ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಹಿಂಸಾಚಾರ; 35 ಜನರನ್ನು ಬಂಧಿಸಿದ ಪೊಲೀಸ್ | Maharashtra violence Police have so far arrested 35 people in Nanded situation is peaceful


ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಹಿಂಸಾಚಾರ; 35 ಜನರನ್ನು ಬಂಧಿಸಿದ ಪೊಲೀಸ್

ಮಹಾರಾಷ್ಟ್ರದಲ್ಲಿ ಹಿಂಸಾಚಾರ

ನಾಂದೇಡ್: ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರದ (communal violence in Tripura) ವಿರುದ್ಧ ಎರಡು ದಿನಗಳ ಹಿಂದೆ ಹಿಂಸಾಚಾರ ಭುಗಿಲೆದ್ದ ನಂತರ ಮಹಾರಾಷ್ಟ್ರದ (Maharashtra) ನಾಂದೇಡ್ (Nanded) ಜಿಲ್ಲೆಯಲ್ಲಿ ಪೊಲೀಸರು ಇದುವರೆಗೆ 35 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಪ್ರಸ್ತುತ ನಾಂದೇಡ್‌ನಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ. ಶುಕ್ರವಾರ ಪೊಲೀಸ್ ವ್ಯಾನ್‌ಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ಸಂದರ್ಭದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಅವರು ಹೇಳಿದರು.  ವಜೀರಾಬಾದ್ ಪ್ರದೇಶ ಮತ್ತು ನಾಂದೇಡ್ ನಗರದ ದೆಗ್ಲೂರ್ ನಾಕಾದಲ್ಲಿ ಹಿಂಸಾಚಾರ ನಡೆದಿದ್ದು, ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  “ಘಟನೆಗೆ ಸಂಬಂಧಿಸಿದಂತೆ ನಾಂದೇಡ್‌ನಲ್ಲಿ ನಾಲ್ಕು ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ. ನಾಂದೇಡ್ ಪೊಲೀಸರು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 35 ಜನರನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಶಾಂತಿಯುತವಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ಶೆವಾಲೆ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಸಾರ್ವಜನಿಕ ಆಸ್ತಿ ಹಾನಿ ಸೇರಿದಂತೆ ವಿವಿಧ ಅಪರಾಧಗಳ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಅಮರಾವತಿ, ನಾಂದೇಡ್, ಮಾಲೆಗಾಂವ್ (ನಾಸಿಕ್), ವಾಶಿಮ್ ಮತ್ತು ಯವತ್ಮಾಲ್‌ನ ವಿವಿಧ ಸ್ಥಳಗಳಲ್ಲಿ ಶುಕ್ರವಾರ ತ್ರಿಪುರಾದಲ್ಲಿ ಕೋಮು ಹಿಂಸಾಚಾರವನ್ನು ವಿರೋಧಿಸಿ ಕೆಲವು ಮುಸ್ಲಿಂ ಸಂಘಟನೆಗಳು ನಡೆಸಿದ ರ್ಯಾಲಿಗಳಲ್ಲಿ ಕಲ್ಲು ತೂರಾಟಗಳು ನಡೆದಿವೆ.

ಶನಿವಾರ ಅಮರಾವತಿ ನಗರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ನಡೆಸಿದ ರ್ಯಾಲಿಗಳನ್ನು ವಿರೋಧಿಸಿ ಬಿಜೆಪಿ ಆಯೋಜಿಸಿದ್ದ ಬಂದ್‌ನಲ್ಲಿ ಗುಂಪೊಂದು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಕರ್ಫ್ಯೂ ವಿಧಿಸಲಾಯಿತು.  ನೂರಾರು ಜನರು ಕೈಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಶನಿವಾರ ಬೆಳಿಗ್ಗೆ ರಾಜಕಮಲ್ ಚೌಕ್ ಪ್ರದೇಶದಲ್ಲಿ ಬೀದಿಗಿಳಿದಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈದ್ಯಕೀಯ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಅಮರಾವತಿಯಲ್ಲಿ ಜನರು ತಮ್ಮ ಮನೆಗಳಿಂದ ಹೊರಗೆ ಬರಲು ಅನುಮತಿಸಲಾಗುವುದಿಲ್ಲ ಮತ್ತು ಪೊಲೀಸರ ಆದೇಶದ ಪ್ರಕಾರ ಐದಕ್ಕಿಂತ ಹೆಚ್ಚು ಜನರ ಸಭೆಯನ್ನು ಅನುಮತಿಸಲಾಗುವುದಿಲ್ಲ.

ತ್ರಿಪುರಾದಲ್ಲಿ ಮುಸ್ಲಿಂ ಸಮುದಾಯದ ಮೇಲಿನ ಹಿಂಸಾಚಾರವನ್ನು ಪ್ರತಿಭಟಿಸಿ ರಾಜ್ಯದಲ್ಲಿ ನಡೆಸಲಾದ ಮೆರವಣಿಗೆಗಳು ಕೆಲವು ಸ್ಥಳಗಳಲ್ಲಿ ಹಿಂಸಾತ್ಮಕ ತಿರುವು ಪಡೆದಿವೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆಪಾಟೀಲ್ ಶುಕ್ರವಾರ ಹೇಳಿದ್ದಾರೆ.

ಮಹಾರಾಷ್ಟ್ರದ ಜನರು ಶಾಂತಿ ಕಾಪಾಡುವಂತೆ ಮತ್ತು ವದಂತಿಗಳನ್ನು ನಂಬಬೇಡಿ ಎಂದು ಅವರು ಮನವಿ ಮಾಡಿದರು.ಅದೇ ವೇಳೆ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ಸಹೋದರಿಯ ರಾಜಕೀಯ ಪ್ರವೇಶ ಘೋಷಿಸಿದ ನಟ ಸೋನು ಸೂದ್, ಯಾವ ಪಕ್ಷಕ್ಕೆ ಎಂಬುದು ಶೀಘ್ರದಲ್ಲೇ ನಿರ್ಧಾರ

TV9 Kannada


Leave a Reply

Your email address will not be published. Required fields are marked *