆಯಾಗಿದೆ.

ನಿನ್ನೆಯಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಆರಂಭವಾಗಿದ್ದು, ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶಗಳಾದ ಕೊಯ್ನಾದಲ್ಲಿ 109 ಎಂಎಂ, ನವಜಾದಲ್ಲಿ 148 ಎಂಎಂ, ರಾಧಾನಗರಿಯಲ್ಲಿ 130 ಎಂಎಂ ಹಾಗೂ ಮಹಾಬಲೇಶ್ವರದಲ್ಲಿ 140 ಎಂಎಂ ನಷ್ಟು ಮಳೆ ದಾಖಲಾಗಿದೆ.

ಮಹಾರಾಷ್ಟ್ರದಲ್ಲಿ ಭಾರೀ ಮಳೆಯ ಕಾರಣ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೆಳ ಹಂತದ ಚಿಕ್ಕೋಡಿ ತಾಲೂಕಿನ ಯಡೂರು – ಕಲ್ಲೋಳ ಸೇತುವೆ ಮುಳುಗಡೆ ಯಥಾಸ್ಥಿತಿ ಮುಂದುವರೆದಿದೆ. ಚಿಕ್ಕೋಡಿ ಭಾಗದಲ್ಲಿ 10 ಎಂಎಂ ನಷ್ಟು ಮಳೆಯ ಪ್ರಮಾಣ ದಾಖಲಾಗಿದೆ. ಸದ್ಯ ಯಾವುದೇ ಪ್ರವಾಹದ ಆತಂಕ ಇಲ್ಲ ಎಂದು ಬೆಳಗಾವಿ ಜಿಲ್ಲಾಡಳಿತದ ಸ್ಪಷ್ಟನೆ ನೀಡಿದೆ.

The post ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಭಾರೀ ಮಳೆ- ಪ್ರವಾಹ ಭೀತಿ appeared first on Public TV.

Source: publictv.in

Source link